Thursday, April 16, 2026
Homeರಾಜ್ಯತಾನೇ ಹೆಣೆದ ಬಲೆಗೆ ಬಿದ್ದರೇ ರಾಯ್‌..?

ತಾನೇ ಹೆಣೆದ ಬಲೆಗೆ ಬಿದ್ದರೇ ರಾಯ್‌..?

Did Roy fall into a trap he had made himself?

ಬೆಂಗಳೂರು,ಫೆ.7- ಆತಹತ್ಯೆಗೆ ಶರಣಾದ ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ.ರಾಯ್‌ ತನ್ನ ಸಾಮ್ರಾಜ್ಯ ನಿರ್ಮಿಸಿಕೊಂಡ ರೀತಿ ಯನ್ನು ಅವಲೋಕಿಸಿದರೆ ಎಂಥವರೂ ಬೆಚ್ಚಿ ಬೀಳಬೇಕು. ಮೊದಲು ಹೆಚ್‌ಪಿ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದ ರಾಯ್‌ ಕೃಷ್ಣನ್‌ ನಂಬೂದಿರಿ ಅವರ ಕ್ರಿಸ್ಟಲ್‌ ಗ್ರೂಪ್‌ನಲ್ಲಿ ರೆಸಾರ್ಟ್‌ ಮ್ಯಾನೇಜರ್‌ ಆಗಿ ಕೆಲಸಕ್ಕೆ ಸೇರಿದರು.

ಅಲ್ಲಿಂದೀಚೆಗೆ ನಂಬೂದಿರಿ ಅವರನ್ನು ರಾಯ್‌ ದೇವರಂತೆ ನಡೆಸಿಕೊಳ್ಳುತ್ತಿದ್ದರು.ಅವರ ಕಾಲಿಗೆ ಎರಗುತ್ತಿದ್ದರು. ಸಹಜವಾಗಿಯೇ ರಾಯ್‌ ನಂಬೂದಿರಿ ಮತ್ತು ಅವರ ಪತ್ನಿ ಲತಾ ಅವರ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಯಾದರು.ಕ್ರಿಸ್ಟಲ್‌ KRIS -TAL ಹೆಸರು ಕೃಷ್ಣನ್‌ ನಂಬೂದಿರಿ ಮತ್ತು ಲತಾ ಹೆಸರನ್ನು ತಿರುವು ಮುರುಗಾಗಿ ಟಾಲ್‌ ಎಂದು ಬರೆದು ಮೂಡಿದಂತಹುದಾಗಿತ್ತಾ.

ನಂಬೂದಿರಿ ಅವರು ಕೆಲ್ಟ್ರಾನ್‌ನಲ್ಲಿ ಎಲೆಕ್ಟ್ರಾನಿಕ್‌್ಸ ಎಂಜಿನಿಯರ್‌ ಆಗಿ ಅನೇಕ ವರ್ಷ ಕಳೆದಿದ್ದರು. ಬಳಿಕ ತಾವು ಮಧ್ಯಪ್ರಾಚ್ಯದಲ್ಲಿ ಗಳಿಸಿದ ಸಂಪತ್ತನ್ನು ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರು.

ಲತಾ ಅವರಿಗೆ ವೃತ್ತಿಪರ ಅನುಭವ ಇರಲಿಲ್ಲ. ನಂಬೂದಿರಿ ಅವರು ಕಂಪನಿಯ ಮುಖದಂತಿದ್ದು, ಅವರ ವಿಶಿಷ್ಟ ವ್ಯಕ್ತಿತ್ವವು ವಿಶೇಷವಾಗಿ ಬೆಂಗಳೂರಿನ ಮಲಯಾಳಿ ಸಮುದಾಯವನ್ನು ಸೆಳೆಯಿತು. ಕಂಪನಿ ಬೆಳೆಯಲಾರಂಭಿಸಿತು. ಲತಾ ಅವರು ಕಂಪನಿಯ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದರು.

