ಬೆಂಗಳೂರು,ನ.28- ಜಮೀನು ವಿವಾದಗಳಲ್ಲಿ ಅನಾವಶ್ಯಕಾಗಿ ಮಧ್ಯಪ್ರವೇಶಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರದ ಮುಖ್ಯ ಪೊಲೀಸ್ ಆಯುಕ್ತರಾದ ಆರ್.ಹಿತೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ. ಇಂದು ಮುಖ್ಯ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದ ಹೊರ ಭಾಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಹೆಚ್ಚಾಗಿ ನಡೆಯುತಿದ್ದು, ಇದರಲ್ಲಿ ಕೆಲವು ಅಧಿಕಾರಿ ಮತ್ತು ಸಿಬ್ಬಂದಿಗಳು ಶಾಮೀಲಾಗುತ್ತಿದ್ದಾರೆ ಎಂಬುದು ತಿಳಿದುಬಂದಿದೆ ಎಂದು ಹೇಳಿದರು.
ಇನ್ನು ಮುಂದೆ ಇಂತಹ ವ್ಯವಹಾರಗಳಲ್ಲಿ ಯಾರಾದರೂ ವಿನಾಕಾರಣ ಮೂಗು ತೂರಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹೇಳಿದ್ದಾರೆಂದು ಗೊತ್ತಾಗಿದೆ. ರೌಡಿ ಚಟುವಟಿಕೆಗಳು ನಡೆಯುತ್ತಿವೆ. ಅವುಗಳನ್ನು ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗಳು ಮಟ್ಟ ಹಾಕಬೇಕು. ಆಗಾಗ್ಗೆ ಅವರ ಚಲನವಲನಗಳ ಬಗ್ಗೆ ನಿಗಾ ವಹಿಸಬೇಕು ಎಂದು ತಿಳಿಸಿದ್ದಾರೆ. ಬೆಂಗಳೂರು ನಗರಕ್ಕೆ ಮಾದಕವಸ್ತುಗಳು ಹೆಚ್ಚು ಬರುತ್ತಿವೆ ಎಂದು ಬಹುತೇಕ ಜನ ಹೇಳುತ್ತಿದ್ದಾರೆ. ಡ್ರಗ್‌್ಸ ಪೆಡ್ಲರ್‌ಗಳನ್ನು ಬಂಧಿಸಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವುದಲ್ಲದೇ ಅದರ ಮೂಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳೆಯರ ಸುರಕ್ಷತೆ ಬಹಳ ಮುಖ್ಯ. ಆದುದ್ದರಿಂದ ಸಾರ್ವಜನಿಕ ಸ್ಥಳಗಳು ಹಾಗೂ ಬಸ್ಸು, ರೈಲು ನಿಲ್ದಾಣ, ಮಹಿಳಾ ಪಿಜಿಗಳ ಬಳಿ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಗಸ್ತಿನಲ್ಲಿ ನೇಮಿಸಿ ಸಂಕಷ್ಟಕ್ಕೊಳಗಾದ ಮಹಿಳೆಯರು ನಮ 112ಗೆ ಕರೆ ಮಾಡಿದ ತಕ್ಷಣ ಕೂಡಲೇ ಸ್ಪಂದಿಸಬೇಕು, ತಡಮಾಡಿದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದು ಹಿತೇಂದ್ರ ಅವರು ತಿಳಿಸಿದ್ದಾರೆ ಎಂದು
ಗೊತ್ತಾಗಿದೆ. ಈ ಸಭೆಯಲ್ಲಿ ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಲ್ಲಾ ಇನ್‌ಸ್ಪೆಕ್ಟರ್‌ಗಳು, ಎಸಿಪಿಗಳು, ಡಿಸಿಪಿಗಳು, ಆಯುಕ್ತರುಗಳು ಭಾಗವಹಿಸಿದ್ದರು.
