ಬೆಂಗಳೂರು: ಅಭಿಮಾನಿಯೊಬ್ಬರು ನೀಡಿದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕರಿಸಲು ನಿರಾಕರಿಸಿ ವಾಪಸ್ ನೀಡಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಸಿಎಂ ಕಾರಿನಲ್ಲಿ ಆಗಮಿಸುತ್ತಿದ್ದ ವೇಳೆ ಕೆಲ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅವರಿಗೆ ಮನವಿ ಪತ್ರ ಸಲ್ಲಿಸಲು ಮುಂದಾದರು. ಇದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ಸಿಎಂಗೆ ನೀಡಿದರು. ಆದರೆ ಸಿಎಂ ಸಿದ್ದರಾಮಯ್ಯ ಅವರು ಫೋಟೋವನ್ನು ಸ್ವೀಕರಿಸದೇ ಅದನ್ನೇ ವಾಪಸ್ ನೀಡಿ, ಆತನನ್ನು ದುರುಗುಟ್ಟಿ ನೋಡಿದ್ದಾರೆ ಎನ್ನಲಾಗಿದೆ. ಇದಕ್ಕೆ ವಿರುದ್ಧವಾಗಿ, ಚಾಣಕ್ಯನ ಕುರಿತ ಪುಸ್ತಕವನ್ನು ಮತ್ತೊಬ್ಬ ಅಭಿಮಾನಿ ನೀಡಿದಾಗ ಅದನ್ನು ಸಿಎಂ ಸ್ವೀಕರಿಸಿದ್ದಾರೆ. ಈ ಘಟನೆಯು ರಾಯರ ಫೋಟೋ ತಿರಸ್ಕಾರದ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ವಿಷಯದ ಬಗ್ಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, “ಸಿದ್ದರಾಮಯ್ಯ ಅವರಿಗೆ ಹಿಂದೂ ದೇವರನ್ನು ಕಂಡರೆ ಆಗುವುದಿಲ್ಲ. ತಿಲಕ, ನಾಮ ಹಾಗೂ ಕೃಷ್ಣನನ್ನು ಕಂಡರೂ ಅವರಿಗೆ ಇಷ್ಟವಿಲ್ಲ. ಅವರಿಗೆ ಟೋಪಿ ಕಂಡರೆ ಮಾತ್ರ ಖುಷಿಯಾಗುತ್ತದೆ. ಟಿಪ್ಪು ಜಯಂತಿ ಆಚರಣೆ ವೇಳೆ ಕೋಮು ಗಲಭೆಗಳು ನಡೆದವು. ಕೋಗಿಲು ಲೇಔಟ್‌ನಲ್ಲಿ ಮುಸ್ಲಿಮರಿಗೆ ಮನೆಗಳನ್ನು ನೀಡಿರುವುದು ಸೇರಿದಂತೆ ಇದು ಅವರ ನಿರಂತರ ಪ್ರಕ್ರಿಯೆ” ಎಂದು ಕಿಡಿಕಾರಿದರು.
ಇದೇ ವಿಚಾರಕ್ಕೆ ಸಂಬಂಧಿಸಿ ನಟ ಜಗ್ಗೇಶ್ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ರಾಯರನ್ನ ಅಪಮಾನ ಮಾಡಿದವರು ಉದ್ಧಾರವಾದ ಇತಿಹಾಸವಿಲ್ಲ. ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತರು ಜಪ, ತಪ, ವೈರಾಗ್ಯ, ಉಪವಾಸದಿಂದ ಸೇವೆ ಮಾಡುತ್ತಾರೆ. ಭಕ್ತಿಯಿಂದ ನೀಡಿದ ಫೋಟೋವನ್ನು ಈ ರೀತಿ ತಿರಸ್ಕರಿಸಿದ ಪ್ರಥಮ ವ್ಯಕ್ತಿಯನ್ನು ನಾನು ನನ್ನ ಬದುಕಿನಲ್ಲಿ ನೋಡಿದ್ದೇನೆ. ರಾಯರಿದ್ದಾರೆ, ಅವರು ಎದ್ದು ಬರುತ್ತಾರೆ – ಕಾಯಬೇಕು” ಎಂದು ಅವರು ಬರೆದುಕೊಂಡಿದ್ದಾರೆ.
