Thursday, April 16, 2026
Homeರಾಜ್ಯಮದ್ಯದಂಗಡಿ ಲೈಸೆನ್ಸ್‌ಗೆ ಲಂಚ : ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಣೆ

ಮದ್ಯದಂಗಡಿ ಲೈಸೆನ್ಸ್‌ಗೆ ಲಂಚ : ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಣೆ

Bribe for liquor license: CM refuses to respond

ಮೈಸೂರು, ಜ.18- ಮದ್ಯದಂಗಡಿಗೆ ಲೈಸೆನ್ಸ್‌ ನೀಡಲು ಎರಡೂವರೆ ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಅಬಕಾರಿ ಸಚಿವರ ವಿರುದ್ಧ ಬಿಜೆಪಿ ಮಾಡಿರುವ ಆರೋಪಕ್ಕೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದೆ ಶೇ.40ರಷ್ಟು ಕಮಿಷನ್‌ ಆರೋಪ ಮಾಡಿದ್ದು ಯಾರು? ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬಕಾರಿ ಇಲಾಖೆಯ ಜಿಲ್ಲಾ ಅಧೀಕ್ಷಕರನ್ನು ಲೋಕಾಯುಕ್ತ ಪೊಲೀಸರು ಲಂಚ ಪಡೆಯುವಾಗ ಬಂಧಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಉಪ್ಪು ತಿಂದವರು ನೀರು ಕುಡಿಯುತ್ತಾರೆ. ನಾವು ಅಂತಹ ವಿಚಾರಗಳಲ್ಲಿ ಯಾರನ್ನೂ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಹಗರಣದಲ್ಲಿ ಅಬಕಾರಿ ಸಚಿವರ ಹೆಸರು ಕೇಳಿ ಬರುತ್ತಿದೆ ಎಂದು ಬಿಜೆಪಿ ಮಾಡುತ್ತಿರುವ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ಈ ಹಿಂದೆ ಬಿಜೆಪಿಯ ಸರ್ಕಾರದ ಅವಧಿಯಲ್ಲಿ ಶೇ.40ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ ಎಂದು ಆರೋಪ ಮಾಡಿದ್ದು ಯಾರು? ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅಲ್ಲವೇ ಎಂದು ಮರು ಪ್ರಶ್ನೆ ಮಾಡಿದರು.

ಬಳ್ಳಾರಿ ಬ್ಯಾನರ್‌ ಗಲಭೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ಮತ್ತು ಮುಂದಿನ ದಿನಗಳಲ್ಲಿ ನಡೆಯಬಹುದಾದ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ವಿರೋಧ ಪಕ್ಷದಲ್ಲಿದ್ದಾಗ ಹಲವು ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸಿದ್ದೇವೆ. ಅವರು ಯಾವ ಪ್ರಕರಣವನ್ನು ಸಿಬಿಐಗೆ ವಹಿಸಲಿಲ್ಲ. ಈಗ ಬಳ್ಳಾರಿ ಗಲಭೆ ಪ್ರಕರಣವನ್ನು ಸಿಬಿಐ ವಹಿಸಿ ಎಂದು ಕೇಳುವ ನೈತಿಕತೆ ಬಿಜೆಪಿಯವರಿಗೆ ಇದೆಯೇ ಎಂದು ಪ್ರಶ್ನಿಸಿದರು.

ಅವರ ಆಡಳಿತದಲ್ಲಿ ಬಿಜೆಪಿಯವರು ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿರುವುದನ್ನು ತೋರಿಸಲಿ ಎಂದು ಸವಾಲು ಹಾಕಿದರು.ಮೊದಲ ಅವಧಿಯಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಡಿವೈಎಸ್‌‍ಪಿ ಗಣಪತಿ ಆತಹತ್ಯೆ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿದ್ದ ಕೆ.ಜೆ.ಜಾರ್ಜ್‌ ಪ್ರಕರಣ, ಧರ್ಮಸ್ಥಳದಲ್ಲಿ ಸೌಜನ್ಯ ಕೊಲೆ, ಲಾಟರಿ ಹಗರಣ, ಉತ್ತರಕನ್ನಡ ಜಿಲ್ಲೆಯಲ್ಲಿ ಪರೇಶ್‌ ಮೆಸ್ತಾ ಸಾವು ಸೇರಿದಂತೆ ಏಳೆಂಟು ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ ಹೇಳಿದರು.

ಬಳ್ಳಾರಿ ಗಲಭೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಜನಾಂದೋಲನ ಮಾಡುವುದಕ್ಕೆ ನಮ ಅಭ್ಯಂತರವಿಲ್ಲ. ವಿರೋಧ ಪಕ್ಷವಾಗಿ ಅವರು ಯಾವುದೇ ರೀತಿಯ ಪ್ರತಿಭಟನೆ ಮಾಡಬಹುದು. ಸರ್ಕಾರವಾಗಿ ಅವರಿಗೆ ಯಾವ ರೀತಿ ಉತ್ತರ ನೀಡಬೇಕು ಅದನ್ನು ನಾವು ಕೊಡುತ್ತೇವೆ ಎಂದರು.