ಕಂಪನಿಯ ವಾಣಿಜ್ಯ ಯೋಜನೆಗಳ ಮೇಲೆ ರಾಯ್‌ ಕಣ್ಣು ಹಾಕಿದರು. ಪ್ರಾಮಾಣಿಕರು, ನಿಷ್ಠರೂ ಎಂಬಂತೆ ಬಿಂಬಿಸಿಕೊಂಡಿದ್ದ ರಾಯ್‌ ಅವರು ಈ ಸ್ಥಾನಮಾನಗಳಿಸಿದ್ದು ಸಹಜವಾಗಿತ್ತು. ಅನತಿ ಸಮಯದಲ್ಲೇ ಯಾವುದೇ ಬಂಡವಾಳ ಹೂಡದೆಯೇ ಅವರನ್ನು ಕಂಪನಿಯ ಪಾಲುದಾರರನ್ನಾಗಿ ಮಾಡಲಾಯಿತು.

ಮಾರಾಟದ ಮೇಲೆ ನಂಬೂದಿರಿ ಅವರ ತೀವ್ರ ಗಮನದಿಂದಾಗಿ ಕಂಪನಿ ವೇಗವಾಗಿ ಬೆಳೆದು 2003ರ ವೇಳೆಗೆ 100 ಕೋಟಿರೂ. ಕ್ಲಬ್‌ ಸೇರಿಕೊಂಡಿತು. ಹೀಗಿದ್ದರೂ ನಂಬೂದಿರಿ ಅವರು ಮಾರಾಟದಲ್ಲಿ ಪೂರ್ಣ ಗಮನ ಹರಿಸಿದ್ದರಿಂದ ಮತ್ತು ಲತಾ ಅವರ ಅನುಭವದ ಕೊರತೆಯಿಂದ ರಾಯ್‌ ಅನಧಿಕೃತ ಮಾರ್ಗಗಳಿಂದ ಅಪಾರ ಸಂಪತ್ತು ಗಳಿಸಲು ಅವಕಾಶವಾಯಿತು. ಇದು ಶೀಘ್ರವೇ ರಾಯ್‌ ಅವರ ಜೀವನ ಶೈಲಿಯನ್ನು ಬದಲಾಯಿಸಿತು.

2005ರ ಒಂದು ರಾತ್ರಿ ರಾಯ್‌ ಅವರನ್ನು ಕ್ಲಬ್‌ಹೌಸ್‌‍ವೊಂದರ ಗೆಸ್ಟ್‌ರೂಂನಲ್ಲಿ ಪೊಲೀಸ್‌‍ ದಾಳಿಯ ವೇಳೆ ವಶಕ್ಕೆ ಪಡೆಯಲಾಯಿತು. ಪೊಲೀಸ್‌‍ ಕಮೀಷನರ್‌ ಆಗಿ ಸೇವೆ ಸಲ್ಲಿಸಿದ್ದ ಗೆಳೆಯರೊಬ್ಬರಿಂದ ನಂಬೂದಿರಿ ಅವರಿಗೆ ರಾಯ್‌ ಅವರ ಬಗ್ಗೆ ಕೆಲವು ಅಪ್ರಿಯ ಸತ್ಯಗಳು ತಿಳಿದವು. ಬಳಿಕ ಅವರು ರಾಯ್‌ ಮೇಲೆ ವಾಗ್ದಾಳಿ ನಡೆಸಿದರು. ಕ್ರಿಸ್ಟಲ್‌ ಸಂಸ್ಥೆಯಿಂದ ಖರೀದಿಸಿದ ಅನೇಕ ಆಸ್ತಿಗಳು ವಾಸ್ತವವಾಗಿ ರಾಯ್‌ ಹೆಸರಿಗೆ ನೋಂದಣಿಯಾಗಿದ್ದು, ಆಗಷ್ಟೇ ಗೊತ್ತಾಯಿತು.

