ಬೆಂಗಳೂರು, ಜ.18- ಸಿಬ್ಬಂದಿಗಳ ಬಹುದಿನದ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಮುನ್ನೂರ 355 ಮಂದಿ ಕಾನ್ಸ್ಟೇಟೆಬಲ್ ಮತ್ತು ಹೆಡ್ ಕಾನ್ಸ್ಟೇಬಲ್ಗಳನ್ನು ಏಕಕಾಲಕ್ಕೆ ಅಂತರ್ ಜಿಲ್ಲಾ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆ ಬಯಸಿದ ಸಿಬ್ಬಂದಿಗಳು ಸ್ವಂತ ಖರ್ಚಿನಲ್ಲಿ ನಿಯೋಜಿಸಿದ ಸ್ಥಳಕ್ಕೆ ತೆರಳಬೇಕು ಹಾಗೂ ಈವರೆಗಿನ ಸೇವಾ ಜೇಷ್ಠತೆಯನ್ನು ಬಿಟ್ಟುಕೊಡಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಇದರಿಮದ ತವರು ಜಿಲ್ಲೆಗೆ ವರ್ಗಾವಣೆಯಾಗಿದ್ದ ಬಹುತೇಕ ಸಿಬ್ಬಂದಿಗಳಿಗೆ ಖುಷಿಯಿದ್ದರೂ, ಈವರೆಗಿನ ಸೇವಾ ಜೇಷ್ಠತೆಯನ್ನು ಕಳೆದುಕೊಂಡ ಕೊರಗು ಕಾಡುವಂತಾಗಿದೆ.
ಸಾಮಾನ್ಯ ಪ್ರಕರಣಗಳಡಿ 10 ವರ್ಷ ಮೇಲ್ಪಟ್ಟ ಸೇವೆಯನ್ನು ಪೂರ್ಣಗೊಳಿಸುತ್ತಿರುವ ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ಗಳನ್ನು ವರ್ಗಾವಣೆಗೆ ಪರಿಗಣಿಸಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ 2022ರಲ್ಲಿ ವರ್ಗಾವಣೆ ವಿಶೇಷ ನಿಯಮಗಳನ್ನು ರೂಪಿಸಲಾಗಿತ್ತು. ಆ ನಿಯಮಗಳನ್ನು ಆಧರಿಸಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ಸಿಬ್ಬಂದಿಗಳ ಪಟ್ಟಿ ಸಿದ್ದಪಡಿಸಲಾಗಿದೆ.
ಆನ್ಲೈನ್ ಪೋರ್ಟಲ್ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳು ಹಾಗೂ ಸ್ವಂತ ಕೋರಿಕೆಯ ಮೇರೆಗೆ ಬಂದಿದ್ದ ಮನವಿಗಳನ್ನು ಆಧರಿಸಿ ವರ್ಗಾವಣೆ ಮಾಡಲಾಗಿದೆ.ಕೋರಿಕೆ ಆಧಾರಿತ ವರ್ಗಾವಣೆಯಾಗಿರುವುದರಿಂದ ಯಾವುದೇ ಭತ್ಯೆಗೆ ಅರ್ಹರಿರುವುದಿಲ್ಲ, ಸದರಿ ವರ್ಗಾವಣೆಯನ್ನು ಸರ್ಕಾರಿ ನೌಕರರ ಪ್ರಸ್ತುತ ಹುದ್ದೆಯಲ್ಲಿ ಒಂದು ಬಾರಿ ಮಾತ್ರ ಪರಿಗಣಿಸುವುದಾಗಿ, ಮತ್ತೊಮೆ ವರ್ಗಾವಣೆಗೆ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವರ್ಗಾವಣೆಗೊಂಡಿರುವವರು ಚಾಲ್ತಿ ಶಿಕ್ಷೆ ಅಥವಾ ಇಲಾಖಾ ವಿಚಾರಣೆಯನ್ನು ಎದುರಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದಾದರೂ ಸಿಬ್ಬಂದಿಗಳು ವರ್ಗಾವಣೆಗೆ ಅರ್ಹರಿಲ್ಲದೆ ಇದ್ದರೆ ತಕ್ಷಣವೇ ಕಚೇರಿಗೆ ಮಾಹಿತಿ ನೀಡಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರ ಆಡಳಿತ ವಿಭಾಗದ ಕಚೇರಿ ಸೂಚನೆ ನೀಡಿದೆ.
ನಿಗದಿತ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳುವ ವೇಳೆಯಲ್ಲಿ ಈ ಹಿಂದಿನ ಸೇವಾ ಜೇಷ್ಠತೆಯನ್ನು ಬಿಟ್ಟುಕೊಡುವ ಹೇಳಿಕೆಯನ್ನು ದೃಢೀಕರಿಸಿಕೊಳ್ಳಲು ಸೂಚಿಸಲಾಗಿದೆ.
ಕೆಲವು ಸಿಬ್ಬಂದಿಗಳು ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ವರ್ಗಾವಣೆ ಪಡೆದುಕೊಂಡಿದ್ದಾರೆ. ಆದರೆ ಬೆಂಗಳೂರಿನಿಂದ ಅನ್ಯ ಜಿಲ್ಲೆಗೆ ವರ್ಗಾವಣೆಯಾಗಿರುವವರ ಸಂಖ್ಯೆ ಕಡಿಮೆ ಇದೆ. ಮಂಗಳೂರು, ಉಡುಪಿ, ರಾಮನಗರ, ಚಿಕ್ಕಬಳ್ಳಾಪುರ, ಮೈಸೂರು, ಕೊಡಗು, ಚಿಕ್ಕಮಗಳೂರು, ಬಾಗಲಕೋಟೆ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಂದ ಹೆಚ್ಚಿನ ಸಿಬ್ಬಂದಿಗಳು ಬೆಳಗಾವಿ, ಚಿತ್ರದುರ್ಗ, ಹಾವೇರಿ, ವಿಜಯನಗರ, ದಾವಣಗೆರೆಯಂತಹ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
355 ಸಿಬ್ಬಂದಿಗಳನ್ನು ಏಕಕಾಲಕ್ಕೆ ವರ್ಗಾವಣೆ ಮಾಡುವ ಮೂಲಕ ಪೊಲೀಸ ಇಲಾಖೆ ಸಿಬ್ಬಂದಿಗಳ ಬಹುದಿನದ ಬೇಡಿಕೆಗೆ ಸ್ಪಂದಿಸಿದೆ. ಅಂತರ್ ಜಿಲ್ಲೆ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು. ಪತಿ ಪತ್ನಿ ಪ್ರಕರಣಗಳನ್ನು ಪರಿಗಣಿಸಬೇಕು ಎಂದು ಪೊಲೀಸ್ ಸಿಬ್ಬಂದಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಮನೆ ಬಾಗಿಲಿಗೆ ಹಲವಾರು ಬಾರಿ ಸುತ್ತು ಹಾಕಿದ್ದರು.
