ನವದೆಹಲಿ, ಆ.6- ದೇಶದ ಆರು ರಾಜ್ಯಗಳ ಸುಮಾರು 1.5 ಲಕ್ಷ ಭಾರತೀಯರ ವೈದ್ಯಕೀಯ ದಾಖಲೆಗಳು ಸೋರಿಕೆಯಾಗಿದ್ದು, ಅವುಗಳನ್ನು ಸಿಂಗಾಪುರದಲ್ಲಿರುವ ಸರ್ವರ್‌ಗೆ ವರ್ಗಾಯಿಸಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡಿದೆ.
ಹಿರಿಯ ವಕೀಲ ಕೆ. ಪರಮೇಶ್ವರ್ ವಾದ ಮಂಡಿಸಿ, ನಾನು 2025ರ ಮಾರ್ಚ್‌ನಲ್ಲಿ ದೂರು ದಾಖಲಿಸಿದ್ದೆ. ಆದರೆ ಎಫ್‌ಐಆರ್ ದಾಖಲಿಸಲು ಅಧಿಕಾರಿಗಳು 2025ರ ಆಗಸ್ಟ್‌ವರೆಗೆ ವಿಳಂಬ ಮಾಡಿದರು. ಡೇಟಾ ಯಾವಗ ಸಿಂಗಾಪುರಕ್ಕೆ ಸರ್ವರ್ ಹೋಗಿದೆ ಎಂಬ ಮಾಹಿತಿಯನ್ನೂ ನಾನು ನೀಡಿದ್ದೇನೆ. ಆದರೂ ಎಫ್‌ಐಆರ್ ಇನ್ನೂ ಅಪರಿಚಿತ ವ್ಯಕ್ತಿಗಳ ವಿರುದ್ಧವೇ ದಾಖಲಾಗಿದೆ ಎಂದು ಹೇಳಿದರು.
ಇಂತಹ ತನಿಖೆಯ ಮೇಲೆ ನನಗೆ ಹೇಗೆ ನಂಬಿಕೆ ಬರಬೇಕು? ಅದಕ್ಕಾಗಿಯೇ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ನಿಮ ಮುಂದೆ ಬಂದಿದ್ದೇನೆ ಎಂದು ಅವರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದರು.
ಪರಮೇಶ್ವರ್ ಮತ್ತಷ್ಟು ವಾದ ಮಂಡಿಸಿ, ಇದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಡೇಟಾ ಸೋರಿಕೆ ಎಲ್ಲಿ ಆರಂಭವಾಯಿತು, ಅದಕ್ಕೆ ಯಾರು ಹೊಣೆ ಮತ್ತು ಸೋರಿಕೆಯಾದ ಮಾಹಿತಿ ಎಲ್ಲಿಗೆ ಹೋಗಿದೆ ಎಂಬುದನ್ನು ನಾನು ಗುರುತಿಸಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ನೋಟಿಸ್ ಜಾರಿ ಮಾಡಿ, ಎಂದು ಆದೇಶಿಸಿದರು. ಅರ್ಜಿದಾರರ ಮನವಿಯ ಮೇರೆಗೆ ಕೇಂದ್ರ ಸರ್ಕಾರ ಹಾಗೂ ಸಂಬಂಧಿತ ರಾಜ್ಯಗಳಿಗೆ ಡಸ್ತಿ ಮೂಲಕವೂ ನೋಟಿಸ್ ಜಾರಿಗೊಳಿಸಲು ನ್ಯಾಯಾಲಯ ಅನುಮತಿ ನೀಡಿತು.
ವಿಚಾರಣೆ ವೇಳೆ ನ್ಯಾಯಮೂರ್ತಿ ಜೋಯಾಲ್ಯ ಬಾಗ್ಚಿ, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯನ್ನು ಮರುಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಪರಿಗಣಿಸುವಂತೆ ನಾವು ಈಗಾಗಲೇ ಸಾಲಿಸಿಟರ್ ಜನರಲ್‌ಗೆ ಸೂಚಿಸಿದ್ದೇವೆ, ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಕೆ. ಪರಮೇಶ್ವರ್, ಇಂದಿಗೂ ಎಫ್‌ಐಆರ್‌ನಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66 ಅನ್ನು ಮಾತ್ರ ಅನ್ವಯಿಸಲಾಗಿದೆ. ಅದು ಇಂತಹ ಗಂಭೀರ ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಕಾಗುವುದಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು.
