ಬೆಂಗಳೂರು, ನ.26- ಸಂವಿಧಾನ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಪಕ್ಷದ ನಾಯಕರು ಮುನಿಸು ಮರೆತು ಒಂದಾಗಿದ್ದು ಸಿದ್ದರಾಮಯ್ಯ ಅವರ ನಿವಾಸದಲ್ಲಿ ಉಪಾಹಾರ ಕೂಟದ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ಹಾಗೂ ಸಂಪುಟ ರಚನೆ ಬಳಿಕ ಮಾಜಿಯಾದ ಸಿದ್ದರಾಮಯ್ಯ ಅವರೊಂದಿಗೆ, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಸಚಿವ ಜಮೀರ್ ಅಹಮದ್ ಖಾನ್ ಅವರು ಮುನಿಸಿಕೊಂಡಿದ್ದಾರೆ ಎಂಬ ವ್ಯಾಖ್ಯಾನಗಳಿದ್ದವು.
ಇಂದು ಸಂವಿಧಾನ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯುವುದರಿಂದ ತಪ್ಪು ಸಂದೇಶ ರವಾನೆಯಾಗಬಾರದು ಎಂಬ ಕಾರಣಕ್ಕೆ ಒಗ್ಗಟ್ಟು ಪ್ರದರ್ಶನ ಪ್ರಹಸನ ನಡೆದಿದೆ.
ನಿನ್ನೆ ಸಚಿವರಾದ ಜಮೀರ್ ಅಹಮದ್ ಖಾನ್ ಮತ್ತು ಡಾ. ಯತೀಂದ್ರ ಅವರು ಮಹದೇವಪ್ಪ ಅವರ ಮನೆಗೆ ಭೇಟಿ ಮಾಡಿ, ಮನವೊಲಿಸಿ ಅಲ್ಲಿಂದ ಮಹದೇವಪ್ಪ ಅವರನ್ನು, ಸಿದ್ದರಾಮಯ್ಯ ಅವರ ಮನೆಗೆ ಕರೆ ತಂದರು. ಇಬ್ಬರು ನಾಯಕರು ಸುದೀರ್ಘ ಚರ್ಚೆಯ ಬಳಿಕ ಹೊರ ಬಂದು ಒಟ್ಟಾಗಿ ಇರುವ ಫೋಸ್ ನೀಡಿದರು. ಆದರೆ ಮಾಧ್ಯಮಗಳ ಎದುರು ಪರಸ್ಪರ ಕೈ ಕುಲುಕುವ ಔಪಚಾರಿಕತೆಯನ್ನು ಪಾಲಿಸಲು ನಿರಾಕರಿಸಿದರು.
ಎಚ್.ಸಿ.ಮಹದೇವಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ನಾನು, ಸಿದ್ದರಾಮಯ್ಯ ಜಗಳವನ್ನೇ ಆಡಿಲ್ಲ, ಮುನಿಸು ಇಲ್ಲವೇ ಇಲ್ಲ. ಪರಸ್ಪರ ಮಾತನಾಡುವುದಿಲ್ಲ ಎಂದಾದರೆ ಅದು ಭಿನ್ನಮತವಲ್ಲ. ಒಮೆ ಸ್ನೇಹಿರತಾದರೆ ಅವರು ಯಾವಾಗಲೂ ಸ್ನೇಹಿತರಾಗಿರುತ್ತಾರೆ ಎಂದು ಹೇಳಿದರು. ನಿನ್ನೆಯ ಸಂಧಾನ ಫಲ ನೀಡಿದಂತೆ ಕಂಡು ಬಂದಿದ್ದು, ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಉಪಾಹಾರ ಕೂಟದಲ್ಲಿ ಎಚ್.ಸಿ.ಮಹದೇವಪ್ಪ, ಜಮೀರ್ ಅಹಮದ್ಖಾನ್ ಭಾಗವಹಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವರಾದ ಪುಟ್ಟರಂಗ ಶೆಟ್ಟಿ, ಮಾಜಿ ಸಚಿವ ಕೆ.