Homeರಾಷ್ಟ್ರೀಯಬೇಸಿಗೆಗೂ ಮುನ್ನವೇ ಬಿರುಬಿಸಿಲಿನ ಬೇಗೆ ಶುರು

ಬೇಸಿಗೆಗೂ ಮುನ್ನವೇ ಬಿರುಬಿಸಿಲಿನ ಬೇಗೆ ಶುರು

scorching heat has begun even before summer

ಬೆಂಗಳೂರು, ಫೆ.15- ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಜನರು ತತ್ತರಿಸುವಂತೆ ಮಾಡಿದೆ. ಶಿವರಾತ್ರಿ ಹಬ್ಬದ ವೇಳೆಗೆ ಚಳಿ ದೂರ ಸರಿಯುತ್ತದೆ ಎಂಬ ಪ್ರತೀತಿ ಇದೆ. ಆದರೆ, ಮುಂಜಾನೆ ಇನ್ನೂ ತೀವ್ರವಾದ ಚಳಿ ಇರುತ್ತದೆ. ಕನಿಷ್ಠ ತಾಪಮಾನದಲ್ಲಿ ಏರಿಕೆ ಕಂಡು ಬಂದಿಲ್ಲ.

ಕರಾವಳಿ ಭಾಗದ ಜಿಲ್ಲೆಗಳನ್ನು ಹೊರತು ಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10ರಿಂದ 12ಡಿ.ಸೆ.ನಷ್ಟು ದಾಖಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ 12ರಿಂದ 14 ಡಿ.ಸೆ.ನಷ್ಟು ಕಂಡುಬರುತ್ತಿದೆ. ಇನ್ನು ಮುಂದೆ ಚಳಿಯ ಪ್ರಮಾಣ ಕಡಿಮೆಯಾಗಲಿದ್ದು, ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10ರಿಂದ 11 ಡಿ.ಸೆ.ನಷ್ಟು ಕಂಡು ಬರುತ್ತಿದೆ. ಆದರೂ ಗರಿಷ್ಠ ತಾಪಮಾನದಲ್ಲಿ ನಿರಂತರ ಏರಿಕೆಯಾಗಿದೆ. ರಾತ್ರಿಗಿಂತ ಹಗಲಿನ ವೇಳೆ ಹೆಚ್ಚಾಗುತ್ತಾ ಹೋಗುವುದರಿಂದ ಬಿಸಿಲಿನ ಬೇಗೆ ಹೆಚ್ಚಾಗಿರುತ್ತದೆ.

ಕಳೆದ ಅಕ್ಟೋಬರ್‌ನಿಂದ ರಾಜ್ಯದಲ್ಲಿ ಮಳೆಯ ಅಭಾವ ಉಂಟಾಗಿದೆ. ಅಕಾಲಿಕ ಮಳೆಯೂ ಆಗಿಲ್ಲ. ಸದ್ಯಕ್ಕೆ ಬೇಸಿಗೆ ಮಳೆಯಾಗುವ ಮುನ್ಸೂಚನೆಗಳೂ ಇಲ್ಲ. ಹೀಗಾಗಿ ವಾತಾವರಣದಲ್ಲಿ ಉಷ್ಣಾಂಶ ಗಣನೀಯವಾಗಿ ಏರುತ್ತಾ ಹೋಗಲಿದೆ. ಈಗಾಗಲೇ ಮಧ್ಯಾಹ್ನದ ವೇಳೆ ಬಿಸಿಲಿಗೆ ಜನರು ಹೈರಾಣಾವಾಗುತ್ತಿದ್ದಾರೆ. ಹಣ್ಣು, ಎಳನೀರು, ಮಜ್ಜಿಗೆ ಹಾಗೂ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ರಾಜ್ಯದ ಪ್ರಮುಖ ಜಲಾಶಯಗಳು ಪೂರ್ಣವಾಗಿ ಭರ್ತಿಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸಾಕಷ್ಟು ನೀರಿದ್ದು, ನೀರಾವರಿ ಬೆಳೆಗಳಿಗೆ ಹಾಗೂ ಆಯಾ ಜಲಾಶಯಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೂ ತೊಂದರೆಯಾಗುವ ಸಾಧ್ಯತೆಗಳು ವಿರಳ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಈಗಾಗಲೇ 32 ಡಿ.ಸೆ.ಗಿಂತ ಹೆಚ್ಚಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ 35 ಡಿ.ಸೆ.ಗಿಂತ ಹೆಚ್ಚಾಗಿರುವುದು ದಾಖಲಾಗುತ್ತಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ಸರಾಸರಿ 33 ಡಿ.ಸೆ.ನಷ್ಟು ಗರಿಷ್ಠ ತಾಪಮಾನ ದಾಖಲಾಗುತ್ತಿದೆ.

ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಬಿಸಿಲಿನ ಪ್ರಖರತೆ ಇನ್ನಷ್ಟು ಹೆಚ್ಚಾಗಲಿದ್ದು, ಈಗಿರುವ ಗರಿಷ್ಠ ತಾಪಮಾನಕ್ಕಿಂತ 4ರಿಂದ 5ಡಿ.ಸೆ.ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಬಿಸಿಲಿನ ತೀವ್ರತೆ ಹೆಚ್ಚಾಗುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು, ಸಾಧ್ಯವಾದಷ್ಟು ನೆರಳಿನಲ್ಲಿ ಕೆಲಸ ಮಾಡಲು ಹಾಗೂ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಲು ವೈದ್ಯರು ಹಾಗೂ ಹವಾಮಾನ ತಜ್ಞರು ಸಲಹೆ ಮಾಡಿದ್ದಾರೆ. ಬಿಸಿಲಿನಲ್ಲಿ ಅನಿವಾರ್ಯವಾಗಿ ಕೆಲಸ ಮಾಡಬೇಕಾದರೆ ಕೊಡೆ, ಟೋಪಿಗಳಂತಹ ಆಸರೆ ಪಡೆಯುವುದು ಅಗತ್ಯವಾಗಿದೆ.

RELATED ARTICLES
spot_img

Latest News