ಬೆಂಗಳೂರು, ನ.26- ನಗರದ ಫ್ರೀಡಂ ಪಾರ್ಕ್ನಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹಗಲು-ರಾತ್ರಿ ಹೋರಾಟ ಮುಂದುವರಿಸಿದ್ದು, ಅವರ ಅನಿರ್ದಿಷ್ಟಾವಧಿ ಧರಣಿ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಜಪಾನ್ ಪ್ರವಾಸ ಮುಗಿಸಿ ರಾಜ್ಯಕ್ಕೆ ಮರಳಿರುವ ಹಿನ್ನೆಲೆಯಲ್ಲಿ, ಇಂದಾದರೂ ಸರ್ಕಾರ ತಮ್ಮೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬಹುದು ಎಂಬ ನಿರೀಕ್ಷೆಯಲ್ಲಿ ಆಶಾ ಕಾರ್ಯಕರ್ತೆಯರು ಕಾಯುತ್ತಿದ್ದಾರೆ. ಆದರೆ, ಕೇವಲ ಭರವಸೆಗಳಿಗೆ ಸೀಮಿತವಾಗದೆ, ಬೇಡಿಕೆ ಈಡೇರಿಸುವ ಕುರಿತು ಲಿಖಿತ ಆದೇಶ ಹೊರಡಿಸಬೇಕು ಎಂಬುದು ಅವರ ಬಿಗಿಪಟ್ಟು ಸಡಿಲಿಸಿಲ್ಲ.
ಹತ್ತು ದಿನಗಳಿಂದ ಬೀದಿಯಲ್ಲೇ ಕುಳಿತು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಪುಟ್ಟ ಮಕ್ಕಳನ್ನು ಕರೆತಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ತಾಯಂದಿರ ನೋವು ಮನಕಲಕುವಂತಿದೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾರ್ಯಕರ್ತೆಯರು, ತಮ್ಮ ಬದುಕಿನ ಕಷ್ಟಗಳನ್ನು ಹೇಳಿಕೊಳ್ಳುತ್ತಲೇ ಕಣ್ಣೀರಿಡುತ್ತಿದ್ದಾರೆ.
ನಮ ಕಷ್ಟ ಸರ್ಕಾರಕ್ಕೆ ಯಾಕೆ ಕಾಣುತ್ತಿಲ್ಲ? ಸರ್ಕಾರದ ನಡೆಗೆ ಬೇಸತ್ತು ಕಣ್ಣೀರಿಟ್ಟ ಆಶಾ ಕಾರ್ಯಕರ್ತೆ ಸಾವಿತ್ರಿ ಭಾಯಿ, ತಮ್ಮ ಕುಟುಂಬದ ಸಂಕಷ್ಟವನ್ನು ತೆರೆದಿಟ್ಟರು. ನಮ್ಮ ಕಷ್ಟ ಸರ್ಕಾರಕ್ಕೆ ಯಾಕೆ ಕಾಣುತ್ತಿಲ್ಲ? ನಮ್ಮ ಮನೆಯಲ್ಲಿ ಏಳು ಜನ ಇದ್ದೇವೆ. ತಿಂಗಳ ಖರ್ಚಿಗೆ ಕನಿಷ್ಠ 15 ಸಾವಿರ ರೂಪಾಯಿ ಬೇಕು. ಮನೆಯವರು ಕೃಷಿ ಮಾಡುತ್ತಾರೆ. ಆದರೆ, ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಬೆಳೆ ಬಂದಿಲ್ಲ. ಮನೆಯಲ್ಲಿ ಪಡಿತರ ಸಾಮಗ್ರಿ ಖರೀದಿಸಲೂ ಹಣವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ನೀಡುವ ಐದು ಸಾವಿರ ರೂಪಾಯಿಗಳಲ್ಲಿ ಕುಟುಂಬವನ್ನು ಹೇಗೆ ನಡೆಸಬೇಕು? ಎಂದು ಪ್ರಶ್ನಿಸಿದರು.