ಬಳ್ಳಾರಿಯಲ್ಲಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್‌‍ ನಾಯಕರನ್ನು ಏಕವಚನದಲ್ಲಿಯೇ ನಿಂದಿಸಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಜನಾರ್ದನ ರೆಡ್ಡಿ ಬಳ್ಳಾರಿ ಭೇಟಿ ನೀಡಬಾರದು ಎಂದು ನಿಬಂಧ ಹಾಕಿದ್ದು ಯಾರು? ನೆನಪಿದೆಯೇ? ಆಗಿನ ಲೋಕಾಯುಕ್ತ ಸಂತೋಷ ಹೆಗ್ಡೆ ತಮ ವರದಿಯಲ್ಲಿ ರಿಪಬ್ಲಿಕ್‌ ಆಫ್‌ ಬಳ್ಳಾರಿ ಎಂದು ಬರೆದಿದ್ದರು. ಇದೆಲ್ಲಾ ಆಗಿದ್ದು ಜನಾರ್ದನ ರೆಡ್ಡಿಯಿಂದ ಅಲ್ಲವೇ ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಸರ್ವಾಧಿಕಾರಿ ಆಡಳಿತದ ಮೇಲೆ ಹೆಚ್ಚು ನಂಬಿಕೆ. ಈ ಹಿಂದೆ ಬಳ್ಳಾರಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಎನ್‌.ವೈ.ಹನುಮಂತಪ್ಪ ಅಭ್ಯರ್ಥಿಯಾಗಿದ್ದರು. ಅವರ ಪರವಾಗಿ ಪ್ರಚಾರ ನಡೆಸಲು ವಿರೋಧ ಪಕ್ಷದ ನಾಯಕನಾಗಿದ್ದ ನಾನು ಮತ್ತು ಮತ್ತೊಬ್ಬ ನಾಯಕ ಸಿ.ಎಂ.ಇಬ್ರಾಹಿಂ ಬಳ್ಳಾರಿಗೆ ಹೋಗಿದ್ದೆವು. ಪ್ರಚಾರ ಮಾಡಲು ನಮಗೆ ಅಲ್ಲಿ ಜಾಗವನ್ನೇ ಕೊಟ್ಟಿರಲಿಲ್ಲ. ಕೊನೆಗೆ ದೇವಸ್ಥಾನವೊಂದರ ಬಳಿ ಪ್ರಚಾರ ಮಾಡಿ ಬರಬೇಕಾಯಿತು. ಅವರಿಗೆ ಪ್ರಜಾಪ್ರಭುತ್ವದಲ್ಲಿ ಹಾಗೂ ಸಂಸದೀಯ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ಸಂಸ್ಕೃತಿಯು ಇಲ್ಲ. ಗೂಂಡಾಗಿರಿ ಮಾಡಿಕೊಂಡು ಬದುಕುವವರಿಂದ ನಾವು ಪಾಠ ಕಲಿಯಬೇಕೆ? ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌‍ ಪಕ್ಷ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡಿದೆ. ಬಳ್ಳಾರಿ ಗಲಭೆ ಮತ್ತು ಅನಂತರ ನಿನ್ನೆ ನಡೆದ ಪ್ರತಿಭಟನೆ ಹಿಂದೆ ರಾಜಕೀಯ ದುರುದ್ದೇಶ ಹೊರತುಪಡಿಸಿದರೆ ಬೇರೆ ಯಾವ ಅಂಶಗಳು ಇಲ್ಲ ಕಾಣುತ್ತಿಲ್ಲ ಎಂದರು.

ಪ್ರತಿವರ್ಷದ ಆರಂಭದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಸುವುದು ಕಡ್ಡಾಯವಾಗಿದೆ. ಅದರಂತೆ ಜನವರಿ 22 ರಿಂದ ವಿಧಾನ ಮಂಡಲ ಅಧಿವೇಶನ ಕರೆಯಲಾಗಿದೆ. ಆ ವೇಳೆ ಉದ್ಯೋಗ ಖಾತ್ರಿ ಯೋಜನೆ ಬದಲಾವಣೆ ಕುರಿತು ಚರ್ಚೆ ನಡೆಸಲಾಗುವುದು ಎಂದರು.
ಈ ಹಿಂದೆ ಡಾ.ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ಜಾರಿಗೆ ತಂದಿದ್ದ ಉದ್ಯೋಗ, ಮಾಹಿತಿ, ಆಹಾರ ಮತ್ತು ಶಿಕ್ಷಣ ಹಕ್ಕು ಕಾಯಿದೆಗಳನ್ನು ನರೇಂದ್ರ ಮೋದಿ ಸರ್ಕಾರ ನಾಶ ಮಾಡಲು ಪ್ರಯತ್ನಿಸುತ್ತಿದೆ. ವಿಧಾನಮಂಡಲ ಅಧಿವೇಶನದಲ್ಲಿ ಈ ವಿಷಯ ಚರ್ಚೆ ನಡೆಸಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.

RELATED ARTICLES

Latest News