ಚಿಕ್ಕಮಗಳೂರು,ನ.26-ಅರಣ್ಯ ಇಲಾಖೆಯ ಆಪರೇಷನ್ ಗಜ ಕಾರ್ಯಾಚರಣೆಯ ನಡುವೆ ಕಾಡಾನೆಗಳ ಹಿಂಡು ತತ್ಕೋಳ ಅರಣ್ಯದತ್ತ ತೆರಳದೆ ಮತ್ತೆ ಬಂದ ದಾರಿಯಲ್ಲೇ ವಾಪಸ್ ಸಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಮೂಡಿಗೆರೆ ತಾಲೂಕಿನ ಕೆಲ್ಲೂರು ಗ್ರಾಮದ ಭಾಗದಿಂದ ಚಲಿಸುತ್ತಿದ್ದ ಬೀಟಮ್ಮ, ಭುವನೇಶ್ವರಿ ಹಾಗೂ ಓಲ್ಡ್ ಬೆಲ್ಟ್ ಹೆಸರಿನ ಕಾಡಾನೆಗಳ ಹಿಂಡು ಇದೀಗ ಮತ್ತೆ ಬೇಲೂರು ಭಾಗದತ್ತ ಮುಖ ಮಾಡಿದೆ.
ನಿನ್ನೆ ತತ್ಕೋಳ ಅರಣ್ಯದಿಂದ ಕೇವಲ 3.5 ಕಿ.ಮೀ. ದೂರದಲ್ಲಿದ್ದ ಸುಮಾರು 22 ಕಾಡಾನೆಗಳ ಹಿಂಡು, ಅರಣ್ಯದೊಳಗೆ ತೆರಳುವ ಬದಲು ದಿಕ್ಕು ಬದಲಿಸಿ ಸುಮಾರು 10 ಕಿ.ಮೀ. ದೂರಕ್ಕೆ ಹಿಂದಕ್ಕೆ ಸಾಗಿವೆ.
ಸದ್ಯ ಈ ಕಾಡಾನೆಗಳ ಹಿಂಡು ಮೂಡಿಗೆರೆ ತಾಲೂಕಿನ ಕಾರ್ ಬೈಲು ಗ್ರಾಮದ ದುಂಡಿಗ ಭಾಗದಲ್ಲಿ ಬೀಡುಬಿಟ್ಟಿದೆ ಎಂದು ತಿಳಿದುಬಂದಿದೆ.
ಕಾಡಾನೆಗಳನ್ನು ತತ್ಕೋಳ ಅರಣ್ಯದ ಮೂಲಕ ಭದ್ರಾ ಅಭಯಾರಣ್ಯದತ್ತ ಸ್ಥಳಾಂತರಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿರುವ ನಡುವೆಯೇ ಆನೆಗಳ ಹಿಂಡು ಮತ್ತೆ ಹಿಂದಿನ ಮಾರ್ಗದಲ್ಲೇ ಸಾಗುತ್ತಿರುವುದು ಕಾರ್ಯಾಚರಣೆಗೆ ಸವಾಲಾಗಿದೆ. ಆನೆಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಿದ್ದು, ಮುಂದಿನ ಕಾರ್ಯಾಚರಣೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
