Homeಇದೀಗ ಬಂದ ಸುದ್ದಿ24 ಗಂಟೆಯೂ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ಹೊಟೇಲ್‌ ಮಾಲೀಕರು ಒತ್ತಾಯ

24 ಗಂಟೆಯೂ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ಹೊಟೇಲ್‌ ಮಾಲೀಕರು ಒತ್ತಾಯ

ಬೆಂಗಳೂರು, ನ.26- ನಗರದಲ್ಲಿ ಹೋಟೆಲ್‌ಗಳು ಮತ್ತು ಉಪಾಹಾರ ಗೃಹಗಳನ್ನು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಅವಕಾಶ ನೀಡು ವುದಾಗಿ ಸರ್ಕಾರ ಘೋಷಿಸಿ ಎರಡು ವರ್ಷ ಕಳೆದಿದ್ದರೂ, ಈ ಅನುಮತಿ ಇನ್ನೂ ಕಾಗದದಲ್ಲಿ ಮಾತ್ರ ಸೀಮಿತವಾಗಿದೆ ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ಅಸಮಾಧಾನ ವ್ಯಕ್ತಪಡಿ ಸಿದೆ. ಈ ಸಂಬಂಧ ಸಂಘವು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು, 24/7 ಸಮಯವೂ ಕಾರ್ಯಾಚರಣೆಗೆ ನೀಡಿರುವ ಅನುಮತಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವಂತೆ ಮನವಿ ಮಾಡಿದೆ.

ಸಂಘದ ಗೌರವಾಧ್ಯಕ್ಷರಾದ ಪಿ.ಸಿ.ರಾವ್‌, ಅಧ್ಯಕ್ಷ ಸುಬ್ರಮಣ್ಯ ಹೊಳ್ಳ ಹೆಚ್‌.ಎಸ್‌‍., ಗೌರವ ಕಾರ್ಯದರ್ಶಿ ವೀರೇಂದ್ರ ಎನ್‌.ಕಾಮತ್‌ ಅವರು ಸಲ್ಲಿಸಿರುವ ಮನವಿಯ ಪ್ರಕಾರ, ಹೋಟೆಲ್‌ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರದಿಂದ 24/7 ಸಮಯ ಕಾರ್ಯಾಚರಣೆಗೆ ಆದೇಶ ಹೊರಡಿಸಲಾಗಿದ್ದರೂ, ಸ್ಥಳೀಯ ಪೊಲೀಸ್‌‍ ಇಲಾಖೆಯಿಂದ ಅಗತ್ಯ ಅನುಮತಿ ದೊರೆಯುತ್ತಿಲ್ಲ. ಇದರಿಂದಾಗಿ ಸರ್ಕಾರದ ಆದೇಶದ ಪ್ರಯೋಜನ ಹೋಟೆಲ್‌ ಉದ್ಯಮಿಗಳಿಗೆ ಸಿಗುತ್ತಿಲ್ಲ ಎಂದು ಸಂಘ ಪತ್ರದಲ್ಲಿ ಉಲ್ಲೇಖಿಸಿದೆ.

ಹೋಟೆಲ್‌ಗಳು ಕೇವಲ ಆಹಾರ ಒದಗಿಸುವ ಕೇಂದ್ರಗಳಲ್ಲ. ರಾತ್ರಿ ಪ್ರಯಾಣಿಸುವವರು, ಪ್ರವಾಸಿಗರು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರಿಗೆ ಆಹಾರ ಮತ್ತು ಅಗತ್ಯ ಸೇವೆಗಳನ್ನು ಒದಗಿಸುವ ಪ್ರಮುಖ ಕೇಂದ್ರಗಳಾಗಿವೆ. ಹೋಟೆಲ್‌ಗಳು ದಿನದ 24 ಗಂಟೆಯೂ ತೆರೆದಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುವುದರ ಜೊತೆಗೆ ಉದ್ಯೋಗ ಸೃಷ್ಟಿ ಮತ್ತು ವ್ಯಾಪಾರ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್‌‍ ಇಲಾಖೆಯಿಂದ ಉಂಟಾಗುತ್ತಿರುವ ಅನುಮತಿ ಸಮಸ್ಯೆಯನ್ನು ಪರಿಹರಿಸಿ, ಬೆಂಗಳೂರಿನ ಹೋಟೆಲ್‌ಗಳು ಮತ್ತು ಉಪಾಹಾರ ಗೃಹಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಅಗತ್ಯ ಅವಕಾಶ ಕಲ್ಪಿಸಬೇಕು ಎಂದು ಬೆಂಗಳೂರು ಹೋಟೆಲ್‌ಗಳ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗೆ ಸಲ್ಲಿಸಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮನವಿಯನ್ನು ನಗರ ಪೊಲೀಸ್‌‍ ಆಯುಕ್ತರಿಗೆ ರವಾನಿಸಿದ್ದು, ಆದ್ಯತೆ ಮೇರೆಗೆ ಪರಿಶೀಲಿಸುವಂತೆ ಸೂಚಿಸಿದ್ದಾರೆ.

RELATED ARTICLES

Latest News