Monday, April 20, 2026
Homeರಾಜ್ಯಜಿಬಿಎ ಚುನಾವಣಾ ಮೀಸಲಾತಿ ಪಟ್ಟಿ ಪ್ರಕಟಕ್ಕೆ ಸಿದ್ಧತೆ

ಜಿಬಿಎ ಚುನಾವಣಾ ಮೀಸಲಾತಿ ಪಟ್ಟಿ ಪ್ರಕಟಕ್ಕೆ ಸಿದ್ಧತೆ

GBA Election Reservation List Ready to be Published

ಬೆಂಗಳೂರು, ಮಾ.3- ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣಾ ಮೀಸಲಾತಿ ಪಟ್ಟಿ ಸಿದ್ದಗೊಂಡಿದ್ದು, ಇಂದು ಸಂಜೆ ಇಲ್ಲವೇ ನಾಳೆ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ.5 ನಗರ ಪಾಲಿಕೆಗಳ 369 ವಾರ್ಡ್‌ಗಳ ಮೀಸಲಾತಿ ಪಟ್ಟಿ ಯನ್ನು ಸಿದ್ಧಪಡಿಸಲಾಗಿದ್ದು ಮಾ.5ರೊಳಗೆ ಬಿಡುಗಡೆ ಮಾಡಿ ನಂತರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ಖಚಿತಪಡಿಸಿವೆ.

ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ಕರಡು ಮೀಸಲಾತಿ ಪಟ್ಟಿಗೆ ನೂರಾರು ಆಕ್ಷೇಪಣೆಗಳು ಬಂದಿದ್ದವು. ಹೀಗಾಗಿ ಕೆಲವು ಲೋಪ ದೋಷಗಳನ್ನು ಸರಿಪಡಿಸಿ ಅಂತಿಮ ಪಟ್ಟಿ ಸಿದ್ದಪಡಿಸಲಾಗಿದೆ.

ಕರಡು ಪಟ್ಟಿಯಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತಂತೆ ಬಂದಿದ್ದ ಆಕ್ಷೇಪಣೆಗಳನ್ನು ನಿವಾರಣೆ ಮಾಡಿ ಅಂತಿಮ ಪಟ್ಟಿಯಲ್ಲಿ ಮಹಿಳೆಯರಿಗೆ ಆಗಿದ್ದ ಅನ್ಯಾಯವನ್ನು ಸರಿಪಡಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.
ಐದು ನಗರ ಪಾಲಿಕೆಗಳ 369 ವಾರ್ಡ್‌ಗಳ ಪೈಕಿ ಮಹಿಳೆಯರಿಗೆ 185 ಸ್ಥಾನಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಉಳಿದಂತೆ ಕೆಲವು ಪ್ರದೇಶಗಳಿಗೆ ಈ ಹಿಂದೆ ನಿಗದಿಪಡಿಸಿದ್ದ ಮೀಸಲಾತಿಯನ್ನು ಬದಲು ಮಾಡಲಾಗಿದೆ ಎಂದು ವರದಿಯಾಗಿದೆ.

ಕೆಲವು ವಾರ್ಡ್‌ಗಳಲ್ಲಿ ನಮಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ ಎಂದು ಕೆಲ ಯುವ ಕಾಂಗ್ರೆಸ್‌‍ ಕಾರ್ಯಕರ್ತರು ಪಟ್ಟು ಹಿಡಿದ ಪರಿಣಾಮ ಆಡಳಿತ ಪಕ್ಷಕ್ಕೆ ಅನುಕೂಲವಾಗುವಂತೆ ಕೆಲವು ವಾರ್ಡ್‌ಗಳ ಮೀಸಲಾತಿಯನ್ನು ಬದಲಾಯಿಸಲಾಗಿದೆ ಎನ್ನಲಾಗಿದೆ.

