Thursday, April 23, 2026
Homeರಾಜ್ಯಅನರ್ಹ ಫಲಾನುಭವಿಗಳನ್ನು ಕೈಬಿಟ್ಟು ಗ್ಯಾರಂಟಿ ಯೋಜನೆಗಳ ವೆಚ್ಚ ತಗ್ಗಿಸಲು ಮುಂದಾದ ಸರ್ಕಾರ

ಅನರ್ಹ ಫಲಾನುಭವಿಗಳನ್ನು ಕೈಬಿಟ್ಟು ಗ್ಯಾರಂಟಿ ಯೋಜನೆಗಳ ವೆಚ್ಚ ತಗ್ಗಿಸಲು ಮುಂದಾದ ಸರ್ಕಾರ

Government moves to cut cost of guarantee schemes by dropping ineligible beneficiaries

ಬೆಂಗಳೂರು,ಫೆ.28- ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆಯ ನಡುವೆಯೇ, ಅರ್ಹವಲ್ಲದ ಫಲಾನುಭವಿಗಳನ್ನು ಕೈಬಿಡುವ ಮೂಲಕ ಯೋಜನೆಗಳ ವೆಚ್ಚ ಕಡಿತಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.

2023ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌‍ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಅದೇ ವರ್ಷ ಪೂರಕ ಬಜೆಟ್‌‍ನಲ್ಲಿ ಎಂಟು ತಿಂಗಳಿಗೆ 35,410 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು.

2024-25ರಲ್ಲಿ 56,000 ಕೋಟಿ ರೂ. ಹಾಗೂ ಪ್ರಸ್ತುತ 2025-26 ಆರ್ಥಿಕ ವರ್ಷದಲ್ಲಿ ಸುಮಾರು 51,000 ಕೋಟಿ ರೂ. ಅನುದಾನ ನೀಡಲಾಗಿದೆ. ಇದೀಗ ಅರ್ಹತೆಯಿಲ್ಲದ ಫಲಾನುಭವಿಗಳನ್ನು ಯೋಜನೆಗಳಿಂದ ತೆಗೆದುಹಾಕುತ್ತಿರುವುದರಿಂದ ಪ್ರಸಕ್ತ ಸಾಲಿನ ಬಜೆಟ್‌‍ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ನೀಡುವ ಅನುದಾನವನ್ನು ಕಡಿಮೆ ಮಾಡಲು ಚಿಂತನೆ ನಡೆಸುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಶಕ್ತಿ ಯೋಜನೆಯಡಿ ಪ್ರತಿದಿನ 70-75 ಲಕ್ಷ ಮಹಿಳೆಯರು ಉಚಿತ ಬಸ್‌‍ ಪ್ರಯಾಣ ಮಾಡುತ್ತಿದ್ದಾರೆ. ಆದರೆ ನಕಲಿ ದಾಖಲೆಗಳ ಬಳಕೆ ಹಾಗೂ ಕೆಲ ಕಡೆ ಪುರುಷರಿಗೆ ಉಚಿತ ಟಿಕೆಟ್‌ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸಾರ್ಟ್‌ ಕಾರ್ಡ್‌ ವ್‌ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ದೊರೆಯಲಿದೆ.

