ಬೆಂಗಳೂರು, ನ. 23- ಕಳೆದ ಒಂದು ವಾರದಿಂದ ನಿರಂತರವಾಗಿ ಕುಸಿದು ವರ್ತಕರ ನಿದ್ದೆಗೆಡಿಸಿದ್ದ ಚಿನ್ನದ ದರದಲ್ಲಿ ಇಂದು ಅಲ್ಪ ಪ್ರಮಾಣದ ಚೇತರಿಕೆ ಕಂಡುಬಂದಿದೆ. ಆದರೆ, ಬೆಳ್ಳಿ ದರದಲ್ಲಿ ಯಾವುದೇ ಏರಿಳಿತವಿಲ್ಲದೆ ಸ್ಥಿರತೆ ಮುಂದುವರಿದಿದೆ. ಕಳೆದ ಎರಡು ವಾರಗಳಲ್ಲಿ ಶುದ್ಧ ಚಿನ್ನದ ದರ ಪ್ರತಿ ಗ್ರಾಂಗೆ 2 ಸಾವಿರ ರೂ.ಗೂ ಹೆಚ್ಚು ಕುಸಿತವಾಗಿತ್ತು.
ನ. 10ರ ನಂತರ ಸತತ ಮೂರು ವಾರಗಳ ಕಾಲ ಚಿನ್ನದ ದರದಲ್ಲಿ ಭಾರಿ ಇಳಿಕೆ ಕಂಡುಬಂದಿತ್ತು. ದಾಖಲೆ ಪ್ರಮಾಣದಲ್ಲಿ ಬೆಲೆ ಕುಸಿದಿದ್ದರಿಂದ ಆಭರಣ ಪ್ರಿಯರು ಖುಷಿಪಡುವಂತಾಗಿತ್ತು. ಆದರೆ, ಆಭರಣ ಮಾರಾಟಗಾರರಿಗೆ ಬೆಲೆ ಕುಸಿತ ಕಂಗಾಲಾಗುವಂತೆ ಮಾಡಿತ್ತು.
ಒಂದೆಡೆ ಆಹಾರಧಾನ್ಯ ಸೇರಿದಂತೆ ನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿ ಗ್ರಾಹಕರಿಗೆ ಹೊರೆಯಾಗಿದ್ದರೆ, ಚಿನ್ನ ಮತ್ತು ಬೆಳ್ಳಿ ದರಗಳ ಕುಸಿತ ಶ್ರೀಸಾಮಾನ್ಯರಿಗೆ ಸಮಾಧಾನ ತಂದಿತ್ತು. ನ. 14ರಂದು ಮಾತ್ರ 27 ರೂ. ಏರಿಕೆಯಾಗಿತ್ತು.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 148 ರೂ. ಏರಿಕೆಯಾಗಿದ್ದು, ಪ್ರಸ್ತುತ 12,656 ರೂ.ನಷ್ಟಿದೆ. 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 135 ರೂ. ಹೆಚ್ಚಳವಾಗಿ 11,600 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 110 ರೂ. ಏರಿಕೆಯಾಗಿದ್ದು, ಪ್ರಸ್ತುತ 9,491 ರೂ.ನಷ್ಟಿದೆ.
ಕಳೆದ ಆಗಸ್ಟ್ ಕೊನೆಯ ವಾರದಲ್ಲಿ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 16 ಸಾವಿರ ರೂ.ನಷ್ಟಿತ್ತು. ಅಕ್ಟೋಬರ್ನಲ್ಲಿ 15 ಸಾವಿರ ರೂ.ಗೆ ಇಳಿಕೆಯಾಗಿತ್ತು. ನವೆಂಬರ್ 5ರ ನಂತರ ನಿರಂತರವಾಗಿ ಕುಸಿಯುತ್ತಾ ಬಂದಿದ್ದ ಚಿನ್ನದ ದರ ವಾರದ ಮೊದಲ ದಿನವೇ ಚೇತರಿಕೆ ಕಂಡಿದೆ. ಚಿನ್ನದಂತೆ ಪ್ಲಾಟಿನಂ ಆಭರಣದ ದರವೂ 10 ಗ್ರಾಂಗೆ 340 ರೂ. ಏರಿಕೆಯಾಗಿದ್ದು, 38,900 ರೂ.ನಷ್ಟಿದೆ.
ಇನ್ನು, ಬೆಳ್ಳಿ ದರ ಕಳೆದ ಎರಡು ವಾರಗಳಲ್ಲಿ 30 ಸಾವಿರ ರೂ. ಕಡಿಮೆಯಾಗಿದ್ದು, ಪ್ರಸ್ತುತ ಪ್ರತಿ ಕೆ.ಜಿ. ಬೆಳ್ಳಿಗೆ 1,75,000 ರೂ. ಇದೆ. ನ. 20ರಿಂದ ಇದೇ ದರ ಮುಂದುವರಿದಿದ್ದು, ಯಾವುದೇ ಏರಿಳಿತವಿಲ್ಲದೆ ಸ್ಥಿರವಾಗಿದೆ.
