Thursday, April 16, 2026
Homeರಾಜ್ಯಸಿಎಲ್‌-7 ಲೈಸೆನ್ಸ್‌ಗೆ ಲಂಚಕ್ಕೆ ಬೇಡಿಕೆ : ಸ್ಪೋಟಕ ಆಡಿಯೋ ಬಿಡುಗಡೆ ಮಾಡಿದ ಬಿಜೆಪಿ

ಸಿಎಲ್‌-7 ಲೈಸೆನ್ಸ್‌ಗೆ ಲಂಚಕ್ಕೆ ಬೇಡಿಕೆ : ಸ್ಪೋಟಕ ಆಡಿಯೋ ಬಿಡುಗಡೆ ಮಾಡಿದ ಬಿಜೆಪಿ

BJP releases explosive audio about demand for bribe for CL-7 license

ಬೆಂಗಳೂರು,ಜ.18- ಅಬಕಾರಿ ಇಲಾಖೆಯಲ್ಲಿ ಸಿಎಲ್‌-7 ಲೈಸೆನ್ಸ್ ಮಂಜೂರು ಮಾಡಲು ಸಚಿವ ಆರ್‌.ವಿ.ತಿಮಾಪುರ ಹಾಗೂ ಅವರ ಪುತ್ರ ಮತ್ತು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುವ ಸ್ಪೋಟಕ ಆಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ಎಂ.ರವಿಕುಮಾರ್‌ ಅವರು ಪಕ್ಷದ ಕಚೇರಿಯಲ್ಲಿ ಅಬಕಾರಿ ಸಚಿವ ಆರ್‌.ವಿ.ತಿಮಾಪುರ ಪರವಾಗಿ ಜಿಲ್ಲಾಧಿಕಾರಿಗಳು ಮಧ್ಯವರ್ತಿಗಳಿಂದ ಲಂಚ ಕೇಳಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆಯನ್ನು ಬಿಡುಗಡೆ ಮಾಡಿದರು.

1 ನಿಮಿಷ 12 ಸೆಕೆಂಡ್‌ಗಳ ಮಾತುಕತೆ ಇರುವ ಈ ಆಡಿಯೋದಲ್ಲಿ ಅಬಕಾರಿ ಜಿಲ್ಲಾಧಿಕಾರಿ ಜಗದೀಶ್‌, ಸೂಪರಿಡೆಂಟ್‌ ತಮಣ್ಣ ಹಾಗೂ ಕಾನ್‌ಸ್ಟೇಬಲ್‌ ಲಕ್ಕಪ್ಪ ಗಣಿ ಅವರುಗಳು ನಡೆಸಿರುವ ಆಡಿಯೋದಲ್ಲಿ ಸಚಿವ ತಿಮಾಪುರ ಅವರಿಗೆ ಎಷ್ಟು ಹಣ ನೀಡಬೇಕು? ಇಲ್ಲದಿದ್ದರೆ ಲೈಸೆನ್ಸ್ ಯಾವ ಕಾರಣಕ್ಕೆ ವಿಳಂಬವಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ ಅಶೋಕ್‌, ಅಬಕಾರಿ ಮಂತ್ರಿ ಆರ್‌.ಬಿ.ತಿಮಾಪುರ ಅವರು ಅಧಿಕಾರದಲ್ಲಿ ಒಂದೇ ಒಂದು ಕ್ಷಣವೂ ಮುಂದುವರೆಯಬಾರದು. ಕನಿಷ್ಠಪಕ್ಷ ಸಾರ್ವಜನಿಕ ಜೀವನದಲ್ಲಿ ಕಿಂಚಿತ್ತಾದರೂ ಘನತೆ ಗೌರವ ಇದ್ದರೆ ತಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪುಟದಿಂದ ವಜಾಗೊಳಿಸಲಿ ಎಂದು ಆಗ್ರಹಿಸಿದರು.

