ಬೆಳಗಾವಿ, ಫೆ.4- ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ವಂಟಮೂರಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ 12 ಮಂದಿ ಅಪರಾಧಿಗಳಿಗೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಹೆಚ್ಚುವರಿ 10ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಾದ ಬಸಪ್ಪ ನಾಯ್ಕ, ರಾಜು ನಾಯ್ಕ, ಕೆಂಪಣ್ಣ ನಾಯ್ಕ, ಪಾರ್ವತಿ ನಾಯ್ಕ, ಯಲ್ಲವ್ವ ನಾಯ್ಕ, ಲಕ್ಕಪ್ಪ ನಾಯ್ಕ, ಗಂಗವ್ವ ನಾಯ್ಕ, ಸಂಗೀತಾ ಹೆಗ್ಗನಾಯ್ಕ, ಸಂತೋಷ್ ನಾಯ್ಕ, ಶೋಭಾ ನಾಯ್ಕ, ಲಕ್ಕವ್ವ ನಾಯ್ಕ ಹಾಗೂ ಶಿವಪ್ಪ ವನ್ನೂರಿಗೆ ನ್ಯಾಯಾಲಯ ಕಠಿಣ ಶಿಕ್ಷೆ ಜತೆಗೆ ದಂಡ ವಿಧಿಸಿದೆ.
ತೀರ್ಪು ಪ್ರಕಟವಾಗುತ್ತಿದ್ದಂತೆ ನ್ಯಾಯಾಲಯದೊಳಗೆ ಆರೋಪಿಗಳು ಹಾಗೂ ಅವರ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಘಟನೆ ಹಿನ್ನೆಲೆ: ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದ ಯುವಕ ತಾನು ಪ್ರೀತಿಸಿದ ಯುವತಿ ಜತೆ ಮನೆ ಬಿಟ್ಟು ಹೋಗಿದ್ದರು. ಈ ವಿಷಯ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹರಡಿ ಗ್ರಾಮಸ್ಥರಲ್ಲಿ ಆವೇಶಕ್ಕೆ ಕಾರಣವಾಯಿತು.
2023ರ ಡಿ.10ರಂದು ಯುವತಿಯ ಕುಟುಂಬಸ್ಥರು ಯುವಕನ ಮನೆ ಮೇಲೆ ಮಾರಕಾಸ್ತ್ರ, ದೊಣ್ಣೆ, ಇನ್ನಿತರ ಆಯುಧಗಳೊಂದಿಗೆ ದಾಳಿ ಮಾಡಿ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿದ್ದಲ್ಲದೆ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕರೆದುರೇ ಹಲ್ಲೆ ನಡೆಸಿದ್ದರು.
ಈ ಭೀಕರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಈ ಘಟನೆ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮನೆ ತೊರೆದಿದ್ದ ಪ್ರೇಮಿಗಳನ್ನು ಪತ್ತೆಹಚ್ಚಿ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಇಬ್ಬರಿಗೂ ಮದುವೆ ಮಾಡಿಸಿದ್ದರು.
ಮಹಿಳೆಯ ವಿವಸ್ತ್ರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಬಾಲಾಪರಾಧಿ ಸೇರಿ 13 ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇಂದು ಬೆಳಗ್ಗೆ ಇಂಡಲಗಾ ಜೈಲಿನಿಂದ ಪೊಲೀಸ್ ವಾಹನಗಳಲ್ಲಿ ಎಲ್ಲ ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಕರೆತಂದಿದ್ದರು. ಎರಡು ವರ್ಷಗಳ ವಿಚಾರಣೆ ಬಳಿಕ ಬಾಲಾಪರಾಧಿಯನ್ನು ಹೊರತುಪಡಿಸಿ ಉಳಿದ 12 ಮಂದಿ ಆರೋಪಿಗಳು ತಪ್ಪಿತಸ್ಥರು ಎಂಬುದು ಸಾಬೀತಾಗಿದ್ದು, ಐದು ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶ ಎಚ್.ಎಸ್.ಮಂಜುನಾಥ ಅವರು ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಎಲ್.ಎಸ್.ಸುಳ್ಳದ ಅವರು ವಾದ ಮಂಡಿಸಿದ್ದರು. ಈ ತೀರ್ಪಿನಿಂದ ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಸಂದೇಶ ರವಾನೆಯಾದಂತಾಗಿದೆ.
