ಬೆಂಗಳೂರು,ಫೆ.9-ಸಿನಿಮಾ ಶೈಲಿಯಲ್ಲಿ ರಾತ್ರಿ ವೇಳೆ ಕನ್ನಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿ 1.84 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ನಿವಾಸಿ ರಾಜು (43) ಬಂಧಿತ ಮನೆಗಳ್ಳ. ದಾವಣಗೆರೆಯಲ್ಲಿ ಟ್ರಾವಲ್‌್ಸ ನಡೆಸುತ್ತಿದ್ದ ಆರೋಪಿ ರಾಜು ಕೊರೋನ ವೇಳೆ ಟ್ರಾವಲ್‌್ಸ ವ್ಯವಹಾರದಲ್ಲಿ ನಷ್ಟವಾಗಿದ್ದರಿಂದ ಜೀವನೊಪಾಯಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದಾನೆ.
ಮನೆಗಳ್ಳತನ ಮಾಡಲು ಮಾಸ್ಕ್ ಧರಿಸಿಕೊಂಡು ಬಂದು ಹಣ ಆಭರಣ ದೋಚಿ ಪರಾರಿಯಾಗುತ್ತಿದ್ದನು. ಇದುವರೆಗೂ ಈತನ ವಿರುದ್ಧ ಹತ್ತು ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಎನ್‌ಜಿಇಎಫ್ ಲೇಔಟ್ ನಿವಾಸಿಯಾಗಿರುವ ಹೋಟೆಲ್ ಉದ್ಯಮಿ ಉದಯನಾಯಕ್ ಎಂಬುವವರು ಕಳೆದ ಅ.18 ರಂದು ಕಾರ್ಯನಿಮಿತ್ತ ತಮ ಸ್ವಂತ ಊರಾದ ಕುಂದಾಪುರಕ್ಕೆ ಕುಟುಂಬ ಸಮೇತ ಹೋಗಿದ್ದಾರೆ.ಆ ಸಂದರ್ಭದಲ್ಲಿ ಕಳ್ಳರು ಇವರ ಮನೆಯ ಬಾಗಿಲು ಮೀಟಿ ಒಳನುಗ್ಗಿ ಕೊಠಡಿಯ ಬೀರುವಿನಲ್ಲಿದ್ದ ಸುಮಾರು 783 ಗ್ರಾಂ ಚಿನ್ನಾಭರಣಗಳು ಹಾಗೂ 8 ಲಕ್ಷ ಹಣ ಕಳವು ಮಾಡಿ ಪರಾರಿಯಾಗಿದ್ದಾರೆ.
ಮಾರನೇ ದಿನ ಎಂದಿನಂತೆ ಮನೆಗೆಲಸದಾಕೆ ಇವರ ಮನೆ ಬಳಿ ಬಂದಾಗ ಬಾಗಿಲು ಮುರಿದಿರುವುದು ಗಮನಿಸಿ ತಕ್ಷಣ ಮಾಲೀಕರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಮನೆ ಮಾಲೀಕರು ಬಂದು ನೋಡಿದಾಗ ಹಣ, ಆಭರಣ ಕಳುವಾಗಿರುವುದು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಅಬ್ಬಿಗೆರೆಯಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಕಮಗೊಂಡನಹಳ್ಳಿ, ಅಬ್ಬಿಗೆರೆ, ಹೆಚ್‌ಎಂಟಿ ಲೇಔಟ್‌ನಲ್ಲಿರುವ ಜ್ಯೂವೆಲರಿ ಅಂಗಡಿಗಳಲ್ಲಿ ಹಾಗೂ ಅಬ್ಬಿಗೆರೆ ಜಾಲಹಳ್ಳಿ, ಗೋವಾದಲ್ಲಿ ವಾಸವಿರುವ ವ್ಯಕ್ತಿ ಸೇರಿದಂತೆ ಒಟ್ಟು ನಾಲ್ವರಿಗೆ ಚಿನ್ನಾಭರಣ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.
ಆರೋಪಿ ನೀಡಿದ ಮಾಹಿತಿಯಂತೆ ಮೂರು ಜ್ಯೂವೆಲರಿ ಅಂಗಡಿಗಳಿಂದ ಹಾಗೂ ನಾಲ್ವರು ವ್ಯಕ್ತಿಗಳಿಂದ ಒಟ್ಟು 1 ಕೆಜಿ 232 ಗ್ರಾಂ ಚಿನ್ನಾಭರ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನ ಹಾಗೂ ಮೊಬೈಲ್ ವಶಪಡಿಸಿಕೊಳ್ಳುವಲ್ಲಿ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.ಆರೋಪಿಯ ಬಂಧನದಿಂದ ಬೈಯಪ್ಪನ ಹಳ್ಳಿ ಪೊಲೀಸ್ ಠಾಣೆಯ ಮೂರು ಪ್ರಕರಣ ರಾಮಮೂರ್ತಿನಗರದ ಒಂದು ಕನ್ನಕಳವು ಪ್ರಕರಣ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ.