ಒಂದು ವೇಳೆ ತಿಮಾಪುರ ಅವರಿಂದ ಸಿಎಂ ರಾಜೀನಾಮೆ ಪಡೆಯದಿದ್ದರೆ ಮುಖ್ಯಮಂತ್ರಿಗೆ ಅಬಕಾರಿ ಇಲಾಖೆಯಿಂದ 85% ಕಮೀಷನ್‌ ಹೋಗುತ್ತದೆ ಎಂದರ್ಥ. ನಿಮ ಮೇಲೆ ಕಳಂಕ ಬರಬಾರದೆಂದರೆ ಇಂಥ ಕಳಂಕಿತ ಸಚಿವನನ್ನು ಸಂಪುಟದಿಂದ ಕಿತ್ತು ಹಾಕುವ ಧೈರ್ಯ ತೋರಿ ಎಂದು ಸವಾಲು ಹಾಕಿದರು.

ಅಬಕಾರಿ ಡಿಸಿ ಜಗದೀಶ್‌ ನಾಯಕ್‌ ಎ1 ಖದೀಮ. ಸೂಪರಿಡೆಂಟ್‌ ತಮಣ್ಣ 2ನೇ ಖದೀಮ. ಲಕ್ಕಪ್ಪ ಗಣಿ ಹೆಸರಿನಲ್ಲೇ ಗಣಿ ಇದೆ. ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆಡಿಯೋದಲ್ಲಿ ಸಚಿವರಿಗೆ ತಿಂಗಳಿಗೆ ಎಷ್ಟೆಷ್ಟು ಲಂಚ ಕೊಡಬೇಕು? ಕೊಡದಿದ್ದರೆ ಲೈಸೆನ್ಸ್ ಹೇಗೆ ವಿಳಂಬ ಮಾಡುತ್ತಾರೆ ಎಂಬುದನ್ನು ಅವರೇ ಬಾಯ್ಬಿಟ್ಟಿದ್ದಾರೆ. ಇದಕ್ಕಿಂತ ಇನ್ನೇನು ದಾಖಲೆ ಬೇಕು ಎಂದು ಪ್ರಶ್ನೆ ಮಾಡಿದರು.

ಸಿಎಲ್‌-7 ಒಟ್ಟು 750 ಲೈಸೆನ್ಸ್ ನೀಡಿದ್ದಾರೆ. ಪ್ರತಿ ಸಿಎಲ್‌-7ಗೆ ಒಂದೂವರೆ ಕೋಟಿ ಲಂಚಕ್ಕೆ ಬೇಡಿಕೆಗಳಿವೆ. 650 ಸಿಎಲ್‌-2 ಸನ್ನದುಗಳು ಒಂದೂವರೆ ಕೋಟಿಗೆ ಹರಾಜು ಮಾಡಲಾಗಿದೆ. ಇದರಿಂದ 950 ಕೋಟಿ ಕಿಕ್‌ಬ್ಯಾಕ್‌ ಆಗಿದೆ.

ಸಿಎಲ್‌-9 ಲೈಸೆನ್‌್ಸನನ್ನು ಒಂದು ಕೋಟಿಗೆ, 92 ಕೋಟಿ ಹಣವನ್ನು ಪಡೆಯಲಾಗಿದೆ. ಒಂದು ಮೈಕ್ರೋಬ್ರೆವರಿಗಳಿಗೆ 2.50 ಕೋಟಿ ರೂ. ವಸೂಲಿ ಮಾಡಲಾಗಿದೆ. ಒಟ್ಟು ರಾಜ್ಯದಲ್ಲಿ 550 ಮೈಕ್ರೋಬ್ರೆವರಿಗಳಿವೆ. ಇಷ್ಟು ಹಣ ಯಾರ ಜೇಬು ಸೇರಿದೆ ಎಂದು ಅಶೋಕ್‌ ಪ್ರಶ್ನೆ ಮಾಡಿದರು.
ನಾವು ಏನೇ ಆರೋಪ ಮಾಡಿದರೂ ಸರ್ಕಾರ ಸಾಕ್ಷಿ ಕೊಡಿ ಎನ್ನುತ್ತಿದ್ದರು. ಈಗ ಸಾಕ್ಷಿ ಸಮೇತ ಆಡಿಯೋವನ್ನು ಬಿಡುಗಡೆ ಮಾಡಿದ್ದೇವೆ. ಸಚಿವರಿಗೆ ತಿಂಗಳಿಗೆ ಇಂತಿಷ್ಟು ಕೊಡಬೇಕೆಂದು ಆಡಿಯೋದಲ್ಲಿ ಅಬಕಾರಿ ಡಿಸಿಯೇ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ತರಾಟೆಗೆ ತೆಗೆದುಕೊಂಡರು.

