Thursday, April 16, 2026
Homeರಾಜ್ಯಸರ್ಕಾರದ ವಿರುದ್ಧ ಎಚ್‌.ವಿಶ್ವನಾಥ್‌ ವಾಗ್ದಾಳಿ

ಸರ್ಕಾರದ ವಿರುದ್ಧ ಎಚ್‌.ವಿಶ್ವನಾಥ್‌ ವಾಗ್ದಾಳಿ

H Vishwanath attacks government

ಬೆಂಗಳೂರು,ಜ.30- ಜಿಎಸ್‌‍ಟಿ ಪಾಲು ಬಂದಿಲ್ಲ ಎಂದು ಇಲ್ಲಿ ಬೊಬ್ಬೆ ಹೊಡೆದರೆ ನ್ಯಾಯ ಸಿಗುತ್ತದೆಯೇ ಎಂದು ಬಿಜೆಪಿ ಹಿರಿಯ ಸದಸ್ಯ ಎಚ್‌.ವಿಶ್ವನಾಥ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಪರಿಷತ್‌ನಲ್ಲಿ ನಡೆಯಿತು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಕಾಂಗ್ರೆಸ್‌‍ನ ಐವಾನ್‌ ಡಿಸೋಜಾ ಅವರು ಮಾತನಾಡುತ್ತಾ ಕೇಂದ್ರದಿಂದ ನಮಗೆ ಎಲ್ಲದರಲ್ಲೂ ಅನ್ಯಾಯವಾಗಿದೆ. ಪುರಸ್ಕೃತ ಯೋಜನೆಗಳು, ಜಿಎಸ್‌‍ಟಿ, ತೆರಿಗೆ ಪಾಲು, ಯೋಜನೆಗಳ ನೆನೆಗುದಿಗೆ ಸೇರಿದಂತೆ ಎಲ್ಲದರಲ್ಲೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ವಿಶ್ವನಾಥ್‌ ಅವರು ಕೇಂದ್ರದಿಂದ ಜಿಎಸ್‌‍ಟಿ ಅನ್ಯಾಯ ಆಗಿದೆ ಎಂದು ಸದನದಲ್ಲಿ ಬೊಬ್ಬೆ ಹೊಡೆದುಕೊಂಡರೆ ನಿಮಗೆ ನ್ಯಾಯ ಸಿಗುತ್ತದೆಯೇ? ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ಬಾರಿ ಜಿಎಸ್‌‍ಟಿ ಕೌನ್ಸಿಲಿಂಗ್‌ ಸಭೆಗೆ ಹೋಗಿದ್ದಾರೆ ಎಂದು ಪ್ರಶ್ನೆ ಮಾಡಿದರು.

ವಿಶ್ವನಾಥ್‌ ಅವರ ಈ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆಗ ಪ್ರತಿಪಕ್ಷದ ಸದಸ್ಯರೂ ಕೂಡ ಪ್ರತಿದಾಳಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಯಾವುದೇ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡಿಲ್ಲ. ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಎಸ್‌‍ಟಿ ಕೌನ್ಸಿಲಿಂಗ್‌ ಸಭೆಗೆ ಹೋಗಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರಸ್ತಾಪಿಸಬೇಕಿತ್ತು. ಸಭೆಗೆ ಹೋಗದೇ ಇಲ್ಲಿ ನೀವು ಮಾತನಾಡಿದರೆ ಏನು ಪ್ರಯೋಜನ ? ಎಂದು ಪ್ರಶ್ನಿಸಿದರು.

ಜಿಎಸ್‌‍ಟಿ ಸಭೆಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಬಂದು ತಮ ರಾಜ್ಯದ ಬೇಡಿಕೆಯನ್ನು ಸಲ್ಲಿಸುತ್ತಾರೆ. ಅಲ್ಲಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಆಗ ಇದನ್ನು ಪರಿಶೀಲಿಸಿ ರಾಜ್ಯಗಳಿಗೆ ನ್ಯಾಯ ಒದಗಿಸುತ್ತಾರೆ. ಸುಮನೆ ಇಲ್ಲಿ ಮಾತನಾಡಿದರೆ ಪ್ರಯೋಜನವಿಲ್ಲ ಎಂದು ಖಾರವಾಗಿ ಹೇಳಿದರು.

ಆಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆಯವರು ಜಿಎಸ್‌‍ಟಿ ಕೌನ್ಸಿಲಿಂಗ್‌ ಸಭೆಗೆ ಕಡ್ಡಾಯವಾಗಿ ಮುಖ್ಯಮಂತ್ರಿಗಳೇ ಹೋಗಲೇಬೇಕೆಂಬ ನಿಯಮವಿಲ್ಲ. ರಾಜ್ಯದ ಪರವಾಗಿ ಯಾರನ್ನಾದರೂ ಕಳುಹಿಸಬಹುದು. ಕಂದಾಯ ಸಚಿವ ಕೃಷ್ಣಾಭೈರೇಗೌಡ ಅವರು ರಾಜ್ಯದ ಪರವಾಗಿ ಪ್ರತಿನಿಧಿಸಿದ್ದಾರೆ. ಕರ್ನಾಟಕಕ್ಕೆ ಯಾವ ರೀತಿ ಅನ್ಯಾಯವಾಗಿದೆ ಎಂಬುದನ್ನು ಹೇಳಿದ್ದಾರೆ. ಆದರೂ ಕೇಂದ್ರದ ನಮಗೆ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅಂದು ಬಸವರಾಜ ಬೊಮಾಯಿ ಅವರನ್ನು ಜಿಎಸ್‌‍ಟಿ ಕೌನ್ಸಿಲಿಂಗ್‌ ಸಭೆಗೆ ಕಳುಹಿಸಿಕೊಟ್ಟಿದ್ದರು. ಇದರಲ್ಲಿ ಯಾವುದೇ ಪ್ರಮಾದವಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಸರ್ಕಾರದ ನಡೆಯನ್ನು ಸಮರ್ಥನೆ ಮಾಡಿಕೊಂಡರು.

RELATED ARTICLES

Latest News