ಬೆಂಗಳೂರು,ಜ.6- ಸುಲಭವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಅನ್ನ ಹಾಕಿದ ರಿಯಲ್ಎಸ್ಟೇಟ್ ಉದ್ಯಮಿ ಮನೆಗೆ ಕನ್ನ ಹಾಕಿದ ಇಬ್ಬರು ಕೆಲಸಗಾರರು ಸೇರಿದಂತೆ ನಾಲ್ವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ 4 ಲಕ್ಷ ನಗದು ಹಾಗೂ 1.3 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರು ಚಾಲಕ ದೊಡ್ಡಬಳ್ಳಾಪುರದ ನರೇಂದ್ರ (28) , ಮನೆಗೆಲಸಗಾರ ಬಿಹಾರ ಮೂಲದ ಮಂಜಿತ್ (28) ಹಾಗೂ ಇಬ್ಬರು ಸ್ನೇಹಿತರಾದ ದೊಡ್ಡಬಳ್ಳಾಪುರದ ಚಂದನ್ (27), ಮಂಜುನಾಥ್ (36) ಬಂಧಿತ ಆರೋಪಿಗಳು.
ಹೆಸರುಘಟ್ಟ ಮುಖ್ಯರಸ್ತೆ, ವಡೇರಹಳ್ಳಿಯ ಡೌನಾಟಾ ಕೌಂಟಿ ವಿಲ್ಲಾವೊಂದರಲ್ಲಿ ವಾಸವಿರುವ ರಿಯಲ್ಎಸ್ಟೇಟ್ ಉದ್ಯಮಿ, ಬಿಲ್ಡರ್ ಗೋಪಾಲ್ ಶಿಂಧೆ ಎಂಬುವವರ ಮನೆಯಲ್ಲಿ ನರೇಂದ್ರ ಕಾರು ಚಾಲಕನಾಗಿ ಹಾಗೂ ಮಂಜಿತ್ ಮನೆಗೆೆಲಸ ಮಾಡಿಕೊಂಡಿದ್ದರು. ಡಿ.23 ರಂದು ಸಂಜೆ ಶಿಂಧೆ ಅವರು ಕುಟುಂಬ ಸಮೇತ ಮಹಾರಾಷ್ಟ್ರ ರಾಜ್ಯದ ಸಿಂಧ್ದುರ್ಗ್ ಜಿಲ್ಲೆಗೆ ಹೋಗುವಾಗ ಕಾರು ಚಾಲಕ ಹಾಗೂ ಮನೆಗೆಲಸದವನನ್ನು ಕರೆದುಕೊಂಡು ಹೋಗಿದ್ದಾರೆ.
ಡಿ.30 ರಂದು ವಾಪಸ್ ಮನೆಗೆ ಬಂದು ನೋಡಿದಾಗ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಮತ್ತು ಹಣ ಕಳ್ಳತನವಾಗಿರುವುದು ಕಂಡು ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮನೆಯ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮಾಹಿತಿಯನ್ನು ಕಲೆಹಾಕಿ ಕಾರ್ಯಾಚರಣೆ ಮುಂದುವರೆಸಿ ,ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಬಸ್ ನಿಲ್ದಾಣದ ಬಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದಲ್ಲಿ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ಹಣವಕಳವು ಮಾಡಿರುವುದಾಗಿ ಹೇಳಿದ್ದಾರೆ.
ಆ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುವ ಮತ್ತು ಮನೆಗೆಲಸ ಮಾಡುವ ಇಬ್ಬರು ನಮ ಸ್ನೇಹಿತರಾಗಿದ್ದು, ಅವರ ಮನೆಯ ಹಿಂಬಾಗಿಲಿನ ಕೀಯನ್ನು ನಮಗೆ ನೀಡಿ, ಕಳ್ಳತನ ಮಾಡುವಂತೆ ತಿಳಿಸಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ತಕ್ಷಣ ಪೊಲೀಸರು ಕಾರ್ಯಾಚರಣೆ ಮುಂದುವರೆಸಿ ದೂರುದಾರರ ಮನೆಯ ಬಳಿಯೇ ಕಾರು ಚಾಲಕ ಮತ್ತು ಮನೆಗೆಲಸದವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.