ಲಂಚ ಕೊಟ್ಟಹಣ 4 ಟೇಬಲ್‌ಗಳಿಗೆ ಹೋಗಬೇಕಾಗುತ್ತದೆ ಎಂದು ಅಧಿಕಾರಿಯೇ ಹೇಳಿದ್ದಾರೆ. ಎಲ್ಲರಿಗೂ ಹಣ ನೀಡಬೇಕು. ಬೇಗ ಹಣ ಕೊಟ್ಟರೆ ಸ್ಪಾಟ್‌ ಲೈಸೆನ್‌್ಸ ಸಿಗುತ್ತದೆ ಎಂದು ಹೇಳಿದ್ದಾರೆ. ಇದು ಗಾಂಧಿವಾದಿಗಳ ಸರ್ಕಾರವೇ? ಎಂದು ವಾಗ್ದಾಳಿ ನಡೆಸಿದರು.

ವಾಲೀಕಿ ಹಗರಣದಲ್ಲಿ 180 ಕೋಟಿ ಲೂಟಿ ಮಾಡಿ ಬಳ್ಳಾರಿ ಚುನಾವಣೆ ಮಾಡಿದರು. ಅಬಕಾರಿ ಇಲಾಖೆಯಲ್ಲೂ ಲೂಟಿ ಮಾಡಿ ಮಹಾರಾಷ್ಟ್ರ, ಬಿಹಾರ ಚುನಾವಣೆಗಳಿಗೆ ಬಳಸಲಾಗಿದೆ. ಆದರೆ ಪ್ರಧಾನಿ ನರೇಂದ್ರಮೋದಿಯವರೇ ಕರ್ನಾಟಕ ಮದ್ಯದ ಹಣ ಮಹಾರಾಷ್ಟ್ರ ಚುನಾವಣೆಗೆ ಹೋಗಿದೆ ಎಂದು ಆರೋಪಿಸಿದರು ಎಂದು ಕಿಡಿಕಾರಿದರು. ಇಷ್ಟು ದಿನ ಡ್ರಗ್‌ ನಶೆ ಆಯಿತು. ಈಗ ಎಣ್ಣೆ ನಶೆ. ಇದು ನಶೆಗಳ ಸರ್ಕಾರ. ಅಧಿಕಾರದ ನಶೆ, ಅಧಿಕಾರಕ್ಕಾಗಿ ದೆಹಲಿಗೆ ಹೋಗುತ್ತಾರೆ. ಈಗಲೂ ಡಿಕೆಶಿ ದೆಹಲಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೈಸೂರಲ್ಲೂ ಅಧಿಕಾರಿಯೊಬ್ಬರಿಗೆ ಧಮಕಿ ಹಾಕಲಾಗಿದೆ. ಮೈಸೂರಿಂದ ಬಿಜೆಪಿ ನಾಯಕರು ಬನ್ನಿ ಎಂದು ಕರೆಯುತ್ತಿದ್ದಾರೆ. ಕೋಗಿಲು ಲೇಔಟ್‌ನ ಅಕ್ರಮ ವಲಸಿಗರಿಗೆ ಮನೆ ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ವಿಧಾನಸಭೆಯಲ್ಲಿ ಡ್ರಗ್‌ ಮಾಫಿಯಾ ಬಗ್ಗೆ ಮಾತಾಡಿದ್ದೆ. ಇದಕ್ಕೆ ಗೃಹ ಸಚಿವರು ಉತ್ತರ ಕೊಟ್ಟಿದ್ದಾರೆ. ಇವರು ಗೊತ್ತಿಲ್ಲ ಸಚಿವರು. ರಾಜ್ಯದಲ್ಲಿ ಎಲ್ಲ ಸರಿ ಇದೆ ಎನ್ನುತ್ತಾರೆ. ಪೊಲೀಸ್‌‍ ಇಲಾಖೆ ಮೇಲೆಯೇ ನಿನ್ನೆ ಸಭೆಯಲ್ಲಿ ಕಿಡಿಕಾರಿದ್ದಾರೆ. ನಿದ್ದೆರಾಮಯ್ಯನವರು ಎದ್ದು ಪ್ರಗತಿ ಪರಿಶೀಲನೆ ಸಭೆ ಮಾಡಿ ಪೊಲೀಸ್‌‍ ಇಲಾಖೆಯನ್ನು ಬೆತ್ತಲೆ ಮಾಡಿದ್ದಾರೆ ಎಂದು ಗುಡುಗಿದರು.
ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ್‌ ಮಾತನಾಡಿ, ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬ ಗಾದೆ ಮಾತಿದೆ. ಈಗ ಸರ್ಕಾರ ಮೂರು ಬಿಟ್ಟವರು ಅನಿಸಿಕೊಂಡಿದೆ. ನಾವು ಹೋರಾಟ ಮಾಡುತ್ತೇವೆ. ಸರ್ಕಾರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೌರವ ಇಲ್ಲ. ಮಹಾತಾ ಗಾಂಧಿಯವರ ಹೆಸರು ಹೇಳಿ ಅಧಿಕಾರ ಮಾಡುತ್ತಾರೆ. ಅವರ ಹೆಸರೇಳಿಕೊಂಡೆ ಲೂಟಿ ಮಾಡುತ್ತಿದ್ದಾರೆ. ಇದನ್ನ ಜನ ಯೋಚನೆ ಮಾಡಬೇಕು ಎಂದು ಹೇಳಿದರು.

ವಿರೋದ ಪಕ್ಷಗಳು ಅರೋಪ ಮಾಡಿದಾಗ ತಪ್ಪು ತಿದ್ದಿಕೊಳ್ಳಬೇಕು. 3642 ಕೋಟಿ ರೂ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಇದು ಈಗ ಲೈಸೆನ್ಸ್ ಗಳಿಗೆ ಕೊಡಬೇಕಾದ ಲಂಚವನ್ನು ಲೀಸ್‌‍ ಗೆ ಕೊಡುತ್ತಾರೆ. ಕೆಲವು ಇಲಾಖೆಗಳನ್ನ ಸೇಲ್‌ ಗೆ ಕೊಡುತ್ತಿದ್ದಾರೆ. ಕಪ್ಪು ಚುಕ್ಕೆ ತೋರಿಸಿ ಎಂದು ಸಿಎಂ ಹೇಳಿದ್ದರು. ಇಗ ಕಪ್ಪುಚುಕ್ಕಿ ಅಲ್ಲಾ ಕರಿ ಕಾಗೆ ಆಗಿದ್ದಿರಾ? ಅಭಿವೃದ್ಧಿ ಇಲ್ಲಾ, ಲೂಟಿನಾದರೂ ನಿಲ್ಲಬೇಕಲ್ಲಾ ಎಷ್ಟು ಲೂಟಿ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

RELATED ARTICLES

Latest News