ಟೆಹ್ರಾನ್(ಇರಾನ್),ಫೆ.28- ನಿರೀಕ್ಷೆಯಂತೆಯೇ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ಮುಂಜಾನೆ ಭೀಕರ ಜಂಟಿ ವೈಮಾನಿಕ ದಾಳಿ ನಡೆಸಿದ್ದು, ಹಲವು ಕಡೆ ಸರಣಿ ಸ್ಫೋಟಗಳು ಸಂಭವಿಸಿ ಇಡೀ ನಗರವೇ ಕಂಪಿಸಿದೆ.
ಇರಾನ್‌ನಲ್ಲಿ ಸುಮಾರು 30 ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದು, ಇದರಲ್ಲಿ ರಕ್ಷಣಾ ಸಚಿವಾಲಯ, ಗುಪ್ತಚರ ಕೇಂದ್ರ ಕಚೇರಿ, ಸುಪ್ರೀಂ ನಾಯಕ ಅಲಿ ಖಮೇನಿ ಅವರ ಕಚೇರಿ, ಇರಾನ್‌ನ ಪರಮಾಣು ಶಕ್ತಿ ಪಾರ್ಚಿನ್ ಮಿಲಿಟರಿ ಸೇರಿವೆ ಎಂದು ಹೇಳಲಾಗುತ್ತಿದೆ.
ಅಮೆರಿಕಾ-ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್‌ನ ಹಲವು ನಗರಗಳನ್ನು ಗುರಿಯಾಗಿಟ್ಟುಕೊಂಡು ಕ್ಷಿಪಣಿ ದಾಳಿ ನಡೆಸಿದೆ.
ಇರಾನ್ ಸುದ್ದಿ ಸಂಸ್ಥೆ ಫಾರ್ಸ್ ಪ್ರಕಾರ, ಟೆಹ್ರಾನ್‌ನ ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಜುಮ್ಹುರಿ ಪ್ರದೇಶದಲ್ಲಿ ಹಲವಾರು ಕ್ಷಿಪಣಿಗಳು ಬಿದ್ದಿವೆ. ನಗರದ ವಿವಿಧ ಭಾಗಗಳಲ್ಲಿ ಹೊಗೆಯ ದಟ್ಟಣೆ ಕಂಡುಬದಿದೆ.
ದಾಳಿಯು ರಾಜಧಾನಿಯ ಜನನಿಬಿಡ ಪ್ರದೇಶಗಳನ್ನು ತಲುಪಿದೆ ಅಷ್ಟೇ ಅಲ್ಲದೆ, ನಗರದ ಹೃದಯಭಾಗದಲ್ಲಿರುವ ಪಾಸ್ಟರ್ ಸ್ಟ್ರೀಟ್ ಪರಿಸರದಲ್ಲಿ ಸ್ಫೋಟದ ನಂತರ ದಟ್ಟವಾದ ಹೊಗೆ ಆಕಾಶಕ್ಕೆ ಚಿಮುತ್ತಿರುವುದು ಗೋಚರಿಸುತ್ತಿದೆ.
ಇರಾನ್‌ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳು ತಮಗೆ ದೊಡ್ಡ ಅಪಾಯ ಎಂದು ಇಸ್ರೇಲ್ ಮತ್ತು ಅಮೆರಿಕ ಪದೇ ಪದೇ ಎಚ್ಚರಿಸುತ್ತಲೇ ಬಂದಿದ್ದವು. ಇರಾನ್ ತನ್ನ ಪರಮಾಣು ಮೂಲಸೌಕರ್ಯವನ್ನು ಕಿತ್ತುಹಾಕದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿತ್ತು. ದಾಳಿ ಪ್ರಾರಂಭವಾಗುತ್ತಿದ್ದಂತೆ ಇತ್ತ ಇಸ್ರೇಲ್‌ನ ಟೆಲ್ ಅವೀವ್ ನಗರದಲ್ಲಿ ಸೈರನ್‌ಗಳು ಮೊಳಗಲಾರಂಭಿಸಿವೆ.
ಸದ್ಯದ ವರದಿಗಳ ಪ್ರಕಾರ, ಇರಾನ್‌ನಿಂದ ಇಸ್ರೇಲ್ ಮೇಲೆ ಯಾವುದೇ ಕ್ಷಿಪಣಿ ದಾಳಿ ನಡೆದಿಲ್ಲ. ಟೆಹ್ರಾನ್ ನಗರದ ವಿವಿಧ ಭಾಗಗಳಲ್ಲಿ ಭೀಕರ ಸ್ಫೋಟದ ಶಬ್ದಗಳು ಕೇಳಿಬಂದಿವೆ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಸಮೀಪದಲ್ಲೇ ಈ ದಾಳಿಗಳು ನಡೆದಿವೆ.ನಗರದಲ್ಲಿ ಕನಿಷ್ಠ ನಾಲ್ಕರಿಂದ ಐದು ಪ್ರಮುಖ ನೆಲೆಗಳ ಮೇಲೆ ಕ್ಷಿಪಣಿ ದಾಳಿಗಳು ನಡೆದಿದ್ದು, ಸಾವುನೋವುಗಳ ಬಗ್ಗೆ ಇನ್ನು ನಿಖರ ಮಾಹಿತಿ ಲಭ್ಯವಾಗಿಲ್ಲ.
ಇರಾನ್ ತನ್ನ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂಬ ಗುಪ್ತಚರ ಮಾಹಿತಿ ಆಧರಿಸಿ, ಇಸ್ರೇಲ್ ಈ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.
