ಬೆಂಗಳೂರು, ಮಾ.1-ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷದ ಸಂದರ್ಭದಲ್ಲಿ ಮೃತ ವ್ಯಕ್ತಿ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತವನ್ನು 30,00,000 ರೂ.ಗೆ ಹೆಚ್ಚಿಸುವುದು ಸೇರಿದಂತೆ 20 ವಿವಿಧ ಹಕ್ಕೊತ್ತಾಯಗಳನ್ನು ಮಲೆನಾಡು ಕರಾವಳಿ ಜನಪರ ಒಕ್ಕೂಟ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಸಲ್ಲಿಸಿದೆ.
ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ನಡೆದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಅರಣ್ಯ ಸಚಿವರಿಗೆ ನೆಲವಾಸಿಗಳ ಪರವಾಗಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸರ್ವಪದಾಧಿಕಾರಿಗಳು ಹಕ್ಕೊತ್ತಾಯಗಳನ್ನು ಸಲ್ಲಿಸಿದ್ದಾರೆ. ಜನರ ಸಮಸ್ಯೆಗಳನ್ನು ಅರಿಯಲು ಹಾಗೂ ಪರಿಹರಿಸಲು ತುರ್ತು ಈ ಸಭೆಯನ್ನು ಆಯೋಜಿಸಿದ ಶಾಸಕರಾದ ಟಿ.ಡಿ.ರಾಜೇಗೌಡರಿಗೆ ಹಾಗೂ ಇದಕ್ಕೆ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಅಭಿನಂದಿಸಿದ್ದಾರೆ.
ಮಾನವ ಮತ್ತು ಕಾಡುಪ್ರಾಣಿಗಳ ಸಂಘ಼ರ್ಷದಲ್ಲಿ ಸಾವಿಗೀಡಾದಾಗ ಕೊಡುತ್ತಿದ್ದ ಪರಿಹಾರದ ಮೊತ್ತವನ್ನು 20,00,000 ರೂ.ಗೆ ಸರ್ಕಾರ ಹೆಚ್ಚಿಸಿರುವುದನ್ನು ಅಭಿನಂದಿಸಿದ್ದಾರೆ. ಮೃತ ವ್ಯಕ್ತಿಗಳ ಒಟ್ಟು ಕುಟುಂಬದ ಕಲ್ಯಾಣದ ದೃಷ್ಠಿಯಿಂದ ಕನಿಷ್ಠ 30,00,000ರೂ.ಗೆ ಹೆಚ್ಚಿಸಬೇಕು ಮತ್ತು ಗರಿಷ್ಠ ಮೊತ್ತವನ್ನು ಸಂದರ್ಭಾನುಸಾರ 50,00,000 ರೂ.ವರೆಗೆ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮೃತ ವ್ಯಕ್ತಿಯ ಸಂಬಂಧಿಕರಿಗೆ ಕೊಡುವ ಮಾಸಿಕ ಪಿಂಚಣಿಯನ್ನು 20,000 ರೂ.ಗೆ ಹೆಚ್ಚಿಸುವುದು. ಎಲ್ಲಾ ರೀತಿಯ ಕಾಡುಪ್ರಾಣಿಗಳ ಜೊತೆಗೆ ಹಾವು ಕಡಿತವನ್ನು ಸೇರಿಸಬೇಕು. ಕಾಡು ಪ್ರಾಣಿಗಳಿಂದ ಗಾಯಗೊಂಡವರ ಚಿಕಿತ್ಸೆಗೆ ಆಯ್ದ ಆಸ್ಪತ್ರೆಗಳಲ್ಲಿ ಅರಣ್ಯ ಇಲಾಖೆ/ವನ್ಯಜೀವಿ ಇಲಾಖೆಯಿಂದ ಶಾಶ್ವತ ನಿಧಿಯನ್ನು ಸ್ಥಾಪಿಸಬೇಕು ಎಂದು ಕೋರಿದ್ದಾರೆ.
ಕಾಡು ಪ್ರಾಣಿಯ ದಾಳಿಯಿಂದ ವ್ಯಕ್ತಿಯೊಬ್ಬ ಅಂಗವೈಕಲ್ಯಕ್ಕೆ ಒಳಗಾದಲ್ಲಿ ವೈಕಲ್ಯದ ಪ್ರಮಾಣದ ಆಧಾರದಲ್ಲಿ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಮತ್ತು ಆತನ ಜೀವನ ಪರ್ಯಂತ ವೈಕಲ್ಯ ಇದ್ದಲ್ಲಿ ಮಾಸಿಕ ಪಿಂಚಣಿಯನ್ನು ನೀಡಬೇಕು.
