ಬೆಂಗಳೂರು,ಫೆ.2- ಕಳೆದ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೂ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಿದ್ದ ವಿವಾದಿತ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ) ವಿಧೇಯಕಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಹಾಕದೆ, ರಾಷ್ಟ್ರಪತಿ ಅಂಗಳಕ್ಕೆ ಕಳುಹಿಸಿದ್ದಾರೆ.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ) ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕದೆ ರಾಷ್ಟ್ರಪತಿಗೆ ರವಾನೆ ಮಾಡಿದ್ದಾರೆ. ಈ ವಿಧೇಯಕದ ಪರಿಶೀಲನೆಗಾಗಿ ರವಾನೆ ಮಾಡಿದ್ದಾರೆ. ರಾಜ್ಯಪಾಲರ ಈ ನಿರ್ಧಾರ ಸರ್ಕಾರದಿಂದ ತೀವ್ರ ಟೀಕೆಗೆ ಗುರಿಯಾಗಿದ್ದು, ಸರ್ಕಾರದ ರಾಜಕೀಯ ದುರುದ್ದೇಶಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.
ತಮ ನಿರ್ಧಾರಕ್ಕೆ ಸ್ಪಷ್ಟನೆಯಾಗಿ 29 ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆ ದ್ವೇಷ ಭಾಷಣ ಮಸೂದೆ ಮತ್ತೊಮೆ ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ನಡುವಣ ಸಂಘರ್ಷಕ್ಕೆ ಮತ್ತೊಂದು ಹಂತಕ್ಕೆ ಬಂದಿದೆ.ಈ ಮಸೂದೆ ವಿರುದ್ಧ ಈಗಾಗಲೇ 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಗಮನಾರ್ಹ.
ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಈ ಅಸ್ಪಷ್ಟತೆಯಿಂದಾಗಿ ಧರ್ಮ, ಜಾತಿ, ಜನಾಂಗ, ವ್ಯಕ್ತಿಗಳ ಮೇಲೆ ಪೂರ್ವಾಗ್ರಹದಿಂದ ಕ್ರಮ ಜರುಗುವ ಸಾಧ್ಯತೆಯನ್ನು ಹೆಚ್ಚಿಸಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಮಸೂದೆಯನ್ನು ಉಭಯ ಸದನಗಳಲ್ಲಿ ಅರ್ಥಪೂರ್ಣ ಮತ್ತು ಸಮಗ್ರ ಚರ್ಚೆಗೆ ಒಳಪಡಿಸದೇ ಅಂಗೀಕರಿಸಲಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಇದರ ಪರಿಣಾಮವಾಗಿ ಸಂವಿಧಾನಾತಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಭೀರ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ರಾಷ್ಟ್ರಪತಿಗಳಿಗೆ ದ್ವೇಷ ಭಾಷಣ ವಿಧೇಯಕ ರವಾನೆ :
ವಿಧೇಯಕದಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಕಠಿಣ ನಿಬಂಧನೆಗಳಿವೆ. ಆದರೆ ಇದು ಸಂವಿಧಾನದ ಅನುಚ್ಛೇದ 19ರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ವಿರೋಧಿಗಳು ಆರೋಪಿಸಿದ್ದಾರೆ. ವಿಧೇಯಕ ಸಮಗ್ರ ಚರ್ಚೆಯಿಲ್ಲದೆ ಮಂಡಿಸಲಾಗಿದೆ ಎಂದು ರಾಜ್ಯಪಾಲರ ಅಭಿಪ್ರಾಯವಿದೆ.
