ಚಿಕ್ಕಮಗಳೂರು, ಮಾ.4- ಇರಾನ್ ಮತ್ತು ಇಸ್ರೇಲ್ ನಡುವಿನ ತೀವ್ರ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ದಾಳಿ, ಪ್ರತಿದಾಳಿಗಳು ಮುಂದುವರೆದಿದ್ದು, ಈ ನಡುವೆ ಬದುಕು ಕಟ್ಟಿಕೊಳ್ಳಲು ಇರಾನ್‌ಗೆ ತೆರಳಿದ್ದ ಕಾಫಿನಾಡಿನ ಯುವಕನೊಬ್ಬ ನಾಪತ್ತೆಯಾಗಿದ್ದು, ಪೋಷಕರು ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗಿ ಮೂಲದವನಾದ ನಿಶ್ಚಿತ್ ಕಳೆದ ಐದು ತಿಂಗಳ ಹಿಂದೆಯಷ್ಟೇ ಉದ್ಯೋಗನಿಮಿತ್ತ ಇರಾನ್‌ಗೆ ತೆರಳಿ ಮರ್ಚೆಂಟ್ ನೇವಿಯಲ್ಲಿ ವೃತ್ತಿ ಆರಂಭಿಸಿದ್ದ. ಪ್ರತಿದಿನ ಪೋಷಕರಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದ. ಈಗ ಯುದ್ಧದಿಂದ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾನೆ.
ಇದರಿಂದ ಆತಂಕಗೊಂಡ ಪೋಷಕರು ಮಗನ ಪತ್ತೆಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೊರೆ ಹೋಗಿದ್ದು, ಮಗನನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವಂತೆ ರಾಜ್ಯದ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರು, ಸಂಸದರಿಗೂ ಸಹ ನಿಶ್ಚಿತ್ ತಂದೆ ಮನವಿ ಮಾಡಿಕೊಂಡಿದ್ದಾರೆ.
ದೂರವಾಣಿ ಸಂಪರ್ಕಕ್ಕೆ ಸಿಗದ ನಿಶ್ಚಿತ್ ಯುದ್ಧದ ಸುಳಿಯಲ್ಲಿ ಸಿಲುಕಿರುವ ಭೀತಿ ಕುಟುಂಬದಲ್ಲಿ ಮನೆ ಮಾಡಿದೆ. ಕಳೆದ ನಾಲ್ಕೈದು ದಿನಗಳಿಂದ ನಿಶ್ಚಿತ್ ಅವರ ಮೊಬೈಲ್ ಕಡಿತಗೊಂಡಿದ್ದು, ಯುದ್ಧಪೀಡಿತ ಪ್ರದೇಶದಲ್ಲಿ ಅವರ ಸ್ಥಿತಿ ಏನಾಗಿದೆ, ಹೇಗಿದ್ದಾರೆ ಎಂಬ ಒಂದು ಮಾಹಿತಿಯೂ ತಿಳಿಯದಂತಾಗಿದೆ. ಮಗನ ಸುರಕ್ಷತೆಯ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಹಿರೇಕೊಡಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ಮಗನ ಧ್ವನಿ ಕೇಳದೆ ಪೋಷಕರು ದುಃಖದ ಮಡುವಿನಲ್ಲಿ ಮುಳುಗಿದ್ದು, ಕೂಡಲೇ ಕೇಂದ್ರ ಸರ್ಕಾರ ವಿದೇಶಾಂಗ ಇಲಾಖೆಯ ಮೂಲಕ ನಿಶ್ಚಿತ್ ಅವರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆತರಬೇಕೆಂದು ಪೋಷಕರು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.
