ಬೆಂಗಳೂರು,ಫೆ.28- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷಿ ಯೋಜನೆಯ 26ನೇ ಕಂತಿನ ತಲಾ 2000 ಹಣ ಫಲಾನುಭವಿಗಳ ಖಾತೆಗೆ ಯಶಸ್ವಿಯಾಗಿ ಜಮೆಯಾಗಿದ್ದು, ಈವರೆಗೆ ಪ್ರತಿ ಮನೆಯ ಯಜಮಾನಿಗೆ ಒಟ್ಟು 52,000 ರೂ. ಪಾವತಿಯಾದಂತಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯ ಸರ್ಕಾರವು ತನ್ನ ಐದೂ ಗ್ಯಾರಂಟಿ ಯೋಜನೆಗಳ ಮೂಲಕ ಬರೋಬ್ಬರಿ 1 ಲಕ್ಷದ 20 ಸಾವಿರದ 433 ಕೋಟಿ ರೂ.ಗೂ ಅಧಿಕ ಹಣವನ್ನು ನೇರವಾಗಿ ಮತ್ತು ಪಾರದರ್ಶಕವಾಗಿ ಜನರ ಖಾತೆಗೆ ವರ್ಗಾಯಿಸುವ ಮೂಲಕ ನುಡಿದಂತೆ ನಡೆದಿದೆ ಎಂದರು.
ಗೃಹಲಕ್ಷಿ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 1,24,10,629 ಮಹಿಳೆಯರು ನೋಂದಣಿಯಾಗಿದ್ದಾರೆ. ಈ ಯೋಜನೆಗಾಗಿ ಸರ್ಕಾರವು ಇದುವರೆಗೆ ಒಟ್ಟು 62,345.34 ಕೋಟಿ ರೂ. ವೆಚ್ಚ ಮಾಡಿದೆ. 26 ಕಂತುಗಳ ಹಣ ಯಶಸ್ವಿಯಾಗಿ ಪಾವತಿಯಾಗಿದ್ದು, 27ನೇ ಕಂತಿನ ಅನುದಾನವನ್ನು ಸಹ ಈಗಾಗಲೇ ಖಜಾನೆಯಿಂದ ಬಿಡುಗಡೆಗೊಳಿಸಲಾಗಿದೆ.
ಶೀಘ್ರದಲ್ಲೇ 31 ಜಿಲ್ಲೆಗಳ ಫಲಾನುಭವಿಗಳಿಗೆ ಇದು ತಲುಪಲಿದೆ ಎಂದು ಅವರು ವಿವರಿಸಿದ್ದಾರೆ.
ಗೃಹಲಕ್ಷಿ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ.ಗಳಂತೆ ಒಬ್ಬ ಮಹಿಳೆ ಗೆ ಒಟ್ಟು 52 ಸಾವಿರ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತಲುಪಿಸಿದೆ. ಗೃಹಲಕ್ಷಿ ಯೋಜನೆ ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದೆ.
ಗ್ಯಾರಂಟಿ ಯೋಜನೆಗಳು ಕೇವಲ ಹಣದ ಸಹಾಯವಲ್ಲ, ಗೌರವದ ಭರವಸೆ. ಪಕ್ಷಬೇಧವಿಲ್ಲದೆ ಎಲ್ಲರಿಗೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗೃಹಜ್ಯೋತಿ ಯೋಜನೆಯಡಿ ರಾಜ್ಯದ 1,65,65,000 ಮನೆಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದ್ದು, ಈವರೆಗೆ ಒಟ್ಟು 22,839 ಕೋಟಿ ವೆಚ್ಚವಾಗಿದೆ, ಶಕ್ತಿ ಯೋಜನೆಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದ್ದು, ಈವರೆಗೆ 679.20 ಕೋಟಿ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತ ಅಕ್ಕಿ/ಹಣ ವಿತರಿಸುವ ಈ ಯೋಜನೆಗೆ ಒಟ್ಟು 16,000 ಕೋಟಿ ವ್ಯಯಿಸಲಾಗಿದೆ. ಯುವನಿಧಿ ಯೋಜನೆಯಡಿ 3,08,267 ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ಆರ್ಥಿಕ ನೆರವು ನೀಡಲಾಗುತ್ತಿದ್ದು, ಇದುವರೆಗೆ ಒಟ್ಟು 915 ಕೋಟಿ ಹಣವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
