Tuesday, April 21, 2026
Homeರಾಜ್ಯಕೆಪಿಎಸ್‌‍ಸಿ ನೇಮಕಾತಿ ಪಟ್ಟಿ ಗೊಂದಲ : ಕೆಎಎಸ್‌‍ ಪರೀಕ್ಷೆಯಲ್ಲಿ ಅಕ್ರಮದ ವಾಸನೆ

ಕೆಪಿಎಸ್‌‍ಸಿ ನೇಮಕಾತಿ ಪಟ್ಟಿ ಗೊಂದಲ : ಕೆಎಎಸ್‌‍ ಪರೀಕ್ಷೆಯಲ್ಲಿ ಅಕ್ರಮದ ವಾಸನೆ

KPSC recruitment list confusion: Irregularities in KAS exam

ಬೆಂಗಳೂರು,ಮಾ.4- ಸದಾ ಒಂದಿಲ್ಲೊಂದು ವಿವಾದಗಳಿಂದಲೇ ರಾಜ್ಯಾದ್ಯಂತ ಮನೆ ಮಾತಾಗಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌‍ಸಿ) ಕೆಎಎಸ್‌‍ ನೇಮಕಾತಿಗೆ ನಡೆಸಿದ ಮುಖ್ಯ ಪರೀಕ್ಷೆಯಲ್ಲಿ ಅಕ್ರಮದ ವಾಸನೆ ಕಂಡುಬಂದಿದೆ.

ಆದರೆ ಕೆಪಿಎಸ್‌‍ಸಿ ಈ ಆರೋಪವನ್ನು ಸಾರಾಸಗಾಟಾಗಿ ತಳ್ಳಿ ಹಾಕಿದೆ.ಪರೀಕ್ಷೆ ಬರೆದಿದ್ದ ಅನೇಕ ವಿದ್ಯಾರ್ಥಿಗಳು ಕೆಎಎಸ್‌‍ ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ತಕ್ಷಣವೇ ಪ್ರಧಾನಿ ನರೇಂದ್ರಮೋದಿ ಅವರು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ನಿವೃತ್ತ ಐಪಿಎಸ್‌‍ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್‌ ರಾವ್‌ ಕೂಡ ವಿದ್ಯಾರ್ಥಿಗಳ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದು, ಕೆಪಿಎಸ್‌‍ಸಿ ಹಗರಣದ ಬಗ್ಗೆ ನಿರಂತರವಾಗಿ ಬರುತ್ತಿರುವ ಸುದ್ದಿಗಳು ಕಳವಳ ಎಂದಿದ್ದಾರೆ.

ಅಧಿಕಾರಿಗಳನ್ನು ನೇಮಿಸುವ ಜವಾಬ್ದಾರಿಯುತ ರಾಜ್ಯದ ಪ್ರಮುಖ ಸಂಸ್ಥೆಯೇ ವಂಚನೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪ ಎದುರಿಸಿದರೆ, ಸಾರ್ವಜನಿಕರು ಸಂಪೂರ್ಣವಾಗಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಜೊತೆಗೆ ಪದೇ ಪದೇ ನಡೆಯುತ್ತಿರುವ ಅಕ್ರಮಗಳು ಪರಿಶ್ರಮ ಮಾಡಿದ ವಿದ್ಯಾರ್ಥಿಗಳ ಕನಸುಗಳಿಗೆ ಕೊಳ್ಳಿ ಇಡುತ್ತಿವೆ ಎಂದು ಹೇಳಿದ್ದಾರೆ.ಇದು ಕೇವಲ ಆಡಳಿತ ದೋಷವಲ್ಲ. ವ್ಯವಸ್ಥೆಯಲ್ಲೇ ದೊಡ್ಡ ದೋಷಗಳಿವೆ. ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಪಾರದರ್ಶಕ ಮತ್ತು ಸುರಕ್ಷಿತ ವ್ಯವಸ್ಥೆ ತರಬೇಕು. ಯುಪಿಎಸ್‌‍ಸಿ ಮಾದರಿಯಲ್ಲಿ ತಂತ್ರಜ್ಞಾನ ಆಧಾರಿತ ಭದ್ರತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿದರೆ ಮಾತ್ರ ಭವಿಷ್ಯದಲ್ಲಿ ಇಂತಹ ಅಕ್ರಮಗಳು ಕಡಿಮೆಯಾಗುತ್ತವೆ. ಇಲ್ಲದಿದ್ದರೆ ಯುವಕರ ನಂಬಿಕೆ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಅಭ್ಯರ್ಥಿಗಳ ಆರೋಪವೇನು?:
ಕೆಪಿಎಸ್‌‍ಸಿ ನಡೆಸಿದ ಕೆಎಎಸ್‌‍ ಮುಖ್ಯ ಪರೀಕ್ಷೆಯ ವೇಳೆ ಒಂದೇ ರೂಂನಲ್ಲಿದ್ದ ಪರೀಕ್ಷೆ ಬರೆದ 15 ಮಂದಿ ಆಯ್ಕೆಯಾಗಿದ್ದಾರೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಇದು ಸಾಮಾನ್ಯ ವಿಷಯವಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಇನ್ನಷ್ಟು ವಿದ್ಯಾರ್ಥಿಗಳು, ನಾವು ಉತ್ತಮವಾಗಿ ಪರೀಕ್ಷೆ ಬರೆದಿದ್ದೇವೆ. ಆದರೆ ಆಯ್ಕೆ ಆಗಿಲ್ಲ. ಫಲಿತಾಂಶದಲ್ಲಿ ಏನೋ ಗೊಂದಲ ಇದೆ ಎಂದು ಹೇಳುತ್ತಿದ್ದಾರೆ.

