ಕೈರೋ,ನ.26-ಈಜಿಪ್ಟ್ ರಾಜಧಾನಿ ಕೈರೋದ ಪ್ರಮುಖ ಹೆದ್ದಾರಿಯಲ್ಲಿ ಇಂಧನ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು ಸಂಭವಿದ ಭೀಕೆ ಅವಘಡದಲ್ಲಿ 31ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಜಧಾನಿ ಕೈರೋವನ್ನು ಸುತ್ತುವರಿದಿರುವ ಪ್ರಮುಖ ರಿಂಗ್ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ 25ಕ್ಕೂ ಹೆಚ್ಚು ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ ಎಂದು ಈಜಿಪ್ಟ್ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಹೆದ್ದಾರಿಯ ಭಾಗವು ಗ್ರೇಟರ್ ಕೈರೋ ಪ್ರದೇಶದ ಗಿಜಾ ನಗರದ ಜನನಿಬಿಡ ವರಾಕ್ ಪ್ರದೇಶದಲ್ಲಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಕರ್ತರು ಬೆಂಕಿ ಹೊತ್ತಿಕೊಂಡಿದ್ದ ವಾಹನಗಳಿಂದ ಜನರನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿ ವಾಹನಗಳ ನಡುವೆ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು. ಕೈರೋದ ಉಪನಗರ ಇಂಬಾಬಾದ ವರಾಕ್ ಪ್ರದೇಶದಲ್ಲಿ ನೂರಾರು ಜನರು ಘಟನಾ ಸ್ಥಳದ ಬಳಿ ಜಮಾಯಿಸಿದ್ದರು.
ಈಜಿಪ್್ಟ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಾರ್ವಜನಿಕ ಅಭಿಯೋಜಕರ ಕಚೇರಿ ತಿಳಿಸಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈಜಿಪ್್ಟನಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಂದ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ ರಸ್ತೆ ಸಾರಿಗೆ ಸುರಕ್ಷತೆಯ ಸ್ಥಿತಿ ಕಳವಳಕಾರಿಯಾಗಿದ್ದು, ಅತಿವೇಗದ ಚಾಲನೆ, ಕಳಪೆ ರಸ್ತೆ ವ್ಯವಸ್ಥೆ ಹಾಗೂ ಸಂಚಾರ ನಿಯಮಗಳ ಸಮರ್ಪಕ ಜಾರಿಯ ಕೊರತೆ ಬಹುತೇಕ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ.
