ಬೆಂಗಳೂರು,ಮಾ.4- ಕೇತುಗ್ರಸ್ಥ ಚಂದ್ರಗ್ರಹಣ ಮೋಕ್ಷಗೊಂಡ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬಂದು ಪೂಜೆ ಸಲ್ಲಿಸಿದ್ದಾರೆ.ವರ್ಷದ ಮೊದಲ ಕೇತುಗ್ರಸ್ಥ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳ ದರ್ಶನದಲ್ಲಿ ಕೆಲ ಬದಲಾವಣೆ ಮಾಡಲಾಗಿತ್ತು.
ಗ್ರಹಣ ಮೋಕ್ಷದ ನಂತರ ದೇವಾಲಯವನ್ನು ಸ್ವಚ್ಛಗೊಳಿಸಿ ಪೂಜಾ ವಿಧಿವಿಧಾನಗಳು ನೆರವೇರಿದವು. ಇಂದು ಬೆಳಿಗ್ಗೆ ದೇವಾಲಯಗಳಿಗೆ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯಗಳು ಕಂಡುಬಂದವು.
ನಗರದ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ, ವಿಜಯನಗರದ ಶ್ರೀ ಶನಿಮಹಾತ ದೇವಾಲಯ, ಮಾರುತಿ ಮಂದಿರದ ಆಂಜನೇಯ ದೇವಸ್ಥಾನ ಸೇರಿದಂತೆ ಶೃಂಗೇರಿ, ಹೊರನಾಡು, ಧರ್ಮಸ್ಥಳ, ಕುಕ್ಕೆ ಸುಬ್ರಹಣ್ಯ, ಘಾಟಿ ಸುಬ್ರಹಣ್ಯ, ನಂಜನಗೂಡು, ಮೈಸೂರಿನ ಚಾಮುಂಡೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾಕಾರ್ಯಗಳು ಇಂದು ಬೆಳಿಗ್ಗೆ ನೆರವೇರಿದವು. ದೋಷವುಳ್ಳ ಭಕ್ತರು ದಾನ ನೀಡಿ ದೇವರ ಮೊರೆ ಹೋದರು.
ಕಳೆದ ರಾತ್ರಿ ಗ್ರಹಣ ಬಿಡುತ್ತಿದ್ದಂತೆ ಮನೆಯನ್ನು ಸ್ವಚ್ಛಗೊಳಿಸಿ ಪೂಜೆ ಮಾಡಿ ನಂತರ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ ದೃಶ್ಯಗಳು ಸರ್ವೆಸಾಮಾನ್ಯವಾಗಿತ್ತು.