ಒಂದೇ ಪರೀಕ್ಷಾ ಕೇಂದ್ರದ ಹಲವು ಅಭ್ಯರ್ಥಿಗಳು, ಒಂದೇ ಕುಟುಂಬದ ಕೆಲವರು ಆಯ್ಕೆ ಆಗಿರುವ ಬಗ್ಗೆ ಗಂಭೀರ ಆರೋಪ ಮಾಡಲಾಗಿದ್ದು, ಸಿಇಐ ತನಿಖೆಗೆ ಒತ್ತಾಯಿಸಿದ್ದಾರೆ.
2023-24ನೇ ಸಾಲಿನಲ್ಲಿ 384 ಗ್ರೂಪ್‌ ಎ ಮತ್ತು ಬಿ ಹುದ್ದೆಗಳ ನೇಮಕಕ್ಕೆ ಕೆಪಿಎಸ್‌‍ಸಿ ಫೆ.26ರಂದು ಅಧಿಸೂಚನೆ ಹೊರಡಿಸಿತ್ತು. ಮೊದಲಿಗೆ ಆಗಸ್ಟ್‌ 2024ರಲ್ಲಿ ನಡೆದ ಪ್ರಾಥಮಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಅನುವಾದದಲ್ಲಿ ಪ್ರಮಾದ ಉಂಟಾಗಿ ಸರ್ಕಾರ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ 2024ರ ಡಿ.29ಕ್ಕೆ ಮರು ಪರೀಕ್ಷೆ ನಡೆಸಿತ್ತು. ಆ ಪರೀಕ್ಷೆಯಲ್ಲೂ ಅನುವಾದದಲ್ಲಿ ಎಡವಟ್ಟುಗಳಾಗಿದ್ದವು.

ಬಳಿಕ 2025ರ ಮೇ 3, 5, 7 ಮತ್ತು 9ರಂದು ಮುಖ್ಯ ಪರೀಕ್ಷೆಗಳು ನಡೆದಿದ್ದವು. ಈಗ ಆಯೋಗ ಮುಖ್ಯ ಪರೀಕ್ಷಾ ಫಲಿತಾಂಶ ಪ್ರಕಟಿಸಿ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ ಮಾಡಿದೆ. ಸದ್ಯ ಈ ಆಯ್ಕೆ ಪಟ್ಟಿ ಸಾಕಷ್ಟು ಗೊಂದಲ ಉಂಟುಮಾಡಿದೆ. ಕರ್ನಾಟಕ ಲೋಕ ಸೇವಾ ಆಯೋಗದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳಿಗೆ ಸೀಟ್‌ ಕೊಡಿಸಲು ಕುತಂತ್ರ:
ಈ ಬಗ್ಗೆ ಅಖಿಲ ಭಾರತ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂತಕುಮಾರ ಅವರು ಮಾತನಾಡಿದ್ದು, ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ ಆಯ್ಕೆ ಆಗಿದ್ದಾರೆ. ಸೀರಿಯಲ್‌ ನಂಬರ್‌ ಸಾಲಾಗಿ ಆಯ್ಕೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.ಇನ್ನು ಒಂದೇ ಕುಟುಂಬದ ಇಬ್ಬರು-ಮೂವರು ಆಯ್ಕೆ ಆಗಿದ್ದಾರೆ. ಪ್ರಾಮಾಣಿಕವಾಗಿ ಓದಿದವರಿಗೆ ಕೆಲಸ ಸಿಗಬೇಕು. ಹೀಗಾಗಿ ಕಮಿಟಿ ರಚನೆ ಮಾಡಿ ತನಿಖೆ. ಸರ್ಕಾರದ ಕೈಲಿ ಆಗಲಿಲ್ಲ ಅಂದರೆ ಸಿಬಿಐಗೆ ವಹಿಸಿ. ಯಾವುದೇ ಕಾರಣಕ್ಕೂ ಕೆಪಿಎಸ್‌‍ಸಿಗೆ ನೋಟಿಫಿಕೇಶನ್‌ ಕೊಡಬಾರದು. ಪ್ರಭಾವಿಗಳ ಮಕ್ಕಳಿಗೆ ಸೀಟ್‌ ಕೊಡಿಸಲು ಕುತಂತ್ರ ನಡೆದಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ ಅಕ್ರಮ ಆರೋಪ ಹಿನ್ನೆಲೆ ಕೆಪಿಎಸ್‌‍ಸಿ ನೇಮಕಾತಿಯಲ್ಲಿ ಮಧ್ಯಪ್ರವೇಶಿಸಲು ಪ್ರಧಾನಿ ನರೇಂದ್ರ ಮೋದಿಗೆ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಎಕ್‌್ಸ ಖಾತೆಯಲ್ಲಿ ಕೆಎಎಸ್‌‍ ಫಲಿತಾಂಶದ ಪ್ರತಿ ಟ್ಯಾಗ್‌ ಮಾಡಿದ್ದು, ನಾವು ಉತ್ತಮವಾಗಿ ಪರೀಕ್ಷೆ ಬರೆದಿದರೂ ಆಯ್ಕೆಯಾಗಿಲ್ಲವೆಂದು ದೂರು ನೀಡಿದ್ದಾರೆ.

RELATED ARTICLES

Latest News