ಕುಟುಂಬದ ನಿರ್ವಹಣೆ, ಮಕ್ಕಳ ಭವಿಷ್ಯ ಹಾಗೂ ದಿನನಿತ್ಯದ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ. ಜನರ ಆರೋಗ್ಯಕ್ಕಾಗಿ ದುಡಿಯುವ ನಮ್ಮ ಬದುಕಿನ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವೇ ಎಂದು ಅವರು ಅಳಲು ತೋಡಿಕೊಂಡರು.
ಶ್ರೀಮಂತರಾಗುವುದು ಬೇಡ, ಗೌರವದಿಂದ ಬದುಕುವಂತಾಗಲಿ:ಮತ್ತೊಬ್ಬ ಆಶಾ ಕಾರ್ಯಕರ್ತೆ ಮುತ್ತಮ್ಮ ಅವರ ನೋವು ಇನ್ನಷ್ಟು ಮನಕಲಕುವಂತಿತ್ತು. ನಾವು ಶ್ರೀಮಂತರಾಗಬೇಕು ಎಂದು ಕೇಳುತ್ತಿಲ್ಲ. ಕನಿಷ್ಠ ಗೌರವದಿಂದ ಬದುಕುವಂತಾಗಬಾರದೇ? ನನಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬಳು ಹಾಸ್ಟೆಲ್ನಲ್ಲಿದ್ದಾಳೆ. ಇನ್ನೊಬ್ಬಳು ಆರು ವರ್ಷದ ಪುಟ್ಟ ಮಗಳು. ಆಕೆಯನ್ನು ಊರಿನಲ್ಲಿ ನೆರೆಮನೆಯವರ ಮನೆಯಲ್ಲಿ ಬಿಟ್ಟು ಬಂದಿದ್ದೇನೆ. ಆ ಮಗು ಫೋನ್ ಮಾಡಿ ಬಾ ಮಮ್ಮಿ ಎಂದು ಅಳುತ್ತಿದೆ. ಮಗಳನ್ನು ಬಿಟ್ಟು ಇಲ್ಲಿಂದ ಹೋಗಲೂ ಆಗುತ್ತಿಲ್ಲ, ಹೋರಾಟವನ್ನು ಬಿಟ್ಟು ಹೋಗುವ ಪರಿಸ್ಥಿತಿಯೂ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಆರು ವರ್ಷದ ಮಗುವಿಗೆ ತಾಯಿ ಜೊತೆಯಲ್ಲಿರದಿದ್ದರೆ ಹೇಗಾಗಬೇಡ? ನನ್ನ ಮಗುವಿಗೆ ಒಳ್ಳೆಯ ಭವಿಷ್ಯ ಕಲ್ಪಿಸಿಕೊಡುವುದು ಬೇಡವೇ? ಮುಖ್ಯಮಂತ್ರಿಗಳಿಗೆ ನಮ್ಮ ಸಂಕಷ್ಟ ಕಾಣಿಸುತ್ತಿಲ್ಲವೇ? ಎಂದು ಮುತ್ತಮ್ಮ ಕಣ್ಣೀರಿಟ್ಟರು. ಮಕ್ಕಳೊಂದಿಗೆ ಫ್ರೀಡಂ ಪಾರ್ಕ್ನಲ್ಲೇ ತಾಯಂದಿರು; ಆಶಾ ಕಾರ್ಯಕರ್ತೆಯರು ಹತ್ತು ದಿನಗಳಿಂದ ತಮ್ಮ ಪುಟ್ಟ ಮಕ್ಕಳೊಂದಿಗೆ ಫ್ರೀಡಂ ಪಾರ್ಕ್ನಲ್ಲೇ ಧರಣಿ ನಡೆಸುತ್ತಿದ್ದಾರೆ. ಎರಡು-ಮೂರು ವರ್ಷದ ಮಕ್ಕಳನ್ನೂ ಎತ್ತಿಕೊಂಡು ಪ್ರತಿಭಟನೆಯಲ್ಲಿ ಕುಳಿತಿರುವ ತಾಯಂದಿರ ಸಂಕಷ್ಟ ಹೇಳತೀರದಾಗಿದೆ.ಱಱನಾವು ನೀರು ಕುಡಿದಾದರೂ ಬದುಕುತ್ತೇವೆ.
