Homeರಾಜ್ಯಕೆಪಿಎಸ್‌‍ಸಿ ಹಗರಣ ಕುರಿತು ಸಿಐಡಿ ತನಿಖೆ

ಕೆಪಿಎಸ್‌‍ಸಿ ಹಗರಣ ಕುರಿತು ಸಿಐಡಿ ತನಿಖೆ

CID probe into KPSC scam

ಬೆಂಗಳೂರು, ಜು.28- ಪಶು ವೈದ್ಯರ ನೇಮಕಾತಿಯ ವೇಳೆ ಕೆಪಿಎಸ್‌‍ಸಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ದಾಖಲಾಗಿರುವ ಮೂರು ಎಫ್‌ಐಆರ್‌ಗಳ ಪೈಕಿ ಎರಡನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.ಕರ್ನಾಟಕ ಲೋಕಸೇವಾ ಆಯೋಗದಿಂದ 400 ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ವಿಧಾನಸೌಧ ಪೊಲೀಸ್‌‍ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ಅದಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವರ್ಗಾಯಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್‌‍ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸಿಐಡಿ ತನಿಖೆಗೆ ಇಂದು ಪೊಲೀಸ್‌‍ ಮಹಾನಿರ್ದೇಶಕರು ಆದೇಶಿಸಿದ್ದಾರೆ. ಅದರಂತೆ ಎರಡು ಪ್ರಕರಣಗಳನ್ನು ಹಸ್ತಾಂತರಿಸಲಾಗುವುದು. ಬಾಕಿ ಒಂದು ಪ್ರಕರಣ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ. ಅಲ್ಲಿನ ಆದೇಶವನ್ನು ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಕರ್ನಾಟಕ ಸಾರ್ವಜನಿಕ ಪರೀಕ್ಷೆ (ಭ್ರಷ್ಟಾಚಾರ ಹಾಗೂ ನೇಮಕಾತಿಯಲ್ಲಿನ ಅಕ್ರಮಗಳನ್ನು ತಡೆಗಟ್ಟುವ ಕ್ರಮಗಳು) ಅಧಿನಿಯಮ, 2023ರ ಕಲಂ 10ರಡಿ ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳನ್ನು ಮುಂದಿನ ತನಿಖೆಗಾಗಿ ಅಪರಾಧ ತನಿಖಾ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ನ್ಯಾಯಸಮತ, ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸುವುದು ತಮ ಗುರಿಯಾಗಿದೆ.

ಸಾರ್ವಜನಿಕ ನೇಮಕಾತಿ ಪ್ರಕ್ರಿಯೆಯ ಪಾವಿತ್ರ್ಯ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲು ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.ಪರೀಕ್ಷೆಗಳು ಅಥವಾ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ, ಅಕ್ರಮ ಸೇರಿದಂತೆ ಯಾವುದೇ ರೀತಿಯ ವಂಚನೆ ನಡೆದಿದೆ ಎಂಬ ಆರೋಪಗಳು ಬಂದರೆ ಅವುಗಳ ಬಗ್ಗೆ ಯಾವುದೇ ಒತ್ತಡ ಅಥವಾ ಪಕ್ಷಪಾತವಿಲ್ಲದೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ತನಿಖೆಯಲ್ಲಿ ತಪ್ಪಿತಸ್ಥರು ಯಾರು ಎಂಬುದು ದೃಢಪಟ್ಟರೆ, ಅವರು ಯಾವುದೇ ಹುದ್ದೆಯಲ್ಲಿದ್ದರೂ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್‌ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಪ್ರಕರಣಗಳನ್ನು ಅಪರಾಧ ತನಿಖಾ ಇಲಾಖೆಗೆ ವರ್ಗಾಯಿಸಿರುವುದು ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಈ ಕ್ರಮದಿಂದ ಲಕ್ಷಾಂತರ ಸ್ಪರ್ಧಾತಕ ಪರೀಕ್ಷಾ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ತನಿಖೆಯ ಬಗ್ಗೆ ವಿಶ್ವಾಸ ಮೂಡಿಸುವ ಉದ್ದೇಶ ಹೊಂದಲಾಗಿದೆ. ಸ್ಪರ್ಧಾತಕ ಪರೀಕ್ಷೆಗಳ ಪಾವಿತ್ರ್ಯವನ್ನು ಕಾಪಾಡುವುದು ಹಾಗೂ ಅರ್ಹತೆಗೆ ನ್ಯಾಯ ದೊರಕುವಂತೆ ಮಾಡುವುದು ರಾಜ್ಯ ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ದೃಢ ಪಡಿಸಿದ್ದಾರೆ.

ಹಿನ್ನೆಲೆ:
ಪಶು ವೈದ್ಯರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಆಯೋಗವು ತುರ್ತು ಸಭೆ ನಡೆಸಿ 2026ರ ಜುಲೈ 17ರವರೆಗೂ ನೇಮಕಾತಿ ಪಟ್ಟಿಯನ್ನು ತಡೆ ಹಿಡಿಯುವ ಮಹತ್ವದ ನಿರ್ಧಾರ ಕೈಗೊಂಡಿತ್ತು. ಜೊತೆಗೆ ಆರೋಪಗಳ ತನಿಖೆಗೆ ನಾಲ್ವರು ಸದಸ್ಯರ ಆಂತರಿಕ ತನಿಖಾ ಉಪಸಮಿತಿಯನ್ನು ರಚಿಸಿದ್ದು, ಒಂದು ವಾರದೊಳಗೆ ಸವಿಸ್ತಾರ ಹಾಗೂ ವಾಸ್ತವಾಧರಿತ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಜುಲೈ 24ರಂದು ವಿಧಾನಸೌಧ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಜೊತೆಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಹಾಗೂ ಜುಲೈ 25ರಂದು ಪೊಲೀಸ್‌‍ ಇಲಾಖೆ ದಾಖಲಿಸಿದ ಪ್ರಥಮ ಮಾಹಿತಿ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿತ್ತು.

ಇದೇ ಹಗರಣಕ್ಕೆ ಸಂಬಂಧಿಸಿದಂತೆ ಜುಲೈ 13ರಂದು ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್‌‍. ಸಾಹುಕಾರ್‌ ಅವರನ್ನು ರಾಜ್ಯಪಾಲರು ಅಮಾನತುಗೊಳಿಸಿದ್ದರು. ತಮ ಪುತ್ರಿಯರಿಗೆ ಅಕ್ರಮವಾಗಿ ಆಯೋಗದಲ್ಲಿ ನೇಮಕಾತಿ ಕಲ್ಪಿಸಲು ಸಹಕರಿಸಿದ ಆರೋಪ ಅವರ ವಿರುದ್ಧ ಕೇಳಿಬಂದಿತ್ತು. ಅಲ್ಲದೆ, ಅವರ ಪುತ್ರಿಯೊಬ್ಬರು ಕುಟುಂಬದ ವಾರ್ಷಿಕ ಆದಾಯ ಕೇವಲ 40 ಸಾವಿರ ರೂಪಾಯಿ ಎಂದು ಆದಾಯ ಮತ್ತು ಜಾತಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿ, ಹಿಂದುಳಿದ ವರ್ಗಗಳ ಮುಂದುವರಿದ ವರ್ಗದ ಮಾನದಂಡದಿಂದ ವಿನಾಯಿತಿ ಪಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

RELATED ARTICLES

Latest News