ಅನ್ನಭಾಗ್ಯ ಯೋಜನೆಯಡಿ 4.21 ಕೋಟಿ ಜನರಿಗೆ ದಿನಸಿ ಸಾಮಗ್ರಿ ವಿತರಿಸಲಾಗುತ್ತಿದೆ. ಆದರೆ, ಯೋಜನೆಯಡಿ ಸುಮಾರು ಶೇ.20 ಫಲಾನುಭವಿಗಳು ಅರ್ಹವಲ್ಲ ಎಂದು ಪತ್ತೆಯಾಗಿದ್ದು, ಸುಮಾರು 4 ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಇನ್ನು 5 ಕೆಜಿ ಅಕ್ಕಿ ಬದಲು ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಎಣ್ಣೆ ನೀಡುವ ವ್ಯವಸ್ಥೆ ಜಾರಿಗೊಳಿಸಿ ವೆಚ್ಚ ಕಡಿತಗೊಳಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ 2,000 ರೂ. ನೀಡಲಾಗುತ್ತಿದೆ. ಆದರೆ, ಪರಿಶೀಲನೆ ವೇಳೆ ಕೆಲವರು ಆದಾಯ ತೆರಿಗೆ ಪಾವತಿಸುವವರು ಹಾಗೂ ಮೃತ ಫಲಾನುಭವಿಗಳಿಗೂ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದ್ದು, ಇದು ನಿಯಮಗಳಿಗೆ ವಿರುದ್ಧವಾಗಿದೆ. ಅಲ್ಲದೆ, ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಮರಣ ಹೊಂದಿದ್ದರೂ. ಅವರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರವು ಈಗ ಪಿಂಚಣಿಯಂತೆಯೇ ಜೀವ ಪ್ರಮಾಣಪತ್ರಗಳನ್ನು ಪರಿಚಯಿಸಲು ಚಿಂತನೆ ನಡೆಸುತ್ತಿದೆ. ಇದರಿಂದ ಸರ್ಕಾರಕ್ಕೆ ಕೋಟಿಗಟ್ಟಲೆ ಉಳಿತಾಯವಾಗಲಿದೆ. ಯುವ ನಿಧಿ ಯೋಜನೆಯಡಿ ಪದವಿ ನಂತರ ಎರಡು ವರ್ಷಗಳವರೆಗೆ ಮಾತ್ರ ನೆರವು ನೀಡಬೇಕಾದರೂ, ಕೆಲವರು ಹೆಚ್ಚು ಕಾಲ ಹಣ ಪಡೆಯುತ್ತಿರುವುದು ಕಂಡುಬಂದಿದೆ. ಇನ್ನು ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆಯಲ್ಲಿಯೂ ಅಕ್ರಮಗಳ ಬಗ್ಗೆ ಅಧಿಕಾರಿಗಳು ಸೂಚಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ನಿಗದಿಪಡಿಸಿದ ಮೊತ್ತವನ್ನು ಕಡಿಮೆ ಮಾಡಲು ಹಲವಾರು ಸಲಹೆಗಳಿವೆ. ಕೆಲವು ಅನರ್ಹ ಫಲಾನುಭವಿಗಳನ್ನು ತೆಗೆದುಹಾಕಲಾಗಿದ್ದರೂ, ಕೆಲವರನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಒಂದೆರಡು ಸುತ್ತಿನ ಚರ್ಚೆಯ ನಂತರ ನಮಗೆ ಸ್ಪಷ್ಟತೆ ಸಿಗಲಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅನರ್ಹ ಫಲಾನುಭವಿಗಳಿಗೆ ಕೊಕ್‌! :
ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಮಂಡನೆಯಾಗಲಿರುವ ತಮ ದಾಖಲೆಯ 17ನೇ ಬಜೆಟ್‌‍ನಲ್ಲಿಯೂ ಈ ಯೋಜನೆಗಳಿಗೆ ಭಾರಿ ಅನುದಾನ ಎತ್ತಿಡಲಿದ್ದಾರೆ. ಆದರೆ, ಆರ್ಥಿಕ ಹೊರೆ ತಗ್ಗಿಸಲು ಯೋಜನೆಗಳಲ್ಲಿ ಒಂದಿಷ್ಟು ಸಾರ್ಟ್‌ ಬದಲಾವಣೆಗಳನ್ನು ಮಾತ್ರ ತರುವ ಸಾಧ್ಯತೆ ದಟ್ಟವಾಗಿದೆ.

ಸರ್ಕಾರ ಗ್ಯಾರಂಟಿಗಳನ್ನು ನಿಲ್ಲಿಸದಿದ್ದರೂ, ಸುಖಾಸುಮನೆ ಲಾಭ ಪಡೀಯುತ್ತೀರುವ ಅನರ್ಹ ಫಲಾನುಭವಿಗಳಿಗೆ ಬಿಸಿ ಮುಟ್ಟಿಸಲಿದೆ. ಅನರ್ಹ ಬಿಪಿಎಲ್‌ ಕಾರ್ಡ್‌ ರದ್ದತಿ, ಆದಾಯ ತೆರಿಗೆ ಕಟ್ಟುವವರಿಗೆ ಗೃಹಲಕ್ಷ್ಮಿ ಕಡಿತ ಮಾಡುವುದು ಹಾಗೂ ಶಕ್ತಿ ಯೋಜನೆಗೆ ಸಾರ್ಟ್‌ ಕಾರ್ಡ್‌ ತರುವ ಮೂಲಕ ಸಾವಿರಾರು ಕೋಟಿ ರೂಪಾಯಿ ಉಳಿಸಲು ಸರ್ಕಾರ ಮುಂದಾಗಿದೆ. ಇದರಿಂದ ಕೇವಲ ಅರ್ಹ ಬಡವರಿಗೆ ಮಾತ್ರ ಯೋಜನೆ ತಲುಪುವಂತೆ ಮಾಡುವುದು ಸರ್ಕಾರದ ಲೆಕ್ಕಾಚಾರ.