ಕಳವು ಮಾಡಿದ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಆರೋಪಿಯೊಬ್ಬ ದೊಡ್ಡಬಳ್ಳಾಪುರದ ತನ್ನ ವಾಸದ ಮನೆಯಲ್ಲಿ ಇಟ್ಟಿರುವುದಾಗಿ ಹಾಗೂ ಹಣವನ್ನು ನಾಲ್ವರು ಹಂಚಿಕೊಂಡಿರುವುದಾಗಿ ತಿಳಿಸಿದ್ದಾನೆ.ಆರೋಪಿ ನೀಡಿದ ಮಾಹಿತಿ ಮೇರೆಗೆ, ಆತನ ಮನೆಯಿಂದ 550 ಗ್ರಾಂ ಚಿನ್ನಾಭರಣ, 4 ಕೆ.ಜಿ ಬೆಳ್ಳಿಯ ವಸ್ತುಗಳು ಹಾಗೂ 80ಸಾವಿರ ಹಣ ವಶಪಡಿಸಿಕೊಂಡಿದ್ದಾರೆ.
ಅಲ್ಲದೇ ಉಳಿದ ಮೂವರು ಆರೋಪಿಗಳಿಂದ 3.20ಲಕ್ಷ ರೂ. ಹಾಗೂ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಇನ್್ಸಪೆಕ್ಟರ್ ಶಿವಸ್ವಾಮಿ ಮತ್ತು ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.
ಮಾಲೀಕರ ಮನೆಯಲ್ಲೇ ಕಳ್ಳತನ : ಅಸ್ಸಾಂ ಮೂಲದ ದಂಪತಿ ಬಂಧನ 1.37 ಕೋಟಿ ಮೌಲ್ಯದ ಮಾಲು ಜಪ್ತಿ
ಬೆಂಗಳೂರು,ಜ.6-ಮನೆ ಮಾಲೀಕರು ಕುಟುಂಬ ಸಮೇತ ಹೊಸವರ್ಷಾಚರಣೆಗಾಗಿ ಹೊರ ರಾಜ್ಯಕ್ಕೆ ಹೋಗಿದ್ದಾಗ ಕೆಲಸದಾಕೆ ಗಂಡನನ್ನು ಕರೆಸಿಕೊಂಡು ಕಳ್ಳತನ ಮಾಡಿದ್ದ ಅಸ್ಸಾಂ ಮೂಲದ ದಂಪತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿ 1.37 ಕೋಟಿ ಮೌಲ್ಯದ ಚಿನ್ನಾಭರಣಗಳು ಹಾಗೂ 7 ಕೈಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ.
ಮನೆಗೆಲಸದಾಕೆ ಹಾಜಿರಾ ಬೇಗಂ (19) ಹಾಗೂ ಆಕೆಯ ಪತಿ ಶಬ್ಬೀರ್ ಹುಸೇನ್ (23) ಬಂಧಿತ ದಂಪತಿ. ಇವರು ಮೂಲತಃ ಅಸ್ಸಾಂ ರಾಜ್ಯದ ಅಲೈಚೆರಾ ಗ್ರಾಮದವರು. ನಾಲ್ಕೇ ದಿನದೊಳಗೆ ಕಳವು ಮಾಡಿದ ಅಷ್ಟು ಆಭರಣಗಳನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸದಾಶಿವನಗರದ 8ನೇ ಮುಖ್ಯರಸ್ತೆಯಲ್ಲಿ ವಾಸವಿರುವ ಅಭಿಷೇಕ್ ಎಂಬುವವರ ಮನೆಯಲ್ಲಿ ಮೂರು ವರ್ಷದ ಹಿಂದೆ ಅಸ್ಸಾಂ ಮೂಲದ ಮಹಿಳೆ ಕೆಲಸ ಮಾಡಿಕೊಂಡಿದ್ದು, ತದ ನಂತರ ಕೆಲಸ ಬಿಟ್ಟಿದ್ದರು. ಇದೀಗ ಮೂರು ತಿಂಗಳ ಹಿಂದೆಯಷ್ಟೆ ಮತ್ತೆ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ.
