ಬೆಂಗಳೂರು, ನ.25- ಕರ್ನಾಟಕದ ಉತ್ಪಾದನಾ ಮತ್ತು ಎಂಜಿನಿಯರಿಂಗ್ ವಲಯಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಜಪಾನ್ನ ಪ್ರತಿಷ್ಠಿತ ಕವಾಸಕಿ ಹೆವಿ ಇಂಡಸ್ಟ್ರೀಸ್ ಕಂಪನಿಯು ರಾಜ್ಯದಲ್ಲಿ 10 ವರ್ಷಗಳಲ್ಲಿ ಗರಿಷ್ಠ 800 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ ಎಂದು ಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ. ಕರ್ನಾಟಕದ ನಿಯೋಗದೊಂದಿಗೆ ಜಪಾನ್ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿಯವರು, ಅಲ್ಲಿ ಪ್ರಮುಖ ಉದ್ದಿಮೆದಾರರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡುತ್ತಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 5ನೇ ಹಂತದಲ್ಲಿ ವಿಪ್ರೊ ಕವಾಸಕಿ ಪ್ರಿಸಿಷನ್ ಮೆಷಿನರಿ ಪ್ರೈವೇಟ್ ಲಿಮಿಟೆಡ್ ಘಟಕವನ್ನು ವಿಸ್ತರಿಸಲು ಕಂಪನಿ ನಿರ್ಧರಿಸಿದೆ. ಈ ಯೋಜನೆಯಿಂದ ಸುಮಾರು 600 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಜಪಾನ್ನ ಟೋಕಿಯೋದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರ ಉಪಸ್ಥಿತಿಯಲ್ಲಿ ಈ ಸಂಬಂಧ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕವಾಸಕಿ ಹೆವಿ ಇಂಡಸ್ಟ್ರೀಸ್ನ ಕೆಂಜಿ ಮತ್ಸುಶಿತಾ ಹಾಗೂ ವಿಪ್ರೊ ಕವಾಸಕಿ ಪ್ರಿಸಿಷನ್ ಮೆಷಿನರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಿನೋರು ಹತ್ಸುಡಾ ಅವರು ಒಪ್ಪಂದವನ್ನು ವಿನಿಮಯ ಮಾಡಿಕೊಂಡರು. ಪ್ರಸ್ತಾವಿತ ಘಟಕದಲ್ಲಿ ನಿರ್ಮಾಣ ಯಂತ್ರೋಪಕರಣ ಉದ್ಯಮಕ್ಕೆ ಅಗತ್ಯವಿರುವ ಹೈಡ್ರಾಲಿಕ್ ಪಂಪ್ಗಳು, ಸ್ವಿಂಗ್ ಮೋಟಾರ್ಗಳು ಹಾಗೂ ಇತರ ಬಿಡಿಭಾಗಗಳನ್ನು ತಯಾರಿಸಲಾಗುತ್ತದೆ. ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 200ರಿಂದ 400 ಕೋಟಿ ರೂ. ಹಾಗೂ ಎರಡನೇ ಹಂತದಲ್ಲಿ 400ರಿಂದ 800 ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ.
ಈ ವಿಸ್ತರಣೆಯಿಂದ ಉನ್ನತ ಕೌಶಲ್ಯದ ಸುಮಾರು 600 ಉತ್ಪಾದನಾ ಉದ್ಯೋಗಗಳು ಸೃಷ್ಟಿಯಾಗಲಿವೆ.2012ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ವಿಪ್ರೊ ಕವಾಸಕಿ ಪ್ರಿಸಿಷನ್ ಮೆಷಿನರಿ ಸಂಸ್ಥೆಯು ಭಾರತದ ಅಗೆಯುವ ಯಂತ್ರಗಳ ಹೈಡ್ರಾಲಿಕ್ ಪಂಪ್ ಮಾರುಕಟ್ಟೆಯಲ್ಲಿ ಪ್ರಮುಖ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ಈಗಿನ ವಿಸ್ತರಣೆಯು ವಿಪ್ರೊ ಮತ್ತು ಕವಾಸಕಿ ನಡುವಿನ ಯಶಸ್ವಿ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ರಾಜ್ಯದ ನಿರ್ಮಾಣ ಯಂತ್ರೋಪಕರಣ ಹಾಗೂ ಬಂಡವಾಳ ಸರಕುಗಳ ಉತ್ಪಾದನಾ ವ್ಯವಸ್ಥೆಗೆ ಉತ್ತೇಜನ ನೀಡಲಿದೆ. 2016ರಿಂದ ಕರ್ನಾಟಕದಲ್ಲಿ ಜಪಾನ್ನ 101 ಹೊಸ ಕೈಗಾರಿಕಾ ಯೋಜನೆಗಳು ಆರಂಭವಾಗಿದ್ದು, ಪ್ರಸ್ತುತ 525ಕ್ಕೂ ಹೆಚ್ಚು ಜಪಾನ್ ಮೂಲದ ಸಂಸ್ಥೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಪಾನ್ ಹೂಡಿಕೆದಾರರಿಗೆ ಕರ್ನಾಟಕ ಪ್ರಮುಖ ಆದ್ಯತೆಯ ತಾಣವಾಗಿ ಮುಂದುವರಿದಿದೆ. ಯೋಜನೆಗೆ ಅಗತ್ಯವಿರುವ ಭೂಮಿ ಹಂಚಿಕೆ, ಅನುಮತಿಗಳು, ಪರವಾನಗಿಗಳು ಹಾಗೂ ಅನ್ವಯವಾಗುವ ಪ್ರೋತ್ಸಾಹ ಧನವನ್ನು ಕಾಲಮಿತಿಯೊಳಗೆ ಒದಗಿಸಲು ರಾಜ್ಯ ಸರ್ಕಾರ ಸಹಕಾರ ನೀಡಲಿದೆ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು 2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಕವಾಸಕಿ ಕಂಪನಿಯ ಆಡಳಿತ ಮಂಡಳಿಗೆ ಆಹ್ವಾನ ನೀಡಿದ್ದಾರೆ.