ದಾಳಿಯ ಬೆನ್ನಲ್ಲೇ ಇಸ್ರೇಲ್ ತನ್ನ ದೇಶದ ಎಲ್ಲಾ ನಾಗರಿಕರಿಗೆ ಸುರಕ್ಷಿತ ಸ್ಥಳಗಳ ಸಮೀಪವೇ ಇರುವಂತೆ ರಾಷ್ಟ್ರೀಯ ಎಚ್ಚರಿಕೆಯನ್ನು ರವಾನಿಸಿದೆ. ಇರಾನ್‌ನಿಂದ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆಯನ್ನು ಮನಗಂಡು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರನ್ನು ಸನ್ನದ್ಧಗೊಳಿಸಲು ಈ ಪೋರಆಕ್ಟಿವ್ ಅಲರ್ಟ್ ನೀಡಲಾಗಿದೆ ಎಂದು ಐಡಿಎಫ್ ತಿಳಿಸಿದೆ.
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್‌್ಜ ಅವರು ಈ ಕಾರ್ಯಾಚರಣೆಯನ್ನು ಬೆದರಿಕೆಗಳನ್ನು ಬುಡ ಸಮೇತ ಕಿತ್ತೊಗೆಯಲು ನಡೆಸಿದ ದಾಳಿ ಎಂದು ಹೇಳಿದ್ದಾರೆ. ಈ ದಾಳಿಗೆ ಇರಾನ್ ಪ್ರತಿಕ್ರಿಯಿಸಿದರೆ, ಅದರ ಪರಿಣಾಮವು ಕೇವಲ ಎರಡು ದೇಶಗಳಿಗೆ ಸೀಮಿತವಾಗಿರುವುದಿಲ್ಲ, ಆದರೆ ಇಡೀ ಮಧ್ಯಪ್ರಾಚ್ಯವು ದೊಡ್ಡ ಸಂಘರ್ಷದಲ್ಲಿ ಮುಳುಗಬಹುದು ಎಂದು ತಜ್ಞರು ಹೇಳಿದ್ದಾರೆ.
ಸುರಕ್ಷಿತ ಸ್ಥಳಕ್ಕೆ ರವಾನೆ
ಇನ್ನು ಇಸ್ರೇಲ್ ನಡೆಸಿದ ದಾಳಿ ವೇಳೆ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ತೇಹ್ರಾನ್‌ನಲ್ಲಿ ಇಲ್ಲ ಎಂದು ವರದಿಯಾಗಿದೆ. ಇಸ್ರೇಲ್ ತನ್ನ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮನೆಯನ್ನು ನಾಶಪಡಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಆದಾಗ್ಯೂ, ಖಮೇನಿ ಪ್ರಸ್ತುತ ಟೆಹ್ರಾನ್‌ನಲ್ಲಿಲ್ಲ, ಅಲ್ಲದೇ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.ಇದೇ ವೇಳೆ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಗುರಿಯಾಗಿಸಲು ಪ್ರಯತ್ನ ನಡೆಸಲಾಗಿದೆ ಎಂದು ಇಸ್ರೇಲಿ ಮೂಲಗಳು ಹೇಳಿಕೊಂಡಿವೆ, ಆದರೂ ಈ ಪ್ರಯತ್ನ ಯಶಸ್ವಿಯಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇರಾನ್ ಸರ್ಕಾರ ಅಥವಾ ಅಧ್ಯಕ್ಷರ ಕಚೇರಿಯಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಲಾಗಿಲ್ಲ.
ದೇಶದಲ್ಲಿ ಹೈ ಅಲರ್ಟ್
ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಬೆನ್ನಲ್ಲೇ, ಇಡೀ ಇಸ್ರೇಲ್ ದೇಶಾದ್ಯಂತ ಹೈ-ಅಲರ್ಟ್ ಘೋಷಿಸಲಾಗಿದೆ. ಇರಾನ್ ರಾಜಧಾನಿ ಟೆಹ್ರಾನ್‌ನ ಪಶ್ಚಿಮ ಭಾಗದಲ್ಲಿ ಭೀಕರ ಬಾಂಬ್ ಸ್ಫೋಟದ ಸದ್ದುಗಳು ಕೇಳಿಬಂದಿವೆ. ಇಸ್ರೇಲ್ ಮಿಲಿಟರಿ ತನ್ನ ಟೆಲಿಗ್ರಾಂ ಸಂದೇಶದಲ್ಲಿ ದೇಶಾದ್ಯಂತ ಸೈರನ್‌ಗಳನ್ನು ಮೊಳಗಿಸಿದೆ. ಇರಾನ್‌ನಿಂದ ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ಧರಾಗಿರಬೇಕು ಎಂದು ಎಚ್ಚರಿಸಿದೆ.
ಇಡೀ ದೇಶವನ್ನು ಪೂರ್ಣ ಚಟುವಟಿಕೆಯಿಂದ ೞಅಗತ್ಯ ಚಟುವಟಿಕೆ ಹಂತಕ್ಕೆ ಬದಲಾಯಿಸಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ಸಾರ್ವಜನಿಕ ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕೆಲಸದ ಸ್ಥಳಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ತನ್ನ ವಾಯುಪ್ರದೇಶದಲ್ಲಿ ವಿಮಾನ ಹಾರಾಟವನ್ನೂ ಇಸ್ರೇಲ್ ನಿರ್ಬಂಧಿಸಿದೆ. ಇರಾನ್ ಯಾವುದೇ ಕ್ಷಣದಲ್ಲಿ ಇಸ್ರೇಲ್ ಮೇಲೆ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ತಿರುಗೇಟು ನೀಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿವೆ. ಸೆಲ್ಯುಲಾರ್ ಸಾಧನಗಳ ಮೂಲಕ ನೇರವಾಗಿ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಗುತ್ತಿದ್ದು, ಇಸ್ರೇಲ್‌ನಾದ್ಯಂತ ನಾಗರಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
