ಬೆಂಗಳೂರು,ಜ.19- ಆಧುನಿಕ ಜೀವನ ಶೈಲಿಯಿಂದ ಮುನುಷ್ಯನ ಆಯಸ್ಸುಕ್ಷೀಣಿಸುತ್ತಿದ್ದು, ನಮ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಲು ಸಾಂಪ್ರದಾಯಿಕ ಪದ್ಧತಿಯ ಸಿರಿಧಾನ್ಯಗಳ ಆಹಾರ ಸೇವನೆಗೆ ಮರಳಬೇಕಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಬೆಂ.ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.
ದೇವನಹಳ್ಳಿಯಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿತ್ಯ ನವಣೆ, ಸಜ್ಜೆ, ರಾಗಿ ಮತ್ತು ಜೋಳದಂತಹ ಸಿರಿಧಾನ್ಯ ಆಹಾರ ಸೇವನೆ ರೂಢಿಸಿಕೊಳ್ಳುವುದು ಅಗತ್ಯ ಎಂದರು.
ಭಾರತದಲ್ಲಿ ಹಿಂದಿನ ಕಾಲದಲ್ಲಿ ಪೂರ್ವಜರು ಶೇ. 75 ರಷ್ಟು ಕೃಷಿ ಕೆಲಸದಲ್ಲಿ ತೊಡಗಿ, ಸಿರಿಧಾನ್ಯದ ಆಹಾರ ಹಾಗೂ ಹಣ್ಣು-ಹಂಪಲು ಸೇವಿಸುತ್ತಾ, ಗಟ್ಟಿ ಶರೀರದಿಂದ 100 ವರ್ಷ ಜೀವಿಸುತ್ತಿದ್ದರು. ಅಂದಿನ ಆಹಾರ ಪದ್ಧತಿಯಿಂದ ಸಮತೋಲನ ಜೀವನ ನಡೆಸಲು ಸಾಧ್ಯವಾಗುತ್ತಿತ್ತು ಎಂದು ಹೇಳಿದರು.
ಇಂದಿನ ಪೀಳಿಗೆ ಫಾಸ್ಟ್ ಫುಡ್ ಸೇವನೆಗೆ ಮೊರೆ ಹೋಗುತ್ತಿದ್ದಾರೆ. ಇದು ತಿನ್ನಲು ರುಚಿ ರುಚಿಯಾಗಿದ್ದರೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಸಿರಿಧಾನ್ಯಗಳ ಆಹಾರ ಸೇವನೆ ಬಗ್ಗೆ ಜಾಗೃತಿ ಅತ್ಯವಶ್ಯವಾಗಿದೆ. ಜತೆಗೆ ಹುಟ್ಟುಹಬ್ಬದ ಸಮಯದಲ್ಲಿ ಮಕ್ಕಳಿಗೆ ಕೇಕ್ ಬದಲು ಸಿರಿಧಾನ್ಯ, ಹಾಲು, ರಾಗಿ ಮಾಲ್‌್ಟ ಸೇವನೆಗೆ ನೀಡಬೇಕು. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ವೃದ್ಧಿಗೂ ಸಹಕಾರಿಯಾಗುತ್ತದೆ. ಇದರ ಅರಿವು ಮೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ಪಾಲಕರ ಮೇಲಿದೆ ಎಂದು ಸಚಿವರು ಕಿವಿ ಮಾತು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ವೃದ್ಧಿಸುವ ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡಿ, ಸಿರಿಧಾನ್ಯ ಬೆಳೆಯುವ ರೈತರನ್ನು ಪ್ರೋತ್ಸಾಹಿಸುತ್ತಿವೆ ಎಂದರು.ದೇವನಹಳ್ಳಿ ಟೌನ್ ಕ್ರೀಡಾಂಗಣದಿಂದ ನಗರದ ವಿವಿಧ ರಸ್ತೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಸಿರಿಧಾನ್ಯ ಜಾಗೃತಿ ನಡಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಿ.ರಾಜಣ್ಣ, ತಾಲ್ಲೂಕು ಅಧ್ಯಕ್ಷ ಸಿ.ಜಗನ್ನಾಥ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕಲಾವತಿ, ಸಹಾಯಕ ನಿರ್ದೇಶಕರಾದ ಸುಶೀಲಮ, ತಹಸೀಲ್ದಾರ್ ಅನಿಲ್ ಕುಮಾರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ರವಿಕುಮಾರ್, ಕೃಷಿಕ ಸಮಾಜದ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