ಸರ್ಕಾರ ವಿಧೇಯಕ ದ್ವೇಷ ಭಾಷಣ ತಡೆಗಟ್ಟುವ ಉದ್ದೇಶದಿಂದ ಮಂಡಿಸಿದ್ದು ಎಂದು ಹೇಳಿದೆ. ಆದರೆ ರಾಜ್ಯಪಾಲರ ನಿರ್ಧಾರದಿಂದ ಸರ್ಕಾರಕ್ಕೆ ಮುಖಭಂಗವಾಗಿದೆ. ರಾಷ್ಟ್ರಪತಿಗಳ ಪರಿಶೀಲನೆಯ ನಂತರ ವಿಧೇಯಕ ಜಾರಿಗೆ ಬರುವ ಸಾಧ್ಯತೆ ಇದೆ. ಆದರೆ ಪ್ರತಿಪಕ್ಷಗಳು ಇದನ್ನು ಸರ್ಕಾರದ ವೈಫಲ್ಯ ಎಂದು ಬಿಂಬಿಸುತ್ತಿವೆ. ಈ ಘಟನೆ ಕರ್ನಾಟಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಮುಂದುವರಿಯುವ ಸಾಧ್ಯತೆ ಇದೆ. ರಾಷ್ಟ್ರಪತಿಗಳ ನಿರ್ಧಾರದ ನಂತರವೇ ವಿಧೇಯಕದ ಭವಿಷ್ಯ ನಿರ್ಧಾರವಾಗಲಿದೆ.
ಮೂಲಭೂತ ಹಕ್ಕನ್ನು ಕಸಿಯುವ ಭೀತಿ :
ಇದಲ್ಲದೆ, ಮಸೂದೆಯಲ್ಲಿ ಹಲವಾರು ಕಾನೂನು ತೊಡಕುಗಳು ಇರುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ಇದು ಮಿತಿ ಮೀರಿದ ಭಯಾನಕ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮೂಲಭೂತ ಹಕ್ಕನ್ನು ಕಸಿಯುವ ಭೀತಿ ಇದರಿಂದ ಉಂಟಾಗಬಹುದು ಎಂಬುದೂ ಅವರ ಪ್ರಮುಖ ಆಕ್ಷೇಪವಾಗಿದೆ.
ಆನ್‌ಲೈನ್ ವಿಷಯಗಳನ್ನು ಅನಿಯಂತ್ರಿತವಾಗಿ ನಿರ್ಬಂಧಿಸುವ ಸಾಧ್ಯತೆ, ಪೊಲೀಸ್ ವ್ಯವಸ್ಥೆಯಿಂದ ಕಾನೂನು ದುರುಪಯೋಗವಾಗುವ ಭೀತಿ ಹಾಗೂ ದೇಶದಲ್ಲಿ ಈಗಾಗಲೇ ದ್ವೇಷ ಭಾಷಣ ನಿಯಂತ್ರಣಕ್ಕೆ ಸಂಬಂಧಿಸಿದ ಹಲವಾರು ಕಾನೂನುಗಳು ಜಾರಿಯಲ್ಲಿರುವುದನ್ನೂ ರಾಜ್ಯಪಾಲರು ತಮ ಕಾರಣಗಳಲ್ಲಿ ಉಲ್ಲೇಖಿಸಿದ್ದಾರೆ.
ದ್ವೇಷ ಭಾಷಣ ವಿಧೇಯಕದ ಹಿನ್ನೆಲೆ :
ಕರ್ನಾಟಕ ಸರ್ಕಾರ ದ್ವೇಷ ಭಾಷಣ ಮತ್ತು ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿತ್ತು. ವಿಧೇಯಕದಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನುಗಳನ್ನು ಪರಿಚಯಿಸಲಾಗಿತ್ತು. ಇದರ ಅನ್ವಯ ದ್ವೇಷ ಭಾಷಣ ಮಾಡಿದವರಿಗೆ ಜೈಲು ಶಿಕ್ಷೆ ಮತ್ತು ದಂಡದ ನಿಬಂಧನೆಗಳಿವೆ. ಆದರೆ ವಿಧೇಯಕ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ವಿಧೇಯಕದಲ್ಲಿ ಸರ್ಕಾರದ ರಾಜಕೀಯ ದುರುದ್ದೇಶಕ್ಕೆ ಅವಕಾಶ ನೀಡುವ ಅಂಶಗಳಿವೆ ಎಂದು ಆರೋಪಿಸಿದ್ದವು.
