Homeಇದೀಗ ಬಂದ ಸುದ್ದಿಅಹೋರಾತ್ರಿ ಧರಣಿಗೆ ಮಣಿದ ಸರ್ಕಾರ : ಆಶಾ ಗೌರವಧನ ಹೆಚ್ಚಿಸಿ ಅಧಿಕೃತ ಆದೇಶ

ಅಹೋರಾತ್ರಿ ಧರಣಿಗೆ ಮಣಿದ ಸರ್ಕಾರ : ಆಶಾ ಗೌರವಧನ ಹೆಚ್ಚಿಸಿ ಅಧಿಕೃತ ಆದೇಶ

ಬೆಂಗಳೂರು, ನ.29- ಆರೋಗ್ಯ ಸಚಿವರು, ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿ, ಅಹೋರಾತ್ರಿ ಧರಣಿ ಮುಂದುವರೆದ ಬೆನ್ನಲ್ಲೇ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನ ಹೆಚ್ಚಿಸಲು ಮುಂದಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಕಾರ್ಯದರ್ಶಿ ಎನ್‌.ಎಸ್‌‍. ನಕುಲ ಅವರು ಇಂದು ಹೊರಡಿಸಿರುವ ಟಿಪ್ಪಣಿಯಲ್ಲಿ, ರಾಜ್ಯದ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು 2 ಸಾವಿರ ರೂಪಾಯಿ ಹೆಚ್ಚಿಸಲು ಮುಖ್ಯಮಂತ್ರಿಯವರು ನಿರ್ಧರಿಸಿದ್ದು, 2027ರ ಜನವರಿ 1ರಿಂದ ಈ ಹೆಚ್ಚಳ ಜಾರಿಗೆ ಬರಲಿದೆ.

ಈ ಕುರಿತು ಅಗತ್ಯ ಪ್ರಕ್ರಿಯೆ ಆರಂಭಿಸುವಂತೆ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿದ್ದಾರೆ. ನವೆಂಬರ್‌ 28ರಂದು ಮಾನ್ಯ ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಅವರ ಮನವಿಗಳಿಗೆ ಸಂಬಂಧಿಸಿದಂತೆ ಸಕಾರಾತಕವಾಗಿ ಸ್ಪಂದಿಸಿದ್ದರು. ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ಪ್ರತಿ ತಿಂಗಳು 2 ಸಾವಿರ ರೂಪಾಯಿ ಹೆಚ್ಚಿಸುವುದಾಗಿ ಭರವಸೆ ನೀಡಲಾಗಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿದ ಆಶಾ ಕಾರ್ಯಕರ್ತರ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಪ್ರತಿಭಟನೆಯನ್ನು ಹಿಂಪಡೆಯಲು ಒಪ್ಪಿಕೊಂಡರು ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

ನಿನ್ನೆಯ ಸಭೆಯ ಬಳಿಕವೂ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಧರಣಿಯನ್ನು ಮುಂದುವರೆಸಿದ್ದಾರೆ. ಸರ್ಕಾರ ತಮ ಬೇಡಿಕೆ ಈಡೇರಿಕೆಗೆ ಲಿಖಿತ ಭರವಸೆ ನೀಡಬೇಕು ಎಂಬುದು ಅವರ ಆಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸರ್ಕಾರ ಟಿಪ್ಫಣಿಯ ಮೂಲಕ ಲಿಖಿತ ಭರವಸೆ ನೀಡಿದೆ. ಗೌರವ ಧನ ಹೆಚ್ಚಳದ ದಿನಾಂಕ ಕುರಿತು ಕೆಲ ತಕರಾರುಗಳಿದ್ದವು. 2026ರ ಏಪ್ರಿಲ್‌ ನಿಂದ ಪೂರ್ವಾನ್ವಯಗೊಳಿಸಬೇಕು ಎಂಬ ಬೇಡಿಕೆ ಇತ್ತು. ಅದನ್ನು ತಳ್ಳಿ ಹಾಕಿರುವ ರಾಜ್ಯ ಸರ್ಕಾರ 2027ರ ಜನವರಿ 1ರಿಂದ ಜಾರಿಗೆ ಬರುವಂತೆ ಗೌರವಧನ ಹೆಚ್ಚಳಕ್ಕೆ ನಿರ್ಧಾರ ಕೈಗೊಂಡಿದೆ.

ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು 2 ಸಾವಿರ ರೂಪಾಯಿಗೆ ಹೆಚ್ಚಿಸಲು ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮೂಲಕ ಆಶಾ ಕಾರ್ಯಕರ್ತೆಯರಿಗೆ ಲಿಖಿತ ಭರವಸೆ ದೊರೆತಿದೆ. ಆದರೂ ಪ್ರತಿಭಟನೆ ಮುಂದುವರೆದಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಕಳೆದ ಬಜೆಟ್‌ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡಿದ್ದ ಒಂದು ಸಾವಿರ ರೂಪಾಯಿ ಗೌರವ ಧನವನ್ನು ಆಶಾ ಕಾರ್ಯಕರ್ತೆಯರಿಗೂ ಅನ್ವಯ ಮಾಡಬೇಕು ಎಂಬ ಬೇಡಿಕೆಗೆ ಸರ್ಕಾರ ಪ್ರತಿಕ್ರಿಯಿಸಿಲ್ಲ.

RELATED ARTICLES

Latest News