ಮೈಸೂರು: ರವಿ ಹಂಜ್ ಅವರ ವಿವಾದಿತ ‘?’ಬಸವ ಮಂಟಪ’?’ ಪುಸ್ತಕದ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದು, ಬಸವಣ್ಣನವರಿಗೆ ಹೇಳೋರು-ಕೇಳೋರು ಇಲ್ಲ ಎಂಬ ಕೆಲವರ ಅಹಂಗೆ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮಹಾತ್ಮರು ಹಾಗೂ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಲೇಖಕ ರವಿ ಹಂಜ್ ತಮ್ಮ ಕೀಳು ಪ್ರಚಾರಕ್ಕಾಗಿ ಮಹಾತ್ಮರನ್ನು ಕೆಟ್ಟದಾಗಿ ಟೀಕಿಸುವ ಕೆಲಸ ಮಾಡಿದ್ದಾರೆ. 2007ರಲ್ಲೂ ಬಸವಣ್ಣನವರ ಹುಟ್ಟಿನ ಮೂಲವನ್ನು ಪ್ರಶ್ನಿಸಿ ಅವಮಾನಿಸಲಾಗಿತ್ತು. ಬಸವಣ್ಣನವರು ಎಲ್ಲಾ ಜಾತಿಗಳಿಗೂ ಆದರ್ಶವಾಗಿದ್ದಾರೆ. ಅವರ ಕಾರಣದಿಂದಲೇ ಸಾವಿರಾರು ಮಠಗಳು ಹುಟ್ಟಿಕೊಂಡಿದ್ದು, ಈ ಮಠಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿದಿದೆ. ಇಂದು ಸರ್ಕಾರಕ್ಕೂ ಸವಾಲು ಹಾಕುವ ರೀತಿಯಲ್ಲಿ ಮಠಗಳು ಸಾಮಾಜಿಕ ಸೇವೆಯಲ್ಲಿ ತೊಡಗಿವೆ ಎಂದು ಹೇಳಿದರು.
ಮಹಾತ್ಮರ ಬಗ್ಗೆ ಕೀಳಾಗಿ ಮಾತನಾಡುವ ಹಾಗೂ ಬರೆಯುವವರ ವಿರುದ್ಧ ಕಾನೂನಿನ ಕುಣಿಕೆ ಬಿಗಿಯಾಗಬೇಕು. ನಮ್ಮ ದೇವಾನುದೇವತೆಗಳನ್ನು ಅವಮಾನಿಸುವುದು ಕೆಲವರಿಗೆ ಅಭ್ಯಾಸವಾಗಿದೆ. ಮೈಸೂರಿನಲ್ಲಿ ಕೆಲವರು ರಾಕ್ಷಸನನ್ನು ದೈವ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ.
ಬೇರೆ ಧರ್ಮಗಳ ಬಗ್ಗೆ ಹೀಗೆ ಮಾತನಾಡಿದರೆ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ; ಆದರೆ ಹಿಂದೂ ಧರ್ಮಕ್ಕೆ ಹೇಳುವವರು, ಕೇಳುವವರು ಯಾರೂ ಇಲ್ಲ ಎನ್ನುವಂತಾಗಿದೆ. ನಮ್ಮ ಧರ್ಮದಲ್ಲಿನ ಕೆಲ ಅವಿವೇಕಿಗಳೇ ನಮ್ಮ ನಂಬಿಕೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಕಿಡಿಕಾರಿದರು. ಮಹಾತ್ಮರು ಮತ್ತು ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡುವುದನ್ನು ತಡೆಯಲು ಹೊಸ ಕಾನೂನು ರಚನೆಯಾಗಬೇಕು ಎಂದು ಒತ್ತಾಯಿಸಿದರು.