ಬಂದೂಕು ಪರವಾನಗಿಯನ್ನು ನೀಡುವ ಸಂದರ್ಭದಲ್ಲಿ ಶೂನ್ಯ ಪರಿಮಿತಿಯನ್ನು ಪರಿಗಣಿಸಿ ಅಭಿಪ್ರಾಯ ನೀಡಬೇಕು. ಜಂಟಿ ಸರ್ವೆಯ ಸಂದರ್ಭದಲ್ಲಿ ಸ್ಥಳಿಯರಿಗೆ ಹಾಗೂ ಗ್ರಾಮ ಪಂಚಾಯ್ತಿಯ ಗಮನಕ್ಕೆ ತಂದು, ವಿಶೇಷ ಗ್ರಾಮ ಸಭೆಯನ್ನು ಕರೆದು ಆ ಮುಖೇನ ಸರ್ವೆಯನ್ನು ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ತ್ವರಿತಗತಿಯ ಪರಿಹಾರ ವಿಲೇವಾರಿ ಮತ್ತು ಭೂ ಮೌಲ್ಯಮಾಪನ ಮಾರ್ಗಸೂಚಿ ಬೆಲೆಯನ್ನು 4 ಪಟ್ಟು ಹೆಚ್ಚಿಸಬೇಕು. ಮೌಲ್ಯಮಾಪನ ಮಾಡಿದ 1 ವರ್ಷದ ಒಳಗೆ ಪರಿಹಾರ ಮೊತ್ತ ನೀಡಬೇಕು. ಘೋಷಿತ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗೆ ವಾಸದ ಮನೆಯಿದ್ದರೆ ಪರಿಹಾರ ಕೊಡಬೇಕು ಎಂದು ಕೋರಿದ್ದಾರೆ.
ಮಲೆನಾಡನ್ನು ಪರಿಸರ ಸೂಕ್ಷ್ಮವಲಯವಾಗಿ ಘೋಷಿಸುವುದಾಗಾಲೀ, ಇದಕ್ಕೆ ಪೂರಕವಾಗಿ ಕಸ್ತೂರಿ ರಂಗನ್ ವರದಿ ಯಥಾವತ್ತಾಗಿ ಒಪ್ಪಿಕೊಳ್ಳುವುದಾಗಲೀ ಹಾಗೂ ಹುಲಿ ಯೋಜನೆಯ ವಿಸ್ತರಣೆಯ ಕಾರಣದಿಂದ ಜನರ ಎತ್ತಂಗಡಿಯ ಉದ್ದೇಶವನ್ನಾಗಲೀ ಅಥವಾ ಇಲ್ಲಿಯ ನೆಲವಾಸಿಗಳಿಗೆ ತೊಂದರೆಯಾಗುವ ಎಲ್ಲಾ ಪ್ರಸ್ತಾವನೆಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಕೈಬಿಡಲು ಸರ್ಕಾರಗಳು ಮುಂದಾಗಬೇಕು. ಈಗಾಗಲೇ ಕರ್ನಾಟಕ ಸರ್ಕಾರವೂ ಇಂತಹ ವರದಿಗಳನ್ನು ದಿಕ್ಕರಿಸುವ ನಿರ್ಣಯ ಕೈಗೊಂಡಿರುವುದಕ್ಕೆ ಅಭಿನಂದಿಸುತ್ತೇವೆ.

ರೈತರು, ನೆಲವಾಸಿಗಳು ಸರ್ಕಾರಿ ಭೂಮಿಯಲ್ಲಿ ಮಾಡಿಕೊಂಡಿರುವ ಸಾಗುವಳಿ ಪ್ರದೇಶವನ್ನು ಕಾನೂನಿನ ನಿರ್ಬಂಧಗಳನ್ನು ಸಡಿಲೀಕರಿಸಿ ಭೂ ಮಂಜೂರಾತಿಗೆ ಅವಕಾಶ ಮಾಡಿಕೊಡಬೇಕು. ಹಾಗೆಯೇ ವಿವಿಧ ನಮೂನೆಗಳಲ್ಲಿ ಅಂದರೆ 50, 53, 57 ಹಾಗೂ 94ಸಿ, 94 ಸಿಸಿ ಹಾಗೂ ದರಖಾಸ್ತು ಮಂಜೂರಾತಿಗೆ ಒಪ್ಪಿಗೆಯನ್ನು ಸುಲಭ ಶೀಘ್ರವಾಗಿ ಮಂಜೂರು ಮಾಡಲು ನಿರ್ದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಯಾವುದೇ ಸಂದರ್ಭ ಹಾಗೂ ಕಾರಣದಿಂದ ಪ್ರಸ್ತುತ ಇರುವ ಹುಲಿ ಅರಣ್ಯ ಯೋಜನೆ, ರಾಷ್ಟ್ರೀಯ ಉದ್ಯಾನ ಯೋಜನೆ ಅಥವಾ ಇನ್ನಾವುದೇ ಮೀಸಲು ಅರಣ್ಯವನ್ನು ವಿಸ್ತರಿಸಕೂಡದು.
ಮಾನವ ಪ್ರಾಣಿಗಳ ಸಂಘರ್ಷದ ಈ ಸಂದರ್ಭದಲ್ಲಿ ಅಭಯಾರಣ್ಯ ಯೋಜನೆಗಳು ವಿಫಲಗೊಂಡಿದೆ ಎಂಬುದನ್ನು ಒಪ್ಪಲೇಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.ಶೃಂಗೇರಿ ಶಾಸಕ ಜಿ.ಟಿ.ರಾಜೇಗೌಡ, ಮಲೆನಾಡು ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್‌ಕುಮಾರ್ ಮುರೊಳ್ಳಿ ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
