ಬೆಂಗಳೂರು, ಜ. 30- ಹೋಂವರ್ಕ್ ಮಾಡದ ನಾಲ್ಕನೇ ತರಗತಿ ಬಾಲಕನಿಗೆ ಶಿಕ್ಷಕಿ ಬಾಸುಂಡೆ ಬರುವಂತೆ ಹೊಡೆದಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೀಣಾ ವಿದ್ಯಾಸಂಸ್ಥೆಯಲ್ಲಿ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈಗ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಪೋಷಕರು ತಮ್ಮ ಪುತ್ರನನ್ನು ಹಾಸ್ಟೆಲ್‌ಗೆ ಸೇರಿಸಿದ್ದರು. ಆತ ವೀಣಾ ವಿದ್ಯಾ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ. ಇತ್ತೀಚೆಗೆ ಬೆಂಗಳೂರಿಗೆ ಬಂದು ಮಗನನ್ನು ಭೇಟಿಯಾದಾಗ ಆತ ನಾನು ಶಾಲೆಗೆ ಹೋಗಲ್ಲ ಎಂದು ಅಳುತ್ತಿದ್ದ, ಸೂಕ್ಷ್ಮವಾಗಿ ಪರಿಶೀಲಿಸಿದ್ದಾಗ ಕೈ ಮತ್ತು ಕಾಲಿಗೆ ಗಾಯವಾಗಿರುವುದನ್ನು ನೋಡಿ ವಿಚಾರಿಸಿದ್ದಾಗ, ಶಿಕ್ಷಕಿ ಥಳಿಸಿರುವುದು ಗೊತ್ತಾಗಿದೆ.
ನಂತರ ಶಾಲೆಗೆ ಬಂದು ಮುಖ್ಯಸ್ಥರಿಗೆ ಈ ಬಗ್ಗೆ ವಿಷಯ ತಿಳಿಸಿದ್ದಾರೆ. ಆದರೂ ಅವರು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಿರುವುದರಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಬಾಲಕನಿಗೆ ಹಲವಾರು ಭಾರಿ ಹೊಡೆದಿದ್ದು, ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕುತ್ತಿಗೆ ಹಿಸುಕುವುದಾಗಿ ಬೆದರಿಸಿದ್ದಾರೆಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಬಾಲಕನ ತಾಯಿ ಲಕ್ಷ್ಮೀ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಕುರಿತಂತೆ ಬಿಇಓಗೂ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