ಈ ಹಿನ್ನಲೆ ಈ ದ್ವೇಷ ಭಾಷಣ ವಿಧೇಯಕ ಹಲವು ವಿವಾದಕ್ಕೆ ಕಾರಣವಾಗಿತ್ತು. ಇದಾದ ನಂತರ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ವಿಧೇಯಕವನ್ನು ಪರಿಶೀಲಿಸಿ, ಸಮಗ್ರ ಚರ್ಚೆ ಆಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಧೇಯಕದಲ್ಲಿ ಹಲವು ಆಕ್ಷೇಪಣೀಯ ಅಂಶಗಳಿರುವ ಹಿನ್ನೆಲೆಯಲ್ಲಿ ಸಹಿ ಹಾಕದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪರಿಶೀಲನೆಗಾಗಿ ರವಾನೆ ಮಾಡಿದ್ದಾರೆ. ಇದು ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ವಿಧೇಯಕ ಜಾರಿಗೆ ಬರುವುದು ತಡವಾಗಲಿದೆ. ರಾಜ್ಯಪಾಲರು ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿರುವುದು ಸಂವಿಧಾನದ ಅನುಚ್ಛೇದ 200ರ ಅನ್ವಯ ಸಾಧ್ಯವಾಗಿದೆ. ರಾಷ್ಟ್ರಪತಿಗಳು ವಿಧೇಯಕವನ್ನು ಪರಿಶೀಲಿಸಿ ಅಂಗೀಕಾರ ಅಥವಾ ತಿರಸ್ಕಾರ ಮಾಡಬಹುದು.
ಇನ್ನೂ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ರಾಜ್ಯಪಾಲರ ನಿರ್ಧಾರವನ್ನು ಸ್ವಾಗತಿಸಿವೆ. ಬಿಜೆಪಿ ನಾಯಕರು ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಧಿಕ್ಕಾರ ಎಂದು ಹೇಳಿದ್ದಾರೆ. ವಿಧೇಯಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿ, ರಾಜ್ಯಪಾಲರಿಗೆ ಮನವಿ ಮಾಡಿದ್ದರು. ಹಿರಿಯ ವಕೀಲ ಬಿ.ವಿ.ಆಚಾರ್ಯ ಸಹ ವಿಧೇಯಕಕ್ಕೆ ಸಹಿ ಹಾಕಬೇಡಿ ಎಂದು ರಾಜ್ಯಪಾಲರಿಗೆ ಸಲಹೆ ನೀಡಿದ್ದರು. ಜೆಡಿಎಸ್ ನಾಯಕರು ವಿಧೇಯಕ ರಾಜಕೀಯ ದುರುದ್ದೇಶಕ್ಕೆ ಬಳಕೆಯಾಗುತ್ತದೆ ಎಂದು ಟೀಕಿಸಿದ್ದರು.
ಈಗ ರಾಜ್ಯಪಾಲರ ನಿರ್ಧಾರದಿಂದ ಪ್ರತಿಪಕ್ಷಗಳು ಸರ್ಕಾರವನ್ನು ಟೀಕಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡುತ್ತಿವೆ. ಬೌದ್ಧಿಕ ಚಿಂತನೆ ಮತ್ತು ಸ್ವಾತಂತ್ರ ಅಭಿವ್ಯಕ್ತಿಗೆ ಹೆಸರಾದ ಕರ್ನಾಟಕದಲ್ಲಿ, ಇಂತಹ ಮಸೂದೆ ಜಾರಿಯಾದರೆ ಚಿಂತನೆಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ರಾಜ್ಯಪಾಲರಿಂದ ವ್ಯಕ್ತವಾಗಿದೆ. ಈ ನಿರಾಕರಣೆಯ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ಚರ್ಚೆ ಆರಂಭವಾಗಿದೆ.
ರಾಜ್ಯಪಾಲರ ಸಹಿ ನಿರಾಕರಣೆ ಮತ್ತು ಮಸೂದೆ ರಾಷ್ಟ್ರಪತಿಗಳಿಗೆ ವರ್ಗಾವಣೆಗೊಂಡಿರುವುದರಿಂದ ದ್ವೇಷ ಭಾಷಣ ಮಸೂದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದೆ ರಾಷ್ಟ್ರಪತಿಗಳು ಯಾವ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲ ಮೂಡಿದೆ.
