ಬೆಂಗಳೂರು,ಫೆ.22- ರಾಯ ಚೂರು ನಗರದಲ್ಲಿಂದು ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಮೆರವಣಿಗೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಬಾಗಲಕೋಟೆ, ಕಲಬುರಗಿ ಯಲ್ಲಿ ಮೆರವಣಿಗೆ ವೇಳೆ ನಡೆದ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಮೆರವಣಿಗೆಯಲ್ಲಿ 400 ರಿಂದ 500 ಮಂದಿ ಸೇರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಪೊಲೀಸ್ ಕಣ್ಗಾವಲು ಇರಿಸಲಾಗಿದೆ. ಇಬ್ಬರು ಡಿವೈಎಸ್ಪಿ, ಐದು ಮಂದಿ ಸಿಪಿಐ, ಎಂಟು ಮಂದಿ ಪಿಎಸ್‌ಐ, 120 ಮಂದಿ ಕಾನ್‌ಸ್ಟೇಬಲ್‌ಗಳು, ಒಂದು ಕೆಎಸ್‌ಆರ್‌ಪಿ ತುಕಡಿ ಹಾಗೂ ನಾಲ್ಕು ಹೋಂ ಗಾರ್ಡ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.
ಮೆರವಣಿಗೆಯು ರಾಯಚೂರಿನ ಗಾಂಧಿವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ಅಂಬಾದೇವಿ ದೇವಸ್ಥಾನದವರೆಗೆ ಸಾಗಲಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೆರವಣಿಗೆ ಹೊರಡಲಿದ್ದು, ಛತ್ರಪತಿ ಶಿವಾಜಿ ಪುತ್ಥಳಿ ಜೊತೆಗೆ ಶಿವಪಾರ್ವತಿ, ಶ್ರೀರಾಮ, ಆಂಜನೇಯ, ಗಣೇಶ ವಿಗ್ರಹಗಳು ಸಾಗಲಿವೆ.
ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗದಿರಲು ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಸಂಜೆ 4 ಗಂಟೆ ಒಳಗೆ ಮೆರವಣಿಗೆ ಮುಗಿಸಲು ಸೂಚಿಸಲಾಗಿದೆ.
