ಬೆಂಗಳೂರು,ಫೆ.27- ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ ಎಂದೇ ಪರಿಗಣಿಸಲಾಗುವ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ನಾಳೆಯಿಂದ ರಾಜ್ಯಾದ್ಯಂತ ಮಾ.17 ರವರೆಗೆ ನಡೆಯಲಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಕಳೆದ ಬಾರಿಯಂತೆ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವೆಬ್‌ಕಾಸ್ಟಿಂಗ್ ಮೂಲಕ ವೀಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿದ್ದು, ಆ ಪ್ರದೇಶದಲ್ಲಿ ಜೆರಾಕ್‌್ಸ, ಸೈಬರ್, ಕಂಪ್ಯೂಟರ್ ಸೆಂಟರ್‌ಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ಬಾರಿ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 7 ರಂದು ಪ್ರಕಟಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆ ಮುಂಚಿತವಾಗಿಯೇ ಘೋಷಿಸಿದೆ. ಪರೀಕ್ಷೆಗೆ ಮುನ್ನವೇ ಫಲಿತಾಂಶ ದಿನಾಂಕ ಪ್ರಕಟಿಸಿರುವುದು ರಾಜ್ಯದಲ್ಲಿ ಇದೇ ಮೊದಲು.
ಮುಕ್ತ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದು ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಬಾರಿ ರಾಜ್ಯದ 1,217 ಕೇಂದ್ರಗಳಲ್ಲಿ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ವಿಜ್ಞಾನ ವಿಭಾಗದಲ್ಲಿ 2,92,645, ವಾಣಿಜ್ಯ ವಿಭಾಗದಲ್ಲಿ 2,11,174, ಕಲಾ ವಿಭಾಗದಲ್ಲಿ 1,42,982 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.
ಸಾಮಾಜಿಕ ಜಾಲತಾಣದ ಮೇಲೆ ನಿಗಾ :
ವಾಟ್ಸಾಪ್, ಟೆಲಿಗ್ರಾಮ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರಶ್ನೆ ಪತ್ರಿಕೆ ಹರಿಬಿಡುವವರ ವಿರುದ್ಧ ಮತ್ತು ವದಂತಿ ಹಬ್ಬಿಸುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಎಲೆಕ್ಟ್ರಾನಿಕ್ ಉಪಕರಣ ನಿಷೇಧ :
ಪರೀಕ್ಷಾ ಕೇಂದ್ರದೊಳಗೆ ಮೊಬೈಲ್, ಸಾರ್ಟ್ ವಾಚ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಕೇಂದ್ರಗಳ ಸುತ್ತ ಸಿಬ್ಬಂದಿ ನಿಯೋಜನೆ :
ಪರೀಕ್ಷಾ ಕೇಂದ್ರಗಳ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಆತಂಕವಿಲ್ಲದೆ ಪರೀಕ್ಷೆ ಬರೆಯಲು ಸಾಧ್ಯವಾಗುವಂತೆ ಭದ್ರತೆ ಹೆಚ್ಚಿಸಲಾಗಿದೆ. ಯಾವುದೇ ಅಡ್ಡಿ, ಗೊಂದಲ ಅಥವಾ ಗಲಾಟೆಗಳಿಗೆ ಅವಕಾಶ ಕೊಡದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಂಚನೆ ನಡೆಸುವ ಕೆಲವು ಸಿಂಡಿಕೇಟ್‌ಗಳು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಹಂಚುತ್ತಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣಿಟ್ಟಿದ್ದಾರೆ. ವಿದ್ಯಾರ್ಥಿಗಳು ಅಥವಾ ದಿಕ್ಕುತಪ್ಪಿಸುವ ಮಾಹಿತಿಯನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಅವಶ್ಯಕತೆ ಇದ್ದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ಪೆಲೀಸರು ತಿಳಿಸಿದ್ದಾರೆ. ಹಿಂದಿನ ವರ್ಷಗಳಲ್ಲಿ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿದ್ದ ಕೆಲವರ ಮೇಲೆ ಈ ಬಾರಿ ವಿಶೇಷ ನಿಗಾ ಇಡಲಾಗಿದೆ. ಪರೀಕ್ಷಾ ಸಂದರ್ಭಗಳಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಜ್ಜಾಗಿದೆ.
ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್ ಹಾಗೂ ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಪ್ರವೇಶ ಪತ್ರ ತೋರಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ -1 ವೇಳಾಪಟ್ಟಿ :
ನಾಳೆ ಕನ್ನಡ, ಅರೇಬಿಕ್, ಮಾ.2ಕ್ಕೆ ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ಮಾ.3ಕ್ಕೆ ಇಂಗ್ಲಿಷ್, ಮಾ.4ಕ್ಕೆ ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕತ, ಫ್ರೆಂಚ್, ಮಾ.5ಕ್ಕೆ ಇತಿಹಾಸ, ಮಾ.6ಕ್ಕೆ ಭೌತಶಾಸ್ತ್ರ, ಮಾ.7ಕ್ಕೆ ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ, ಮಾ.9ಕ್ಕೆ ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ, ಮಾ.10ಕ್ಕೆ ಅರ್ಥಶಾಸ್ತ್ರ, ಮಾ.11ಕ್ಕೆ ತರ್ಕಶಾಸ್ತ್ರ, ವಿದ್ಯುನಾನಶಾಸ್ತ್ರ, ಗೃಹ ವಿಜ್ಞಾನ, ಮಾ.12ಕ್ಕೆ ಹಿಂದಿ, ಮಾ.13ಕ್ಕೆ ರಾಜ್ಯಶಾಸ್ತ್ರ, ಮಾ.14ಕ್ಕೆ ಲೆಕ್ಕಶಾಸ್ತ್ರ, ಗಣಿತ, ಮಾ.16ಕ್ಕೆ ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ, ಮಾ.17ಕ್ಕೆ ಹಿಂದುಸ್ತಾನಿ ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ ಮೊದಲಾದ ಪರೀಕ್ಷೆಗಳು ನಡೆಯಲಿವೆ.
