ಬೆಂಗಳೂರು,ಫೆ.22- ಗುತ್ತಿಗೆದಾರ ರೊಬ್ಬರಿಂದ ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತ ಬಂಧನಕ್ಕೊಳಪಟ್ಟಿರುವ ಶಾಸಕ ಡಾ.ಚಂದ್ರು ಲಮಾಣಿ ವಿರುದ್ಧ ಬಿಜೆಪಿ ಶಿಸ್ತು ಕ್ರಮ ಜರುಗಿಸಲು ಗಂಭೀರ ಚಿಂತನೆ ನಡೆಸಿದೆ.
ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಸ್ವತಃ ಪಕ್ಷದ ಶಾಸಕರೇ ಲೋಕಾಯುಕ್ತ ಬಲೆಗೆ ಬಿದ್ದಿರುವುದು ಬಿಜೆಪಿಗೆ ಭಾರೀ ಇರಿಸುಮುರಿಸು ಉಂಟು ಮಾಡಿದೆ.
ಪ್ರಕರಣ ಸಂಬಂಧ ಕೇಂದ್ರ ಬಿಜೆಪಿ ವರಿಷ್ಠರು ವರದಿಯನ್ನು ನೀಡುವಂತೆ ರಾಜ್ಯ ಘಟಕಕ್ಕೆ ಸೂಚನೆ ನೀಡಿದ್ದು, ಲೋಕಾಯುಕ್ತ ವರದಿ ಬಂದ ನಂತರ ಪಕ್ಷವು ಶಿಸ್ತು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಪಕ್ಷದಿಂದ ಅಮಾನತುಪಡಿಸುವುದು ಇಲ್ಲವೇ ಲಂಚ ಪ್ರಕರಣವು ಸತ್ಯಾಂಶದಿಂದ ಕೂಡಿದ್ದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಭ್ರಷ್ಟಾಚಾರದ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಎಂದು ಹೇಳುತ್ತಿರುವ ಬಿಜೆಪಿಯು ಯಾರೇ ಇರಲಿ ಎಂದು ಪಕ್ಷಕ್ಕಿಂತ ದೊಡ್ಡವರಲ್ಲ ಎಂಬ ಸಂದೇಶವನ್ನು ರವಾನಿಸಲು ಮುಂದಾಗಿದೆ.
ಈ ಹಿಂದೆ ಶಾಸಕರ ಭವನದಲ್ಲೇ ಗುತ್ತಿಗೆದಾರರೊಬ್ಬರಿಂದ ಲಂಚ ಪಡೆದು ಬಂಧನಕ್ಕೊಳಪಟ್ಟಿದ್ದ ಕೆಜಿಎಫ್‌ನ ಮಾಜಿ ಶಾಸಕ ವೈ.ಸಂಪಂಗಿ ಹಾಗೂ ಲಂಚ ಪ್ರಕರಣದಲ್ಲಿ ಬಂಧಕ್ಕೊಳಪಟ್ಟಿದ್ದ ಚನ್ನಗಿರಿ ಮಾಜಿ ಶಾಸಕ ಮಾಡಳ್ ವಿರೂಪಾಕ್ಷಪ್ಪ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿರಲಿಲ್ಲ.
ಕೊನೆಗೆ ನ್ಯಾಯಾಲಯದಲ್ಲಿ ಮಾಡಳ್ ವಿರೂಪಾಕ್ಷಪ್ಪಗೆ ಕ್ಲೀನ್‌ಚಿಟ್ ಸಿಕ್ಕಿತ್ತಾದರೂ ಆಗಾಗಲೇ ಕಾಲ ಮಿಂಚಿ ಹೋಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಪ್ರತಿಪಕ್ಷ ಕಾಂಗ್ರೆಸ್ ಇದೇ ಅಸ್ತ್ರವನ್ನು ಮುಂದಿಟ್ಟುಕೊಂಡು ಬಿಜೆಪಿಗೆ ಭಾರೀ ಮುಜುಗರ ಸೃಷ್ಟಿಸಿತ್ತು.
ಈಗ ಶಾಸಕ ಚಂದ್ರು ಲಮಾಣಿ ಪ್ರಕರಣದಿಂದಲೂ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾಂಗ್ರೆಸ್ ತನ್ನ ವೈಫಲ್ಯಗಳನ್ನು ಮರೆಮಾಚಲು ಶಾಸಕರ ಲಂಚ ಪ್ರಕರಣವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ವಿಧಿ ಇಲ್ಲದೆ ಶಿಸ್ತುಕ್ರಮ ಜರುಗಿಸುವ ಸಂಭವವಿದೆ.
ಪ್ರಕರಣ ನಡೆದ ನಂತರ ಕೆಲವು ಸ್ಫೋಟಕ ಸತ್ಯಗಳು ಆಚೆ ಬರುತ್ತಿದ್ದು, ಶಾಸಕರನ್ನು ದುರದ್ದೇಶಪೂರ್ವಕವಾಗಿ ಷಡ್ಯಂತ್ರ ನಡೆಸಿ ಸಿಲುಕಿಸಲಾಗಿದೆ ಎಂದು ಬಿಜೆಪಿ ಹೇಳುತ್ತಿದೆ.
ಲೋಕಾಯುಕ್ತ ಬಲೆಗೆ ಬಿದ್ದ ನಂತರ ಬಿಜೆಪಿ ಬೆಂಬಲಿಗರು ಕೆಲವು ಆಡಿಯೋಗಳನ್ನು ಬಿಡುಗಡೆ ಮಾಡುತ್ತಿರುವುದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದೆ. ಅಂತಿಮವಾಗಿ ಲೋಕಾಯುಕ್ತ ವರದಿ ಬಂದ ನಂತರ ಶಿಸ್ತು ಕ್ರಮದ ಬಗ್ಗೆ ನಿರ್ಧಾರವಾಗಲಿದೆ.