ವೆಂಕಟೇಶ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ನಾರಾಯಣ ಸ್ವಾಮಿ, ಎಂ.ಸಿ.ವೇಣುಗೋಪಾಲ್, ಮುಖ್ಯಮಂತ್ರಿಯವರ ಮಾಜಿ ರಾಜಕೀಯ ಸಲಹೆಗಾರ ನಜೀರ್ ಅಹಮದ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಪುಟ ಪುನರ್ ರಚನೆಯ ವೇಳೆ ಕೆಲವು ಬಿನ್ನಾಭಿಪ್ರಾಯಗಳು ತಲೆದೂರಿದ್ದವು. ಜಮೀರ್ ಅಹಮದ್ ಖಾನ್ ಕೂಡ ಸಿದ್ದರಾಮಯ್ಯ ಅವರಿಂದ ಕೆಲ ದಿನಗಳವೆರಗೂ ಅಂತರ ಕಾಯ್ದುಕೊಂಡಿದ್ದರು. ನಂತರ ಎಂದಿನಂತೆ ಸಿದ್ದರಾಮಯ್ಯ ಅವರ ಸಖ್ಯಕ್ಕೆ ಸೇರಿಕೊಂಡರು.
ನಿನ್ನೆಯ ಬೆಳವಣಿಗೆಗಳು ನಾಟಕೀಯ ಎನಿಸಿದರೂ ಇಂದು ಉಪಾಹಾರ ಕೂಟದ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನಗಳಾಗಿವೆ. ಈ ಮೊದಲು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ತಮ ನೇತೃತ್ವದಲ್ಲೇ ಮೈಸೂರಿನಲ್ಲಿ ರಾಜ್ಯ ಮಟ್ಟದ ಸಂವಿಧಾನ ದಿನಾಚರಣೆ ಆಚರಿಸಿ, ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದರು. ಅದಕ್ಕೆ ಟಾಂಗ್ ನೀಡುವಂತೆ ಸಿದ್ದರಾಮಯ್ಯ ಅವರು ಸರ್ಕಾರದ ವತಿಯಿಂದಲೇ ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯನ್ನು ಆಯೋಜನೆ ಮಾಡಿ ಮಹದೇವಪ್ಪ ಅವರ ಕಾರ್ಯಯೋಜನೆಯನ್ನು ತಣ್ಣಗಾಗಿಸಿದರು. ಜೊತೆಗೆ ಪುತ್ರ ಯತೀಂದ್ರ ಅವರನ್ನು ಈ ಕಾರ್ಯಕ್ರಮದ ಮೂಲಕ ಮುಂದಾಳು ನಾಯಕತ್ವಕ್ಕೆ ಅಣಿಗೊಳಿಸಿದರು.
ಈ ಹಿಂದೆ ದಸರಾ ಆಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯತೀಂದ್ರ ಅವರ ಜೊತೆಗೆ ಹೆಚ್ಚುವರಿಯಾಗಿ ಕೆಲ ಸಚಿವರನ್ನು ನೇಮಿಸುವ ಮೂಲಕ ಕ್ರೆಡಿಟ್ವಾರ್ಗೆ ಕಾರಣರಾಗಿದ್ದರು. ಸಿದ್ದರಾಮಯ್ಯ ಅವರು ಪ್ರತಿತಂತ್ರವಾಗಿ ಸಂವಿಧಾನ ದಿನಾಚರಣೆಯ ಮೂಲಕ ಮುನಿಸಿಕೊಂಡ ನಾಯಕರನ್ನು ಒಂದೇ ವೇದಿಕೆಗೆ ತರುವಲ್ಲಿ ಹಾಗೂ ಪುತ್ರ ಯತೀಂದ್ರ ಅವರನ್ನು ಮುನ್ನೆಲೆಯಲ್ಲಿ ಪ್ರತಿಷ್ಠಾಪಿಸುವ ಯಶಸ್ವಿ ಪ್ರಯತ್ನ ಮಾಡಿದ್ದಾರೆ.
