ಟೋಕಿಯೊ, ಜು.28: ಜಪಾನ್‌ನ ದಕ್ಷಿಣ ಭಾಗದ ಕ್ಯುಷು (Kyushu) ಪ್ರದೇಶದಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಬೆನ್ನಲ್ಲೇ ಜಪಾನ್ ಹವಾಮಾನ ಇಲಾಖೆ (JMA) ಸುನಾಮಿ ಎಚ್ಚರಿಕೆ ನೀಡಿದೆ.
ಭೂಕಂಪವು ಕುಮೊಮೊಟೊ (Kumamoto) ಪ್ರಾಂತ್ಯದ ಸಮುದ್ರದಡಿ ಸಂಭವಿಸಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಭೂಮಿಯಿಂದ ಸುಮಾರು 10 ಕಿ.ಮೀ. ಆಳದಲ್ಲಿ ಕಂಪನ ಉಂಟಾಗಿದೆ. ಇದರಿಂದ ಸುಮಾರು 1 ಮೀಟರ್ ಎತ್ತರದ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಅರಿಯಾಕೆ ಸಮುದ್ರ (Ariake Sea) ಹಾಗೂ ಯತ್ಸುಶಿರೊ ಸಮುದ್ರ (Yatsushiro Sea) ಕರಾವಳಿ ಪ್ರದೇಶಗಳಿಗೆ ಸುನಾಮಿ ಸಲಹೆ (Advisory) ಜಾರಿಗೊಳಿಸಲಾಗಿದ್ದು, ಕರಾವಳಿ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಭೂಕಂಪದ ತೀವ್ರತೆ ಕುಮೊಮೊಟೊ ಪ್ರದೇಶದಲ್ಲಿ ಜಪಾನ್‌ನ ಭೂಕಂಪ ತೀವ್ರತಾ ಮಾಪಕದಲ್ಲಿ ಗರಿಷ್ಠ 7 ಎಂದು ದಾಖಲಾಗಿದೆ. ರಾಷ್ಟ್ರೀಯ ಹಾಗೂ ಸ್ಥಳೀಯ ಆಡಳಿತದಿಂದ ನೀಡಲಾಗುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಮತ್ತು ಆತಂಕಕ್ಕೊಳಗಾಗದೆ ಎಚ್ಚರಿಕೆಯಿಂದ ವರ್ತಿಸುವಂತೆ ಸರ್ಕಾರ ಮನವಿ ಮಾಡಿದೆ.
ಪ್ರಧಾನಿ ಸನಾಏ ತಕೈಚಿ ಪರಿಸ್ಥಿತಿಯ ಮೇಲ್ವಿಚಾರಣೆಗಾಗಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ ಎಂದು ತಿಳಿಸಿದ್ದು, ಜನರ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ. ಕರಾವಳಿ ಪ್ರದೇಶಗಳಿಂದ ದೂರವಿದ್ದು, ಸಂಭವನೀಯ ಪ್ರಬಲ ಮರುಕಂಪಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಅವರು ಮನವಿ ಮಾಡಿದ್ದಾರೆ.
ಕುಮೊಮೊಟೊ, ನಾಗಾಸಾಕಿ, ಕಾಗೋಶಿಮಾ, ಫುಕುವೋಕಾ, ಸಾಗಾ, ಓಯಿಟಾ ಹಾಗೂ ಮಿಯಾಜಾಕಿ ಪ್ರಾಂತ್ಯಗಳಲ್ಲಿ ತುರ್ತು ಭೂಕಂಪ ಎಚ್ಚರಿಕೆ ವ್ಯವಸ್ಥೆ ಸಕ್ರಿಯಗೊಳಿಸಲಾಗಿದೆ. ಇದೇ ವೇಳೆ, ಅಮೆರಿಕದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಸ್ಥಳೀಯ ಕರಾವಳಿ ಪ್ರದೇಶಗಳನ್ನು ಹೊರತುಪಡಿಸಿ ದೂರದ ಪ್ರದೇಶಗಳಿಗೆ ಸುನಾಮಿಯ ಅಪಾಯ ಇಲ್ಲ ಎಂದು ತಿಳಿಸಿದೆ.
