Wednesday, April 22, 2026
Homeಇದೀಗ ಬಂದ ಸುದ್ದಿಕರ್ನಾಟಕದಲ್ಲಿ ಸಿಎಂ ಕುರ್ಚಿ ಕಿತ್ತಾಟ : ಗೊಂದಲಗಳಿಗೆ ತೆರೆ ಎಳೆಯುವ ಅನಿವಾರ್ಯತೆಯಲ್ಲಿ 'ಕೈ'ಕಮಾಂಡ್‌

ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಿತ್ತಾಟ : ಗೊಂದಲಗಳಿಗೆ ತೆರೆ ಎಳೆಯುವ ಅನಿವಾರ್ಯತೆಯಲ್ಲಿ ‘ಕೈ’ಕಮಾಂಡ್‌

Congress High Command

ಬೆಂಗಳೂರು,ಫೆ.28- ರಾಜಕೀಯ ಬೆಳವಣಿಗೆಗಳಿಂದ ಹೈಕಮಾಂಡ್‌ ಈಗ ಇಕ್ಕಟಿಗೆ ಸಿಕ್ಕಿದ್ದು ಶೀಘ್ರದಲ್ಲೇ ಸ್ಪಷ್ಟನೆ ನೀಡುವ ಅನಿವಾರ್ಯತೆ ಎದುರಾಗಿದೆ. ಮುಂದಿನ ವಾರ ನಡೆಯುವ ಕಾಂಗ್ರೆಸ್‌‍ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ಎಲ್ಲಾ ಗೊಂದಲಗಳಿಗೆ ಹೈಕಮಾಂಡ್‌ ತೆರೆ ಎಳೆಯಲಿದೆ.

ಅಧಿಕಾರ ಹಂಚಿಕೆಯ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಬಣದ ನಡುವೆ ಮುಸುಕಿನ ಗುದ್ದಾಟ ತೀವ್ರಗೊಂಡಿದ್ದು, ಪ್ರತ್ಯೇಕ ಭೋಜನಕೂಟಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿವೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪರವಾಗಿ ಸುಮಾರು 40ಕ್ಕೂ ಹೆಚ್ಚು ಮಂದಿ ಶಾಸಕರು ಶಾಸಕ ಹೆಚ್‌.ಸಿ.ಬಾಲಕೃಷ್ಣ ಅವರ ಹುಟ್ಟು ಹಬ್ಬದ ನೆಪದಲ್ಲಿ ಪ್ರತ್ಯೇಕ ಭೋಜನಕೂಟ ನಡೆಸಿದ್ದಾರೆ. ಆ ಸಭೆಯಲ್ಲಿ ಸಿದ್ದರಾಮಯ್ಯ ಅವರ ಬಣದ ಶಾಸಕರು ಭಾಗವಹಿಸದೇ ಇರುವುದು ಪರಿಸ್ಥಿತಿಯ ವಿಕೋಪವನ್ನು ತೋರಿಸಿದೆ.

ಭೋಜನ ಕೂಟದ ಬಳಿಕ ಮಾತನಾಡಿರುವ ಡಿ.ಕೆ.ಶಿವಕುಮಾರ್‌ ಬಣದ ಶಾಸಕರು, ಹೈಕಮಾಂಡ್‌ ನಾಯಕರು ನಿದ್ದೆ ಮಾಡುತ್ತಿದ್ದಾರೆಯೇ, ಇದೆಲ್ಲಾ ಕಾಣುತ್ತಿಲ್ಲವೇ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದೇ ಪರಿಸ್ಥಿತಿಯಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಿದರೆ ಕಾಂಗ್ರೆಸ್‌‍ ಪಕ್ಷ ಖಂಡಿತ ಸೋಲು ಕಾಣಲಿದೆ ಎಂದಿದ್ದಾರೆ.

ಪಕ್ಷದ ವರ್ಚಸ್ಸು ಹೆಚ್ಚಬೇಕಾದರೆ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂದು ಆಗ್ರಹಿಸಿದ್ದಾರೆ. ಕ್ಷೇತ್ರದಲ್ಲಿ ನಾಯಕತ್ವದ ಗೊಂದಲ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ನಮಗೆ ಮುಜುಗರವಾಗುತ್ತಿದೆ ಎಂದು ಶಾಸಕರು ಹೇಳಿಕೊಂಡಿದ್ದಾರೆ.