ಈ ಕುಟುಂಬದವರು ಹೊಸ ವರ್ಷದ ಸಂಭ್ರಮಾಚರಣೆಯ ಸಲುವಾಗಿ ಕುಟುಂಬ ಸಮೇತ ಹೊರರಾಜ್ಯಕ್ಕೆ ಡಿ.30 ರಂದು ಹೋಗಿದ್ದಾರೆ. ಅಂದು ಅತ್ತೆಯವರು ಕರೆ ಮಾಡಿ, ಮನೆಯ ಬೀಗದ ಕೀಯನ್ನು ಕೇಳಿದಾಗ ಮನೆಯ ಕೆಲಸದಾಕೆಯು ಮನೆಯಲ್ಲಿಯೇ ಇರುವುದಾಗಿ ತಿಳಿಸಿರುತ್ತಾರೆ. ಅತ್ತೆಯವರು ಮನೆಯ ಬಳಿ ಬಂದು ನೋಡಿದಾಗ ಬೀಗ ಹಾಕಿರುವುದು ಕಂಡು ಬಂದಿದೆ. ತಕ್ಷಣ ಅವರು ಮತ್ತೆ ಕರೆ ಮಾಡಿ ವಿಷಯ ತಿಳಿಸಿದಾಗ ಕಾರಿನ ಚಾಲಕನಿಗೆ ಕರೆ ಮಾಡಿ ಮತ್ತೊಂದು ಮನೆಯ ಕೀಯನ್ನು ತೆಗೆದುಕೊಂಡು ಹೋಗಿ ನೀಡುವಂತೆ ತಿಳಿಸಿರುತ್ತಾರೆ.
ಅದರಂತೆ ಚಾಲಕನು ಕೀಯನ್ನು ನೀಡಿ ಹೋಗಿದ್ದಾನೆ. ಆ ಕೀ ಮೂಲಕ ಮನೆಯ ಬಾಗಿಲನ್ನು ತೆರೆದು ಒಳಗೆ ಹೋಗಿ ನೋಡಿದಾಗ ಬೀರುವಿನ ಬಾಗಿಲು ಒಡೆದಿರುವುದು ಕಂಡು ಸೊಸೆಗೆ ವಿಷಯ ತಿಳಿಸಿದ್ದಾರೆ.
ಮನೆಯ ಮಾಲೀಕರು ತಕ್ಷಣ ತಮ ಪ್ರವಾಸವನ್ನು ಮೊಟಕು ಗೊಳಿಸಿ ಕುಟುಂಬದೊಂದಿಗೆ ವಾಪಸ್ ಮನೆಗೆ ಬಂದಿದ್ದು ಬೀರುವಿನಲ್ಲಿದ್ದ ಚಿನ್ನಾಭರಣಗಳು ಮತ್ತು ದುಬಾರಿ ವಾಚ್ಗಳು ಕಳುವಾಗಿರುವುದು ಗಮನಿಸಿ ಮನೆಗೆಲಸದಾಕೆಯೇ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಕೋರಮಂಗಲದ 8ನೇ ಬ್ಲಾಕ್ನಲ್ಲಿ ನೆಲೆಸಿದ್ದ ಪತಿಯ ಸಮೇತ ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಪತಿಯನ್ನು ಕರೆಯಿಸಿಕೊಂಡು, ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ವಾಚ್ಗಳನ್ನು ಕಳವು ಮಾಡಿರುವುದಾಗಿ ಹೇಳಿದ್ದಾಳೆ.
ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿದ್ದ 787.66 ಗ್ರಾಂ ಚಿನ್ನಾಭರಣ, 291.08 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ 7 ದುಬಾರಿ ವಾಚ್ಗಳನ್ನು ವಶಪಡಿಸಿಕೊಂಡಿದ್ದು ಅವುಗಳ ಒಟ್ಟು ಮೌಲ್ಯ 1.37 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಈ ಕಾರ್ಯಾಚರಣೆಯನ್ನು ಇನ್್ಸಪೆಕ್ಟರ್ ಪ್ರದೀಪ್ ಮತ್ತು ಸಿಬ್ಬಂದಿಗಳ ತಂಡ ಪತ್ತೆಮಾಡುವಲ್ಲಿ ಯಶಸ್ವಿಯಾಗಿದೆ.
