Wednesday, April 22, 2026
Homeರಾಜ್ಯರಾಜ್ಯದಲ್ಲಿ ಮತ್ತೆ ಬ್ಯಾಲೆಟ್‌ ಪೇಪರ್‌ ಬದಲು ಇವಿಎಂ..? :

ರಾಜ್ಯದಲ್ಲಿ ಮತ್ತೆ ಬ್ಯಾಲೆಟ್‌ ಪೇಪರ್‌ ಬದಲು ಇವಿಎಂ..? :

EVMs instead of ballot papers again in the state..? :

ಬೆಂಗಳೂರು,ಫೆ.28- ಜಾರ್ಖಂಡ್‌ನಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಕರ್ನಾಟಕದಲ್ಲೂ ಬ್ಯಾಲೆಟ್‌ ಬದಲಿಗೆ ಪುನಃ ಇವಿಎಂ ಬರಲಿದೆಯೇ ಎಂಬ ಲೆಕ್ಕಾಚಾರ ಶುರುವಾಗಿದೆ.

ಏಕೆಂದರೆ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಕಾಂಗ್ರೆಸ್‌‍ ಮುಂಬರುವ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್‌ ಪೇಪರ್‌ ಮೂಲಕ ಮತದಾನಕ್ಕೆ ಅವಕಾಶ ನೀಡಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಿತ್ತು.

ಗಮನಿಸಬೇಕಾದ ಅಂಶವೆಂದರೆ ಜಾರ್ಖಂಡ್‌ನಲ್ಲಿ ಅಧಿಕಾರದಲ್ಲಿರುವ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್‌ ಪೇಪರ್‌ ಪರಿಚಯಿಸಿತು.

ಇದೀಗ ಪ್ರಕಟಗೊಂಡಿರುವ ಫಲಿತಾಂಶದ ಪ್ರಕಾರ ಆಡಳಿತಾರೂಢ ಇಂಡಿಯಾ ಮೈತ್ರಿಕೂಟವನ್ನು ಹಿಂದಿಕ್ಕಿ ಜಾರ್ಖಂಡ್‌ನ ಅನೇಕ ಮಹಾನಗರ ಮತ್ತು ನಗರಪಾಲಿಕೆ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಿದೆ.

ಯಾವ ಇವಿಎಂನ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ ಬ್ಯಾಲೆಟ್‌ ಪೇಪರ್‌ನಲ್ಲಿ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಇಲ್ಲಿಯೂ ಕೂಡ ಇಂಡಿಯಾ ಮೈತ್ರಿಕೂಟಕ್ಕೆ ಹಿನ್ನಡೆಯಾಗಿರುವುದರಿಂದ ಮತ್ತೆ ಇವಿಎಂ ಬಳಕೆಯ ಬಗ್ಗೆ ಇದ್ದ ಸಂಶಯ ನಿವಾರಣೆಯಾದಂತಾಗಿದೆ.

ಏಪ್ರಿಲ್‌ ಹಾಗೂ ಮೇ ತಿಂಗಳ ಮಧ್ಯ ಭಾಗದಲ್ಲಿ ನಡೆಸಲು ಉದ್ದೇಶಿಸಿರುವ ಜಿಬಿಎ ಮಹಾನಗರ ಪಾಲಿಕೆ, ನಗರಸಭೆ, ಜಿಲ್ಲಾ ಪಂಚಾಯತ್‌, ಪುರಸಭೆ, ಪಟ್ಟಣ ಪಂಚಾಯ್ತಿ, ಗ್ರಾಮಪಂಚಾಯ್ತಿ, ಎಂಪಿಎಂಸಿ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್‌ ಪೇಪರ್‌ ಬಳಸಬೇಕೆಂಬ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ.

ಹೀಗಾಗಿಯೇ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌(ತಿದ್ದುಪಡಿ) ವಿಧೇಯಕ 2025ಕ್ಕೆ ತಿದ್ದುಪಡಿ ಮಾಡಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್‌ನಲ್ಲಿ ಚುನಾವಣೆ ನಡೆಸಲು ಆಯೋಗಕ್ಕೂ ಸೂಚನೆ ನೀಡಲಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗವೇ ನಡೆಸುವುದರಿಂದ ಇದರಲ್ಲಿ ಭಾರತೀಯ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಲು ಅವಕಾಶವಿಲ್ಲ. ರಾಜ್ಯ ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಅದರ ನಿರ್ಧಾರವೇ ಅಂತಿಮ. ಈಗಾಗಲೇ ಇವಿಎಂ ಬದಲಿಗೆ ಬ್ಯಾಲೆಟ್‌ನಲ್ಲಿ ಚುನಾವಣೆ ನಡೆಸಲು ಆಯೋಗವು ಸಕಲ ಸಿದ್ದತೆಯನ್ನು ಕೈಗೊಂಡಿದೆ.

ಜಾರ್ಖಂಡ್‌ನಲ್ಲಿ ಬ್ಯಾಲೆಟ್‌ನಲ್ಲೂ ಅಲ್ಲಿನ ಸರ್ಕಾರಕ್ಕೆ ಹಿನ್ನಡೆಯಾಗಿರುವ ಕಾರಣ ಮತದಾರರಿಗೆ ಎದುರಾಗಿದ್ದ ಸಂಶಯ ನಿವಾರಣೆಯಾಗಿದೆ. ಹಾಗಾದರೆ ರಾಜ್ಯದಲ್ಲೂ ಇವಿಎಂ ಜಾರಿಗೆ ಬರಲಿದೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

RELATED ARTICLES

Latest News