ಎಲ್ಲಕ್ಕೂ ಮಿಗಿಲಾಗಿ ಪಾಲುದಾರಿಕೆ ಒಪ್ಪಂದ ಮುಂದುಮಾಡಿದ ರಾಯ್‌ ಕಂಪನಿಯಿಂದ ತಾವು ನಿರ್ಗಮಿಸಲು ಸೆಟಲ್‌ಮೆಂಟ್‌ಗಾಗಿ ಕಂಪನಿಯ ಎಲ್ಲಾ ರೆಸಾರ್ಟ್‌ಗಳು, ವಾಣಿಜ್ಯ ಕಟ್ಟಡಗಳು ಮತ್ತು ಗಣನೀಯ ಮೊತ್ತದ ಹಣವನ್ನು ನೀಡುವಂತೆ ಬೇಡಿಕೆಯಿಟ್ಟರು, ನಂಬೂದಿರಿ ಒಪ್ಪಿದರು.

2005-06ರಲ್ಲಿ ರಾಯ್‌ ಕ್ರಿಸ್ಟಲ್‌ ಪ್ರಾಜೆಕ್ಟ್‌ ತಂಡದ ಅನೇಕರನ್ನು ಅಧಿಕ ವೇತನದ ಆಮಿಷವೊಡ್ಡಿ ಬಲೆಗೆ ಕೆಡವಿ ಕಾನ್ಫಿಡೆಂಟ್‌ ಗ್ರೂಪ್‌ ಸ್ಥಾಪಿಸಿದರು. ಕೆಲವು ಹಣಕಾಸು ಅಕ್ರಮಗಳ ವಿವಾದದ ಹಿನ್ನೆಲೆಯಲ್ಲಿ ಅವರು ಶೀಘ್ರವೇ ದುಬೈಗೆ ತೆರಳಿದರು. ಅನೇಕ ಶ್ರೀಮಂತರಂತೆ ರಾಯ್‌ ಕೂಡ ಹಣ ನೀಡಿ ಯೂರೋಪ್‌ನಿಂದ ಡಾಕ್ಟರೇಟ್‌ ಗಳಿಸಿದರು ಡಾ.ರಾಯ್‌ ಆದರು.

ಏತನಧ್ಯೆ ಕ್ರಿಸ್ಟಲ್‌ ಗ್ರೂಪ್‌ ಭಾರೀ ಸಾಲದ ಸುಳಿಗೆ ಸಿಲುಕಿತು. ನಂಬೂದಿರಿ ಮತ್ತು ಲತಾ ಅಕ್ಷರಶಃ ತಲೆಮರೆಸಿಕೊಳ್ಳುವಂತಾಯಿತು. ಬುಕ್‌ ಮಾಡಿದ ಫ್ಲಾಟ್‌ಗಳ ವಿತರಣೆಯಾಗದೆ ಗ್ರಾಹಕರು ದೂರುಗಳನ್ನು ಸಲ್ಲಿಸಿದ ಮೇರೆಗೆ ಲತಾ ಜೈಲು ಸೇರಬೇಕಾಯಿತು. ಇವತ್ತಿಗೂ ನಂಬೂದಿರಿ ಎಲ್ಲಿದ್ದಾರೆಂದು ಹೆಚ್ಚಿನವರಿಗೆ ಗೊತ್ತಿಲ್ಲ. ಅವರು ಒಂದಲ್ಲಾ ಒಂದು ದಿನ ಬಂದೇ ಬರುತ್ತಾರೆ ಎಂದು ಕೆಲವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ವೃತ್ತಿ ಜೀವನದುದ್ದಕ್ಕೂ ಹಲವಾರು ವಿವಾದಗಳನ್ನು ಮೈಮೇಲೆಳೆದುಕೊಂಡು ತಾವು ತೋಡಿದ ಗುಂಡಿಗೆ ತಾವೇ ಬಿದ್ದು ತಮ ಸಮಾಧಿಯನ್ನು ತಾವೇ ನಿರ್ಮಿಸಿಕೊಂಡರೇ ರಾಯ್‌..?!

RELATED ARTICLES

Latest News