ಬೆಂಗಳೂರು, ಜ.30- ಬಿಜೆಪಿಯ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಲವಾರು ಭ್ರಷ್ಟಾಚಾರಗಳ ಹಗರಣಗಳನ್ನು ಇನ್ನೂ ಬಿಚ್ಚಿಡುವುದು ಬಾಕಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕಾಂಗ್ರೆಸ್ಸಿನ ವಿರುದ್ಧ ಭ್ರಷ್ಟ ಸರ್ಕಾರ ಎಂದು ಪೋಸ್ಟರ್ ವಾರ್ ಮಾಡುತ್ತಿದ್ದಾರೆ. ನಾವು ಈ ಮೊದಲು ಬಿಜೆಪಿಯ ಬಹಳಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದೇವು. ಕೋವಿಡ್ ಕಾಲದಲ್ಲಿನ ಭ್ರಷ್ಟಾಚಾರ ಸೇರಿದಂತೆ ಇನ್ನೂ ಹಲವಾರು ವಿಚಾರಗಳು ಬಾಕಿ ಇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾತ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಪುನರ್ ಸ್ಥಾಪನೆ ಮಾಡಬೇಕು. ಕೇಂದ್ರ ಸರ್ಕಾರ ಹೊಸದಾಗಿ ರೂಪಿಸಿರುವ ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ ಕಾಯ್ದೆಯನ್ನು ರದ್ದು ಮಾಡಬೇಕು. ಯಾವ ರಾಜ್ಯಗಳಲ್ಲೂ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದರು.
ಪ್ರತಿವರ್ಷ ನಾಲ್ಕರಿಂದ ಐದು ತಿಂಗಳು ಕಷಿ ಚಟುವಟಿಕೆಗಳು ನಡೆಯುತ್ತಿರುತ್ತವೆ ಆ ವೇಳೆ ಉದ್ಯೋಗ ಖಾತ್ರಿ ಬಳಸಿಕೊಂಡು ಕೆಲವು ಕಡೆ ಕೆಲಸ ಮಾಡಿಸಲಾಗುತ್ತಿತ್ತು. ಜಾಬ್ ಕಾರ್ಡ್ ಹೊಂದಿರುವವರಿಗೂ ಕೆಲಸ ಇತ್ತು. ಈಗ ಕಷಿ ಚಟುವಟಿಕೆ ಅವಧಿಯಲ್ಲಿ ಉದ್ಯೋಗ ಖಾತ್ರಿಗೆ ರಜೆ ಘೋಷಿಸಿರುವುದು ಉದ್ಯೋಗ ನಷ್ಟಕ್ಕೆ ಕಾರಣವಾಗಲಿದೆ ಎಂದರು. 125 ದಿನ ಮಾನವ ಉದ್ಯೋಗ ಸಷ್ಟಿಸಿತ್ತೇವೆಂದು ಹೇಳುತ್ತಿರುವುದು ಕೇವಲ ಕಾಟಾಚಾರದ ಹೇಳಿಕೆ ಎಂದರು. ಅಬಕಾರಿ ಸಚಿವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಆರೋಪ ಕುರಿತು ಮೊದಲು ತನಿಖೆಯಾಗಲಿ. ನಂತರ ಮುಂದಿನ ಚರ್ಚೆ ಮಾಡಬಹುದು ಎಂದರು.
ಕೇಂದ್ರ ಸರ್ಕಾರದ ಬಜೆಟ್ ನಿಂದ ರಾಜ್ಯ ಯಾವ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಬಗ್ಗೆ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಹಿಂದೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಭದ್ರಾ ಯೋಜನೆಗೆ 5400 ಕೋಟಿ ನೀಡುವುದಾಗಿ ಭರವಸೆ ನೀಡಿದ್ದು ಅದರ ಬಗ್ಗೆ ಸಂಸದರಾಗಲಿ ಕೇಂದ್ರ ಸಚಿವರಾಗಲಿ ಚಕಾರ ಎತ್ತುತ್ತಿಲ್ಲ ಎಂದರು. ಸಚಿವ ಕೆಜೆ ಜಾರ್ಜ್ ಈ ರಾಜೀನಾಮೆ ಕೊಟ್ಟಿಲ್ಲ. ಪಕ್ಷದ ಹಿರಿಯ ನಾಯಕರಾಗಿರುವ ಅವರು ಏಕೆ ರಾಜೀನಾಮೆ ನೀಡುತ್ತಾರೆ, ಅವರಿಗೆ ಬುದ್ಧಿ ಇಲ್ಲವೇ ಎಂದು ಪ್ರಶ್ನಿಸಿದರು.
ಒಬ್ಬ ಐಎಎಸ್ ಅಧಿಕಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ನೋಟಿಸ್ ನೀಡಿರಬಹುದು ಲ. ಆದರೆ ನೋಟಿಸ್ ಪಡೆದ ಅಧಿಕಾರಿ ಉತ್ತಮ ಕಾರ್ಯಕ್ಷಮತೆ ಹೊಂದಿದ್ದಾರೆ. ನನ್ನ ಜೊತೆಯೂ ಅವರು ಕೆಲಸ ಮಾಡಿದ್ದರು ಎಂದು ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡರು.