ಡಿ.ಕೆ.ಬಣದ ಶಾಸಕರ ಪಟ್ಟಿನಿಂದ ನಾಯಕತ್ವ ಬದಲಾವಣೆಯ ಬೇಡಿಕೆ ತೀವ್ರವಾಗಿದೆ. ಭೋಜನ ಕೂಟಕ್ಕೆ 60ಕ್ಕೂ ಹೆಚ್ಚು ಮಂದಿ ಶಾಸಕರಿಗೆ ಆಹ್ವಾನ ಹೋಗಿತ್ತು. 40 ಮಂದಿ ಭಾಗವಹಿಸಿದ್ದಾರೆ. ಅವರಲ್ಲಿ ಸಚಿವರಾದ ಡಿ ಸುಧಾಕರ್‌, ಮಂಕಾಳ ವೈದ್ಯ, ಶಾಸಕರಾದ ಸಿ.ಪಿ.ಯೋಗೇಶ್ವರ್‌, ಎಚ್‌.ಡಿ.ವೆಂಕಟೇಶ್‌, ಡಾ.ರಂಗನಾಥ್‌, ಆನೇಕಲ್‌ ಶಿವಣ್ಣ, ಕದಲೂರು ಉದಯ್‌, ಗಣಿಗ ರವಿ, ಶಿವಗಂಗಾ ಬಸವರಾಜ್‌, ಶರತ್‌ ಬಚ್ಚೇಗೌಡ, ಹೆಚ್‌.ಸಿ.ಬಾಲಕೃಷ್ಣ, ರಮೇಶ್‌ ಬಂಡಿಸಿದ್ದೇಗೌಡ, ಗಣೇಶ್‌ ಹುಕ್ಕೇರಿ, ಮಥರ್‌ ಗೌಡ, ನಯನಾ ಮೋಟಮ, ಪ್ರಕಾಶ್‌ ಕೋಳಿವಾಡ, ಡಿ.ಜಿ.ಶಾಂತನಗೌಡ ಸೇರಿದಂತೆ 18ಕ್ಕೂ ಹೆಚ್ಚು ಮಂದಿ ನೇರವಾಗಿ ಫೋಟೋಗೆ ಪೋಸು ಕೊಟ್ಟಿದ್ದಾರೆ. ಮುಂದಿನ ಸಭೆಯಲ್ಲಿ 80ಕ್ಕೂ ಹೆಚ್ಚಿ ಶಾಸಕರನ್ನು ಸೇರಿಸುವ ಚರ್ಚೆಗಳಾಗಿವೆ.
ಈ ಮೂಲಕ ಬಲಾಬಲ ಕ್ರೋಡೀಕರಣಕ್ಕೆ ಮಾಸ್ಟರ್‌ ಪ್ಲಾನ್‌ ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಹೈಕಮಾಂಡ್‌ ಮುಜುಗರಕ್ಕೆ ಒಳಗಾಗಿದ್ದಾರೆ. ಶೀಘ್ರವೇ ನಾಯಕತ್ವದ ಗೊಂದಲವನ್ನು ಬಗೆಹರಿಸುವ ಅನಿವಾರ್ಯತೆ ಇದೆ.

ಈ ನಿಟ್ಟಿನಲ್ಲಿ ದೆಹಲಿಗೆ ತೆರಳಿ, ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಆಗ್ರಹಿಸುವ ನಿರ್ಧಾರವನ್ನು ಭೋಜನಕೂಟದ ಸಭೆಯಲ್ಲಿ ನಿರ್ಧರಿಸಲಾಗಿದೆ. ಮತ್ತೊಂದು ಸುತ್ತಿನ ಸಭೆ ದೆಹಲಿಯಲ್ಲಿ ನಡೆದರೂ ಅಚ್ಚರಿ ಪಡಬೇಕಿಲ್ಲ ಎಂದು ಮೂಲಗಳು ತಿಳಿಸಿವೆ.

ಸಂಪುಟದಲ್ಲಿರುವ ಕೆಲ ಸಚಿವರು, ಶಾಸಕರಿಗೆ ಸ್ಪಂದಿಸುತ್ತಿಲ್ಲ, ಅಂತಹವರನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಡ ಹೇರಲು ನಿರ್ಣಯಿಸಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮ ಪರವಾಗಿ ಯಾರೂ ದೆಹಲಿಗೆ ಹೋಗುವುದು, ಹೈಕಮಾಂಡ್‌ ನಾಯಕರ ಮುಂದೆ ಮಾತನಾಡುವುದು ಬೇಕಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅದರ ಜೊತೆಯಲ್ಲೇ ಸಿದ್ದರಾಮಯ್ಯ ಬಣದ ಶಾಸಕರ ವಿದೇಶ ಪ್ರವಾಸವನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ. ಈ ಮೂಲಕ ತಮ ಬೆಂಬಲಿಗರಿಗೆ ಡಿ.ಕೆ. ಪರೋಕ್ಷ ಸಂದೇಶ ರವಾನಿಸಿದ್ದಾರೆ. ಬಜೆಟ್‌ ಅಧಿವೇಶನದೊಳಗೆ , ಮತ್ತು ಬಳಿಕ ಕಾಂಗ್ರೆಸ್‌‍ ಶಾಸಕರ ಎರಡನೇ ಸುತ್ತಿನ ದೆಹಲಿಯಾತ್ರೆ ಖಚಿತವಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಸಚಿವರು ಮತ್ತು ಶಾಸಕರು ಮತ್ತೆ ಭೋಜನ ಕೂಟ ನಡೆಸಿ ಪ್ರತಿತಂತ್ರ ರೂಪಿಸಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಬಣ ರಾಜಕೀಯದಲ್ಲಿ ಭಿನ್ನಮತೀಯ ಚಟುವಟಿಕೆಗಳು ತೀವ್ರಗೊಳ್ಳುತ್ತಿರುವುದರಿಂದ ಹೈಕಮಾಂಡ್‌ ಸ್ಪಷ್ಟ ನಿರ್ಧಾರ ಪ್ರಕಟಿಸಲೇಬೇಕಾಗಿದೆ. ಇನ್ನೂ ತಡ ಮಾಡಿದರೆ ಅದು ಬೇರೆ ರೀತಿಯ ಪರಿಣಾಮಗಳನ್ನು ಉಂಟುಮಾಡುವ ಆತಂಕ ಇದೆ.

ಹೀಗಾಗಿ ಬಜೆಟ್‌ ಅಧಿವೇಶನದ ಸಂದರ್ಭಕ್ಕಾಗಿ ನಡೆಯುವ ಕಾಂಗ್ರೆಸ್‌‍ ಶಾಸಕಾಂಗ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸಿಂಗ್‌ ಸುರ್ಜೇವಾಲ ಅಥವಾ ಕೆ.ಸಿ.ವೇಣುಗೋಪಾಲ್‌ ಭಾಗವಹಿಸಲಿದ್ದಾರೆ. ನಾಯಕತ್ವ ಗೊಂದಲದ ಬಗ್ಗೆ ಸ್ಪಷ್ಟ ವಿಚಾರ ತಿಳಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

RELATED ARTICLES

Latest News