ಸರಗಳ್ಳರ ಸೆರೆ:9.24 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಬೆಂಗಳೂರು,ಫೆ.9-ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಬಂದು ಮಹಿಳೆ ಕೊರಳಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಸರಗಳರನ್ನು ಬಂಧಿಸಿರುವ ಹೆಬ್ಬಾಳ ಠಾಣೆ ಪೊಲೀರು 9.24 ಲಕ್ಷ ಮೌಲ್ಯದ ಚಿನ್ನಾಭರಣ,1 ದ್ವಿ-ಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಜೆಪಿನಗರದ ಅರಣ್ ಹಾಗು ಆಂಧ್ರಪ್ರದೇಶದ ವೆಂಕಟ್ ಬಂಧಿತ ಆರೋಪಿಗಳು.
ವಿಲಾಸಿ ಜೀವನ ನಡೆಸುತ್ತಿದ್ದ ಆರೋಪಿಗಳು ನಗರದೆಲ್ಲೆಡೆ ಸುತ್ತಾಡಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮುನೇಶ್ವರ ದೇವಸ್ಥಾನ ಸಮೀಪ ಮನೆ ಮುಂಭಾಗ ಕಳೆದ ಜ.27ರಂದು ರಂದು ಸಂಜೆ ಮೊಮಗಳನ್ನುಎತ್ತಿಕೊಂಡು ನಿಂತಿದ್ದ ಮಹಿಳೆ ಬಳಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಅವರ ಕೊರಳಲ್ಲಿದ್ದ 58.43 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಕುರಿತು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು,ಖಚಿತ ಮಾಹಿತಿಯನ್ನು ಕಲೆಹಾಕಿ,ಕಳೆದ ಫೆ.5 ರಂದು ಕನಕಪುರ ಹಾಗೂ ಜೆ.ಜೆ.ನಗರದಲ್ಲಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ವಶಕ್ಕೆ ಪಡೆದ ವ್ಯಕ್ತಿಗಳಿಬ್ಬರನ್ನು ವಿಚಾರಣೆಗೊಳಪಡಿಸಿದಾಗಚಿನ್ನದ ಮಾಂಗಲ್ಯ ಸರವನ್ನು ಅಪಹರಣ ಮಾಡಿರುವುದು ಗೊತ್ತಾಗಿದೆ.ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 05 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಂಡು ಮತ್ತೆ ಸುಧೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ ಅಪಹರಣ ಮಾಡಿದ್ದ ಚಿನ್ನದ ಮಾಂಗಲ್ಯ ಸರವನ್ನು ಜೆ.ಪಿ ನಗರದ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಅಡಮಾನ ಇಟ್ಟಿರುವುದಾಗಿ ತಿಳಿಸಿದ್ದಾನೆ.
ನಂತರ ಜೆ.ಪಿ ನಗರದ ಜ್ಯುವೆಲ್ಲರಿ ಅಂಗಡಿಯಿಂದ 58.43 ಗ್ರಾಂ ಚಿನ್ನದ ಮಾಂಗಲ್ಯ ಸರ ಹಾಗೂ 6.23 ಗ್ರಾಂ ಚಿನ್ನದ ಸರ ಸೇರಿದಂತೆ ಒಟ್ಟು 64.66 ಗ್ರಾಂ ಚಿನ್ನಾಭರಣ ಮತ್ತು 1 ದ್ವಿ-ಚಕ್ರ ವಾಹನ ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿಗಳ ಬಂಧನದಿಂದ ಹೆಬ್ಬಾಳ ಪೊಲೀಸ್ ಠಾಣೆಯ 01 ಸರ ಅಪಹರಣ ಪ್ರಕರಣ. ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯ 01 ಸರ ಅಪಹರಣ ಪ್ರಕರಣ ಸೇರಿದಂತೆ ಒಟ್ಟು 02 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು. ತನಿಖೆ ಮುಂದುವರೆದಿದೆ.ಡಿಸಿಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ, ಎಸಿಪಿ ಕೆ.ಎಸ್ ತನ್ವಿರ್‌ನೇತೃತ್ವದಲ್ಲಿ, ಹೆಬ್ಬಾಳ ಪೊಲೀಸ್ ಠಾಣೆ ಇನ್‌್ಸಪೆಕ್ಟರ್ ಭೈರ ಹಾಗೂ ಇತರೆ ಅಧಿಕಾರಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಐವರು ದರೋಡೆಕೋರರ ಬಂಧನ : 2.5 ಲಕ್ಷ ಮೌಲ್ಯದ ಚಿನ್ನಾಭರಣ, ಪಿಸ್ತೂಲ್, ಮೊಬೈಲ್ ಜಫ್ತಿ
ಆಭರಣ ಕೊಳ್ಳುವ ಸೋಗಿನಲ್ಲಿ ಜ್ಯೂವೆಲರಿ ಅಂಗಡಿಗೆ ನುಗ್ಗಿ ಏಕಾಏಕಿ ಪಿಸ್ತೂಲ್ ತೋರಿಸಿ ಹೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದ ರಾಜಸ್ಥಾನದ ಐವರು ಆರೋಪಿಗಳನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿ 2.50 ಲಕ್ಷ ರೂ. ಮೌಲ್ಯದ 9 ಗ್ರಾಂ ಚಿನ್ನಾಭರಣ ಹಾಗೂ ಪಿಸ್ತೂಲ್, ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ದಾಸನಪುರ ಗ್ರಾಮದ ಜ್ಯುವೆಲರ್‌ರಸ ಮತ್ತು ಬ್ಯಾಂಕರ್‌ರಸ ಅಂಗಡಿಯಲ್ಲಿ ಜ.27 ರಂದು ಸಂಜೆ ಮಾಲೀಕರ ಇಬ್ಬರು ಮಕ್ಕಳು ಅಂಗಡಿಯಲ್ಲಿದ್ದರು. ಆ ಸಂದರ್ಭದಲ್ಲಿ ಗ್ರಾಹಕರ ಸೋಗಿನಲ್ಲಿ ಒಬ್ಬ ದರೋಡೆಕೋರ ಒಳಗೆ ಬಂದು ಮೊಬೈಲ್‌ನಲ್ಲಿ ಕಿವಿ ರಿಂಗ್‌ಗಳ ಮಾದರಿಯನ್ನು ತೋರಿಸಿ ಅದನ್ನು ಕೊಡುವಂತೆ ಕೇಳಿದ್ದಾನೆ.