ಆದರೆ, ಎರಡು-ಮೂರು ವರ್ಷದ ಪುಟ್ಟ ಮಕ್ಕಳ ಪಾಡೇನು? ಮಕ್ಕಳ ಮುಖವನ್ನಾದರೂ ನೋಡಿ ಸರ್ಕಾರ ನಮ್ಮನ್ನು ಮಾತುಕತೆಗೆ ಕರೆಯಬಾರದೇ? ಸರ್ಕಾರ ಇಷ್ಟೊಂದು ಕಠಿಣವಾಗಿ ನಡೆದುಕೊಳ್ಳುವುದು ಸರಿಯೇ? ಅವರ ಮಕ್ಕಳು ಮನೆಯಲ್ಲಿ ಆರಾಮವಾಗಿದ್ದಾರೆ. ನಮ್ಮ ಮಕ್ಕಳು ಮಾತ್ರ ಬೀದಿಯಲ್ಲಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಮಕ್ಕಳಿಗೆ ಸರಿಯಾಗಿ ಊಟ ಕೊಡಲಾಗುತ್ತಿಲ್ಲ, ಸ್ನಾನ ಮಾಡಿಸಲೂ ಸಾಧ್ಯವಾಗುತ್ತಿಲ್ಲ ಎಂದು ಕಾರ್ಯಕರ್ತೆಯರು ನೋವು ತೋಡಿಕೊಂಡರು.
ಪುಟ್ಟ ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡೇ ಕಣ್ಣೀರಿಡುತ್ತಿರುವ ಆಶಾ ಕಾರ್ಯಕರ್ತೆಯರ ದೃಶ್ಯ ಸ್ಥಳದಲ್ಲಿದ್ದವರ ಮನಕಲಕುವಂತಿದೆ. ಜನರ ಆರೋಗ್ಯ ಸೇವೆಯಲ್ಲಿ ತೊಡಗಿರುವ ತಾಯಂದಿರು ತಮ್ಮ ಮಕ್ಕಳೊಂದಿಗೆ ಬೀದಿಯಲ್ಲಿ ಕುಳಿತು ನ್ಯಾಯಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇಂದಾದರೂ ಸಮಸ್ಯೆ ಬಗೆಹರಿಯುತ್ತಾ?ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಜಪಾನ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಮರಳಿರುವ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರಲ್ಲಿ ಹೊಸ ನಿರೀಕ್ಷೆ ಮೂಡಿದೆ. ಇಂದಾದರೂ ಮುಖ್ಯಮಂತ್ರಿ ಅವರು ಪ್ರತಿಭಟನಾ ನಿರತ ಕಾರ್ಯಕರ್ತೆಯರೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಅವರ ಬೇಡಿಕೆಗಳ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.ಹತ್ತು ದಿನಗಳಿಂದ ಚಳಿ, ಮಳೆ, ಹಸಿವು ಹಾಗೂ ಕುಟುಂಬದ ಚಿಂತೆಗಳ ನಡುವೆಯೂ ಹೋರಾಟ ಮುಂದುವರಿಸಿರುವ ಆಶಾ ಕಾರ್ಯಕರ್ತೆಯರು, ಸರ್ಕಾರದಿಂದ ಲಿಖಿತ ಆದೇಶ ಹೊರಬೀಳುವವರೆಗೂ ಧರಣಿ ಕೈಬಿಡುವುದಿಲ್ಲ ಎಂಬ ದೃಢ ನಿಲುವಿನಲ್ಲಿದ್ದಾರೆ.