ವಿದ್ಯಾರ್ಥಿ ಸೇರಿ ನಾಲ್ವರ ಬಂಧನ : 50 ಲಕ್ಷ ಮೌಲ್ಯದ 60 ದ್ವಿಚಕ್ರ ವಾಹನಗಳ ವಶ
ತಮಿಳುನಾಡಿನಿಂದ ಬಾಡಿಗೆ ಕಾರು ಮಾಡಿಕೊಡು ನಗರಕ್ಕೆ ಬಂದು ದ್ವಿಚಕ್ರ ವಾಹನಗಳನ್ನು ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಒಬ್ಬ ವಿದ್ಯಾರ್ಥಿ ಸೇರಿದಂತೆ ನಾಲ್ವರನ್ನು ಕೆಆರ್ಪುರ ಠಾಣೆ ಪೊಲೀಸರು ಬಂಧಿಸಿ 50 ಲಕ್ಷ ಮೌಲ್ಯದ 60 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ನಿವಾಸಿಗಳಾದ ಕಾರು ಚಾಲಕ ರಂಜಿತ್ಕುಮಾರ್ (28), ಗಾರೆಕೆಲಸಗಾರರಾದ ಮಣಿಗಂಡನ್ (20), ಯುವರಾಜ್ (22), ವಿದ್ಯಾರ್ಥಿ ವಿನೋದ್ಕುಮಾರ್ (18) ಬಂಧಿತರು. ಈ ನಾಲ್ವರು ತಮಿಳುನಾಡಿನಿಂದ ಬಾಡಿಗೆಗೆ ಕಾರು ಮಾಡಿಕೊಂಡು ನಗರಕ್ಕೆ ಬರುತ್ತಿದ್ದರು. ನಂತರ ಈ ನಾಲ್ವರು ಒಂದೊಂದು ಕಡೆಗಳಿಗೆ ಹೋಗಿ ಆ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿಕೊಂಡು ತಮಿಳುನಾಡಿಗೆ ಪರಾರಿಯಾಗುತ್ತಿದ್ದರು.
ಕಳವು ಮಾಡಿದಂತಹ ದ್ವಿಚಕ್ರ ವಾಹನಗಳನ್ನು ವೇಲೂರು, ಒಡಗತ್ತೂರು, ತಿರುಪತ್ತೂರು,ಕೊಯಮತ್ತೂರು ಕಡೆಗಳಲ್ಲಿ ವಿಲೇವಾರಿ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಅಯ್ಯಪ್ಪ ನಗರದ ನಿವಾಸಿಯೊಬ್ಬರು ಮನೆಯ ಪಾರ್ಕಿಂಗ್ ಜಾಗದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಊರಿಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಬೈಕ್ ಇರಲಿಲ್ಲ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಅದರಲ್ಲಿನ ದೃಶ್ಯಾವಳಿಯನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಖಚಿತ ಮಾಹಿತಿಯಂತೆ ತಮಿಳುನಾಡಿನ ಒಡಗತ್ತೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆ ಸಹಚರರೊಂದಿಗೆ ಸೇರಿಕೊಂಡು ದ್ವಿಚಕ್ರ ವಾಹನವನ್ನು ಕಳವು ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಬೆಂಗಳೂರು ಮತ್ತು ಇತರೆ ರಾಜ್ಯಗಳಲ್ಲಿಯೂ ಸಹ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಈ ಇಬ್ಬರು ನೀಡಿದ ಮಾಹಿತಿಯ ಆಧಾರದ ಮೇರೆಗೆ ಕೊಯಂಬತ್ತೂರಿನ ಗಾಂಧಿನಗರ ಬಸ್ ನಿಲ್ದಾಣದ ಬಳಿ ಮತ್ತಿಬ್ಬರು ಸಹಚರರನ್ನು ಬಂಧಿಸಿದ್ದಾರೆ.
ಈ ನಾಲ್ವರು ಆರೋಪಿಗಳ ಮಾಹಿತಿ ಮೇರೆಗೆ ವೇಲೂರು ಜಿಲ್ಲೆಯ ಗುರುರಾಜ್ ಪಾಳ್ಯದಿಂದ 45 ದ್ವಿಚಕ್ರ ವಾಹನಗಳು, ತಿರುಪತ್ತೂರು ಜಿಲ್ಲೆಯ ಗುಡಿಯಾತ್ತಮ್ನಿಂದ-ಮಾದನೂರಿಗೆ ಹೋಗುವ ರಸ್ತೆಯ ಪಕ್ಕದ ಖಾಲಿ ಜಾಗದಿಂದ 6 ದ್ವಿಚಕ್ರ ವಾಹನಗಳನ್ನು, ಆರೋಪಿಗಳ ಸಂಬಂಧಿಕರು ಕೆ.ಆರ್. ಪುರಂ ಠಾಣೆಗೆ ತಂದು ಹಾಜರುಪಡಿಸಿದ 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್್ಸಪೆಕ್ಟರ್ ರಾಮಮೂರ್ತಿ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇತರೆ ಮೂವರು ಸಹಚರರುಗಳ ಪತ್ತೆ ಕಾರ್ಯ ಮುಂದುವರೆದಿದೆ.