ಕಾಮಾಕ್ಷಿಪಾಳ್ಯ ವಾರ್ಡ್‌ನಲ್ಲಿ ಸಾಮಾನ್ಯ ಮೀಸಲಾತಿ ಬದಲಿಗೆ ಬಿಸಿಎಂಗೆ ಅವಕಾಶ ನೀಡಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಮೃತ ರಾಕೇಶ್‌ ಅವರ ಸ್ನೇಹಿತ ಸುಧಾಕರ್‌ ಎಂಬುವರು ಪಟ್ಟು ಹಿಡಿದಿದ್ದರು, ಅದೇ ರೀತಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವಾರ್ಡ್‌ ಆಗಿದ್ದ ಕೆಂಗಲ್‌ ವಾರ್ಡ್‌ ಅನ್ನು ಬಿಸಿಎಂ-2 ಗೆ ಮೀಸಲಿಡಬೇಕು. ಆ ವಾರ್ಡ್‌ನಲ್ಲಿ ನನ್ನ ಪುತ್ರನಿಗೆ ಟಿಕೆಟ್‌ ನೀಡಬೇಕು ಎಂದು ಮಾಜಿ ಸಚಿವ ಎಚ್‌.ಎಂ. ರೇವಣ್ಣ ಪಟ್ಟು ಹಿಡಿದಿದ್ದರು.

ಆದರೆ, ಬಿಜೆಪಿಯಿಂದ ಗೆದ್ದು ಕಾಂಗ್ರೆಸ್‌‍ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್‌‍.ಟಿ.ಸೋಮಶೇಖರ್‌ ಅವರು ಯಾವುದೇ ಕಾರಣಕ್ಕೂ ನಮ ಕ್ಷೇತ್ರದ ಮೀಸಲಾತಿ ಬದಲಿಸಬಾರದು ಎಂದು ಪಟ್ಟು ಹಿಡಿದಿದ್ದರು.ಅದೇ ರೀತಿ ಇನ್ನುಳಿದ ಕೆಲವು ವಾರ್ಡ್‌ಗಳಲ್ಲೂ ಮೀಸಲು ಬದಲಿಗೆ ಒತ್ತಡಗಳು ಹೆಚ್ಚಾಗಿದ್ದವು. ಈ ಎಲ್ಲ ಒತ್ತಡಗಳನ್ನು ಹೇಗೆ ನಿವಾರಿಸಲಾಗಿದೆ ಎನ್ನುವುದು ಅಂತಿಮ ಪಟ್ಟಿ ಹೊರಬಿದ್ದ ನಂತರವಷ್ಟೇ ಬಹಿರಂಗಗೊಳ್ಳಲಿದೆ.

ವಾರ್ಡ್‌ ವಿಂಗಡಣೆಯೂ ಸಿದ್ದ; ಅಂತಿಮ ಮೀಸಲಾತಿ ಪಟ್ಟಿ ಜೊತೆಗೆ ವಾರ್ಡ್‌ ಪುನರ್‌ವಿಂಗಡಣೆ ಪಟ್ಟಿಯೂ ಸಿದ್ದಗೊಂಡಿದ್ದು ಈ ಎರಡು ಪಟ್ಟಿಗಳನ್ನು ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡಲಿದೆ ಎಂದು ತಿಳಿದುಬಂದಿದೆ.ಒಂದು ಕಡೆ ಯಾವುದೇ ಪಕ್ಷಗಳಿಗೂ ಜಿಬಿಎ ಚುನಾವಣೆ ಬೇಕಿಲ್ಲದಿದ್ದರೂ ನ್ಯಾಯಾಲಯದ ಒತ್ತಡದಿಂದಾಗಿ ಚುನಾವಣಾ ಕಾರ್ಯಗಳನ್ನು ಮುಂದುವರೆಸಬೇಕಾಗಿದೆ.

ಈ ಕಾನೂನು ಒತ್ತಡಗಳ ನಡುವೇಯೂ ಏನಾದರೂ ಮಾಡಿ ಜಿಬಿಎ ಚುನಾವಣೆಗಳನ್ನು ಮುಂದೂಡಬೇಕು ಎಂಬ ಪ್ರಯತ್ನಗಳು ಮುಂದುವರೆದಿವೆ. ಆದರೆ, ಯಾವುದೇ ಕಾರಣಕ್ಕೂ ನ್ಯಾಯಲಯ ಅದಕ್ಕೆ ಅವಕಾಶ ನೀಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು ಎಲ್ಲ ಅಂದುಕೊಂಡಂತೆ ನಡೆದರೆ ಜೂನ್‌ ಇಲ್ಲವೇ ಜುಲೈ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂಬ ಆಶಾಭಾವನೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

RELATED ARTICLES

Latest News