ಈ ಐದು ಗ್ಯಾರಂಟಿ ಯೋಜನೆಗಳಿಗಾಗಿ (ಶಕ್ತಿ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಯುವ ನಿಧಿ) ಸರ್ಕಾರ ಪ್ರತಿ ವರ್ಷ ಬರೋಬ್ಬರಿ 51,000 ದಿಂದ 52,000 ಕೋಟಿ ರೂಪಾಯಿಗಳನ್ನು ನೀರಿಗಿಂತ ಸಲೀಸಾಗಿ ಖರ್ಚು ಮಾಡುತ್ತಿದೆ. ಯೋಜನೆ ಶುರುವಾದಾಗಿನಿಂದ ಈವರೆಗೆ ಬರೋಬ್ಬರಿ 1 ಲಕ್ಷ ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ. ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಆರ್ಥಿಕ ಹೊರೆಯಾಗಿದ್ದು, ಬೇರೆ ಅಭಿವೃದ್ಧಿ ಕಾಮಗಾರಿಗಳಿಗೆ (ರಸ್ತೆ, ನೀರಾವರಿ) ಅನುದಾನ ಹೊಂದಿಸುವುದೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.

ಒಂದೆಡೆ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿದ್ದರೂ, ಜನಸಾಮಾನ್ಯರಿಗೆ, ಅದರಲ್ಲೂ ಬಡವರಿಗೆ ಈ ಯೋಜನೆಗಳು ಸಂಜೀವಿನಿಯಾಗಿವೆ. ಮಹಿಳೆಯರ ಅಕೌಂಟ್‌‍ಗೆ ಪ್ರತಿ ತಿಂಗಳು 2000 ರೂ. ಜಮಾ ಆಗುತ್ತಿದೆ, ಕರೆಂಟ್‌ ಬಿಲ್‌ ಫ್ರೀ ಆಗಿದೆ, ಮಹಿಳೆಯರಿಗೆ ಬಸ್‌‍ ಪ್ರಯಾಣ ಉಚಿತವಾಗಿದೆ. ಸಿಎಂ ಹೇಳುವ ಪ್ರಕಾರ, ಈ ಯೋಜನೆಗಳಿಂದ ಜನರ ಕೈಯಲ್ಲಿ ದುಡ್ಡು ಓಡಾಡುತ್ತಿದ್ದು, ಅವರ ಕೊಳ್ಳುವ ಸಾಮರ್ಥ್ಯ ಭಾರಿ ಹೆಚ್ಚಾಗಿದೆ.

ಪರಿಣಾಮವಾಗಿ ಕರ್ನಾಟಕದ ತಲಾ ಆದಾಯ ದೇಶದಲ್ಲೇ ನಂಬರ್‌ 1 ಸ್ಥಾನಕ್ಕೇರಿದೆ. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಗ್ಯಾರಂಟಿಗಳನ್ನು ಬಿಡಲೂ ಆಗದ ಪರಿಸ್ಥಿತಿಯಿಲ್ಲಿದೆ. ಆದರೂ, ಆರ್ಥಿಕ ಶಿಸ್ತು ಕಾಪಾಡಿಕೊಂಡು, ಆಸ್ತಿ ಸೃಜನೆ ಹಾಗೂ ಕಲ್ಯಾಣ ಯೋಜನೆಗಳೆರಡನ್ನೂ ಸಮತೋಲನ ಮಾಡುವ ಮಹತ್ವದ ಸವಾಲು ಸಿಎಂ ಮುಂದಿದೆ.

RELATED ARTICLES

Latest News