ಕೆಲವೇ ನಿಮಿಷದಲ್ಲಿ ಮತ್ತೊಬ್ಬ ದರೋಡೆಕೋರ ಅಂಗಡಿಯೊಳಗೆ ಬಂದು ಏಕಾಏಕಿ ಪಿಸ್ತೂಲ್ ತೋರಿಸಿ ಅಂಗಡಿಯಲ್ಲಿದ್ದ ಇಬ್ಬರನ್ನು ಹೆದರಿಸಿದ್ದಾನೆ. ಅಷ್ಟರಲ್ಲಿ ಇನ್ನೊಬ್ಬ ದರೋಡೆಕೋರ ಅಂಗಡಿಯೊಳಗೆ ನುಗ್ಗಿ ಕಿವಿ ರಿಂಗ್‌ಗಳು, ಮೂಗುತಿಗಳು, ಚಿನ್ನದ ಸರದ ಮಣಿಗಳನ್ನು ಬ್ಯಾಗಿಗೆ ತುಂಬಿಕೊಂಡಿದ್ದಲ್ಲದೇ ಕ್ಯಾಷ್ ಡ್ರಾನಲ್ಲಿದ್ದ 50 ಸಾವಿರ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಜ್ಯೂವೆಲರಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ದರೋಡೆ ವೇಳೆ ಆರೋಪಿಗಳು ಅಂಗಡಿಯಲ್ಲಿ ಬಿಟ್ಟು ಹೋಗಿದ್ದ ಮೊಬೈಲ್‌ನನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.
ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಖಚಿತ ಮಾಹಿತಿ ಮೇರೆಗೆ ವ್ಯಕ್ತಿಯೊಬ್ಬನನ್ನು ಕೊತ್ತನೂರಿನ ಬಟ್ಟೆ ಅಂಗಡಿಯೊಂದರ ಬಳಿ ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾನೆ.
ಈ ಆರೋಪಿಯಿಂದ ಒಂದು ಪಿಸ್ತೂಲ್, ಎರಡು ಗುಂಡುಗಳು ಹಾಗೂ ಮೂರು ಖಾಲಿ ಮ್ಯಾಗಜಿನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಮತ್ತೊಬ್ಬನ ಬಗ್ಗೆ ಮಾಹಿತಿ ನೀಡಿದ್ದು, ಆತನನ್ನು ಕೆಂಪೇಗೌಡ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಮೊಬೈಲ್‌ನ್ನು ವಶಕ್ಕೆ ಪಡೆದಿದ್ದು, ಈತ ಇನ್ನೂ ನಾಲ್ವರು ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಈತನ ಮಾಹಿತಿಯಂತೆ ಒಂದು ತಂಡ ರಾಜಸ್ಥಾನಕ್ಕೆ ಹೋಗಿದ್ದು, ಜೋಧ್‌ಪುರ್ ಜಿಲ್ಲೆಯ ಸುರ್‌ಪುರದ ಬಳಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗ ಒಳಪಡಿಸಿದಾಗ ಒಟ್ಟು 6 ಮಂದಿ ಭಾಗಿಯಾಗಿರುವುದಾಗಿ ಹೇಳಿದ್ದಾರೆ.
ಆಲೂರಿನಲ್ಲಿ ವಾಸವಿರುವ ಮತ್ತೊಬ್ಬ ಆರೋಪಿಯಿಂದ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, 9.1 ಗ್ರಾಂ ಚಿನ್ನಾಭರಣ ಮತ್ತು ಆರೋಪಿಗಳ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ಮುರಳಿಧರ ಹಾಗೂ ಸಿಬ್ಭಂದಿ ತಂಡ ಯಶಸ್ವಿಯಾಗಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಕಾರ್ಯ ಮುಂದುವರೆದಿದೆ.
