ಬೆಂಗಳೂರು,ಫೆ.20- ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರರ ಪ್ರಕರಣದಲ್ಲಿ ಎ-2 ಆರೋಪಿಯಾಗಿ ಸದ್ಯ ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಎಂಬಾತನ ಸುಳಿವು ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) 5 ಲಕ್ಷ ರೂ. ಬಂಪರ್ ಬಹುಮಾನವನ್ನು ಘೋಷಣೆ ಮಾಡಿದೆ.
ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿರುವ ಜುನೈದ್ ಎಂಬ ಈತ ಒಂಬತ್ತು ಬೇರೆ ಬೇರೆ ಹೆಸರುಗಳನ್ನು ಬಳಸಿ ತಪ್ಪಿಸಿಕೊಂಡಿದ್ದಾನೆ. ಜುನೇದ್ ಅಹದ್, ಜುನೈದ್, ಜೆಡಿ, ಜಮ್ಸೇದಾ, ಜಾನ್, ಸುಹಾನ್, ಡಿಜೆ ರಿಟ್‌್ಸ, ಜಮೀಲಾ, ಜಾನು ಸೇರಿದಂತೆ ಹಲವು ಹೆಸರುಗಳನ್ನು ಬಳಸಿದ್ದಾನೆ. ಎನ್‌ಐಎ ಈಗ ನಗರದ ಪ್ರಮುಖ ಸ್ಥಳಗಳಲ್ಲಿ ಜುನೈದ್‌ನ ಫೋಟೋಗಳೊಂದಿಗೆ ಪೋಸ್ಟರ್‌ಗಳನ್ನು ಅಂಟಿಸಿದೆ. ಮಾಹಿತಿ ನೀಡುವವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಬೆಂಗಳೂರು ಸಿಸಿಬಿ ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಆ ಸಮಯದಲ್ಲಿ 4 ಜೀವಂತ ಗ್ರೆನೇಡ್‌ಗಳು, 7 ಪಿಸ್ತೂಲ್‌ಗಳು, 45 ಜೀವಂತ ಗುಂಡುಗಳು, ವಾಕಿ-ಟಾಕಿ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳು ಬೆಂಗಳೂರಿನಲ್ಲಿ ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಯೋಜನೆ ಮಾಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಲಷ್ಕರ್-ಇ-ತೊಯ್ಬಾ ಸಂಘಟನೆಯ ಸಂಪರ್ಕ, ಕುಕ್ಕರ್ ಬಾಂಬ್ ತಯಾರಿಕೆ, ಗ್ರೆನೇಡ್‌ಗಳು, ಪಿಸ್ತೂಲ್‌ಗಳು – ಇವೆಲ್ಲವೂ ದೊಡ್ಡ ಅಪಾಯದ ಸೂಚನೆಯಾಗಿತ್ತು. ಸಿಸಿಬಿ ಪೊಲೀಸರು ಸಕಾಲದಲ್ಲಿ ಪ್ರಕರಣ ಪತ್ತೆಹಚ್ಚಿ ದೊಡ್ಡ ದುರಂತ ತಪ್ಪಿಸಿದ್ದರು.
ಈಗ ಎನ್‌ಐಎ ತನಿಖೆಯನ್ನು ಮುಂದುವರಿಸುತ್ತಿದೆ. ಜುನೈದ್‌ನ ಪತ್ತೆಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ನಗರದಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ ಜನರ ಸಹಕಾರ ಕೋರಿದೆ. ಯಾರಿಗಾದರೂ ಜುನೈದ್ ಅಥವಾ ಅವನ ಸಂಪರ್ಕದ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ತಿಳಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಈ ಹಿಂದೆ ಈತನ ಪತ್ತೆಗಾಗಿ ಬೆಂಗಳೂರು ಪೊಲೀಸರು ಲುಕ್ ಔಟ್ ನೋಟೀಸ್ ಜಾರಿಗೊಳಿಸಿದ್ದರು. ಆತ ದುಬೈನಲ್ಲಿ ತಲೆಮರೆಸಿಕೊಂಡಿದ್ದಾಗಿ ಮಾಹಿತಿಯಿದೆ. ಇನ್ನೂ ಕೆಲವು ಮೂಲಗಳ ಪ್ರಕಾರ ಆತ ಅಫ್ಘಾನಿಸ್ತಾನದ ಗಡಿ ಭಾಗಕ್ಕೆ ತೆರಳಿದ್ದಾನೆಂದು ಹೇಳಲಾಗಿದೆ.ಈ ಹಿನ್ನೆಲೆಯಲ್ಲಿ ಆತನ ಪತ್ತೆಗಾಗಿ, ಇಂಟರ್ ಪೋಲ್ ಪೊಲೀಸರನ್ನು ಸಂಪರ್ಕಿಸಿದ್ದ ಬೆಂಗಳೂರು ಪೊಲೀಸ್ ನ ಕೇಂದ್ರೀಯ ಅಪರಾಧ ನಿಗ್ರಹ ದಳ (ಸಿಸಿಬಿ) ಪೊಲೀಸರು ಲುಕ್ ಔಟ್ ನೋಟೀಸ್ ಜಾರಿಗೊಳಿಸುವಂತೆ ಮನವಿ ಮಾಡಿದ್ದರು.
ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಶಂಕಿತ ಉಗ್ರರು ಬೆಂಗಳೂರು ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ. ಬಂಧಿತರಿಗೆ ಪಿಸ್ತೂಲು, ಗ್ರೆನೇಡ್ ಇನ್ನಿತರ ವಿಧ್ವಂಸಕ ಕೃತ್ಯಗಳಿಗೆ ಬಳಸುವ ಸಾಮಗ್ರಿಗಳನ್ನು ಜುನೈದ್ ಸರಬರಾಜು ಮಾಡಿದ್ದನೆಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಜುನೈದ್‌ಗಾಗಿ ಪೊಲೀಸರು ಶೋಧ ನಡೆಸಿದ್ದರು. ಆದರೆ, ಆತ ಎರಡು ವರ್ಷಗಳ ಹಿಂದೆಯೇ ದುಬೈಗೆ ಪಲಾಯನ ಮಾಡಿದ್ದು, ಅಲ್ಲಿದ್ದುಕೊಂಡೇ ಭಾರತದಲ್ಲಿ ಉಗ್ರರನ್ನು ಬೆಳೆಸುವ ಕೆಲಸಗಳನ್ನು ಮಾಡುತ್ತಿದ್ದ. ಯುವಕರಿಗೆ ಜಿಹಾದ್ ಬೋಧಿಸಿ ಅವರನ್ನು ಉಗ್ರರನ್ನಾಗಿ ಪರಿವರ್ತಿಸುತ್ತಿದ್ದ ಎಂಬ ಆರೋಪಗಳಿವೆ.
ಬೆಂಗಳೂರಿನ ಸುಲ್ತಾನ್ ಪಾಳ್ಯದ ನಿವಾಸಿಯಾಗಿದ್ದ ಜುನೈದ್, 2017ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಜೈಲಿನಿಂದ ಹೊರಬಂದ ನಂತರ ರಕ್ತ ಚಂದನ ಸಗ್ಲಿಂಗ್ ನಡೆಸುತ್ತಿದ್ದ. ಆಗ, ಪುನಃ ಅರೆಸ್ಟ್ ಆಗಿದ್ದ ಜುನೈದ್, ಜೈಲು ಸೇರಿದ್ದ. ಆನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಈತ ಸಗ್ಲಿಂಗ್‌ಗಾಗಿ ತನ್ನದೇ ಆದ ಪಡೆಯೊಂದನ್ನು ಸೃಷ್ಟಿಸಿಕೊಂಡಿದ್ದ.
ಆದರೆ, ಇವರ ಪಡೆಗೆ ಪೊಲೀಸರ ಆತಂಕ ಇದ್ದಿದ್ದರಿಂದ ಆತ ದುಬೈಗೆ ಪಲಾಯನ ಮಾಡಿದ ಎನ್ನಲಾಗಿದೆ. ಸಗ್ಲರ್ ಆಗಿದ್ದಾಗಲೇ ಆತನಿಗೆ ಕೆಲವಾರು ಅಂತಾರಾಷ್ಟ್ರೀಯ ಸಂಪರ್ಕಗಳು ಸಿಕ್ಕಿದ್ದರಿಂದ ಆತನಿಗೆ ದುಬೈಗೆ ಹೋಗಲು ಅವಕಾಶವಾಗಿತ್ತು ಎಂದು ಹೇಳಲಾಗಿದೆ.
2017ರಲ್ಲಿ ಒಂದು ಕೊಲೆ ಪ್ರಕರಣದಲ್ಲಿ ಜುನೈದ್ ಜೈಲಿಗೆ ಹೋಗಿದ್ದ. ಜೈಲಿನಲ್ಲಿದ್ದಾಗ ನಜೀರ್‌ನೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ. ಜೈಲಿನಿಂದ ಹೊರಬಂದ ನಂತರ ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಸಿಸಿಬಿ ಪೊಲೀಸರು ಪ್ರಕರಣವನ್ನು ಪತ್ತೆಹಚ್ಚಿ ತನಿಖೆ ನಡೆಸಿದ್ದರು. ನಂತರ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಯಿತು.
