Tuesday, April 21, 2026
Homeರಾಜ್ಯಒಳ ಮೀಸಲಾತಿಯ ಗೊಂದಲ : ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಸುದೀರ್ಘ ವಿವರಣೆ ನೀಡಿದ ಸಚಿವ ಮಹದೇವಪ್ಪ

ಒಳ ಮೀಸಲಾತಿಯ ಗೊಂದಲ : ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಸುದೀರ್ಘ ವಿವರಣೆ ನೀಡಿದ ಸಚಿವ ಮಹದೇವಪ್ಪ

Internal reservation confusion: Minister Mahadevappa gives lengthy explanation to Mallikarjun Kharge

ಬೆಂಗಳೂರು, ಮಾ.4- ಒಳ ಮೀಸಲಾತಿಯ ಗೊಂದಲ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಸಚಿವರಾದ ಎಚ್‌.ಸಿ. ಮಹದೇವಪ್ಪ ಹಾಗೂ ಡಾ.ಜಿ.ಪರಮೇಶ್ವರ್‌ ಅವರು ಸುದೀರ್ಘ ವಿವರಣೆ ನೀಡಿದ್ದಾರೆ.ಇಂದು ಬೆಳಗ್ಗೆ ಇಬ್ಬರು ಸಚಿವರು ಖರ್ಗೆ ಅವರ ಮನೆಗೆ ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿದರು. ಒಳ ಮೀಸಲಾತಿ ವಿಚಾರ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಸುಮಾರು 30 ವರ್ಷಗಳಿಂದಲೂ ಎಡಗೈ ಸಮುದಾಯ ಒಳ ಮೀಸಲಾತಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿತ್ತು.

ಈ ಹಿಂದೆ ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿದ್ದ ವರದಿಯನ್ನು 2022ರಲ್ಲಿ ಬಿಜೆಪಿ ಸರ್ಕಾರ ತಿರಸ್ಕರಿಸಿತ್ತು. ಆದರೆ ಆಯೋಗದಲ್ಲಿ ಉಲ್ಲೇಖಿಸಲಾಗಿದ್ದ ಮಾದರಿಯಲ್ಲೇ ನಾಲ್ಕು ವರ್ಗೀಕರಣ ಮಾಡಿ ಮೀಸಲಾತಿಯನ್ನು ಹಂಚಿಕೆ ಮಾಡಲಾಗಿತ್ತು. ಜೊತೆಗೆ ಮೀಸಲಾತಿಯ ಪ್ರಮಾಣವನ್ನು ಶೇ. 15ರಿಂದ 17ಕ್ಕೆ ಹೆಚ್ಚಿಸಲಾಗಿತ್ತು. ರಾಜ್ಯಸರ್ಕಾರದ ಈ ನಿರ್ಧಾರ ಸಂವಿಧಾನದ ಷಡ್ಯೂಲ್‌ 9ಕ್ಕೆ ಸೇರ್ಪಡೆಯಾಗಿರಲಿಲ್ಲ. ಸಂಸತ್‌ನಲ್ಲೂ ಚರ್ಚೆಯಾಗಿರಲಿಲ್ಲ.

ಹೀಗಾಗಿ ಅದು ಊರ್ಜಿವಾಗುವ ಬಗ್ಗೆ ನಾನಾ ರೀತಿಯ ಅನುಮಾನಗಳಿದ್ದವು. ಈ ನಡುವೆ 2024ರ ಆಗಷ್‌್ಟ 1ರಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿ ಒಳ ಮೀಸಲಾತಿ ವರ್ಗೀಕರಣಕ್ಕೆ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿತ್ತು.
ಅದರ ಆಧಾರದ ಮೇಲೆ ಸಿದ್ದರಾಮಯ್ಯ ಸರ್ಕಾರ ಮೀಸಲಾತಿಯ ವರ್ಗೀಕರಣ ಪ್ರಕ್ರಿಯೆಗಳನ್ನು ಆರಂಭಿಸಿತ್ತು.

ನ್ಯಾಯಮೂರ್ತಿ ನಾಗಮೋಹನ್‌ ದಾಸ್‌‍ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿ ಸಮರ್ಪಕವಾದ ದತ್ತಾಂಶ ಸಂಗ್ರಹಣೆಗಾಗಿ ಮನೆ ಮನೆ ಸಮೀಕ್ಷೆ ನಡೆಸಿದೆ. ಆದರೆ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಅಂಕಿ ಅಂಶಗಳ ಬಗ್ಗೆಯೂ ಅನುಮಾನಗಳಿದ್ದು, ನಾಗಮೋಹನ್‌ ಅವರ ಆಯೋಗದ ಶಿಫಾರಸುಗಳ ಬಗ್ಗೆಯೂ ಬಲಗೈ ಸಮುದಾಯದಿಂದ ಆಕ್ಷೇಪಗಳು ವ್ಯಕ್ತವಾಗಿದ್ದವು. ಅದರ ನಡುವೆಯೇ ರಾಜ್ಯ ಸರ್ಕಾರ ಸಂಪುಟದಲ್ಲಿ ಚರ್ಚೆ ಮಾಡಿ ಮೀಸಲಾತಿ ವರ್ಗೀಕರಣಕ್ಕೆ ನಿರ್ಧಾರ ತೆಗೆದುಕೊಂಡಿತ್ತು.

ಆದರೆ ಅಲ್ಲಿ ಬಿಂದು ಮಾದರಿಯನ್ನು ನಿಗದಿ ಮಾಡುವ ವೇಳೆ ಶೋಷಿತರಿಗೆ ಅನ್ಯಾಯ ಮಾಡಲಾಗಿದೆ ಎಂಬ ಆಕ್ಷೇಪಗಳು ಕೇಳಿ ಬಂದಿವೆ. ಈ ಹಿಂದೆ ಬಸವರಾಜ ಬೊಮಾಯಿ ಸರ್ಕಾರ ಅನುಸರಿಸಿದ ಮಾನದಂಡಗಳನ್ನೇ ಪಾಲನೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಅವರ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ ರಾಜ್ಯಸರ್ಕಾರದ ನಿರ್ಧಾರಕ್ಕೆ ಬಲಗೈ ಸಮುದಾಯ ಹಾಗೂ ಇತರ ಶೋಷಿತ ಅಲೆಮಾರಿ ಜನಾಂಗಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಪ್ರತಿಭಟನೆ ಕಾವು ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಈ ನಡುವೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಲಕ್ಷಾಂತರ ಹುದ್ದೆಗಳಿಗೆ ನೇಮಕಾತಿ ಕೈಗೊಳ್ಳಬೇಕೆಂದು ಉದ್ಯೋಗ ಆಕಾಂಕ್ಷಿಗಳು ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಒತ್ತಡಕ್ಕೆ ಸಿಲುಕಿದ ರಾಜ್ಯ ಸರ್ಕಾರ ವಿವಾದಿತ ಒಳ ಮೀಸಲಾತಿಯನ್ನು ನೆನೆಗುದಿಯಲ್ಲಿಟ್ಟು 50 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡುವ ನಿರ್ಧಾರವನ್ನು ಸಂಪುಟದಲ್ಲಿ ತೆಗೆದುಕೊಂಡಿದೆ. ಇದಕ್ಕೆ ಎಡಗೈ ಸಮುದಾಯ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದೆ. ಶೇ. 15ರ ಪ್ರಮಾಣದಲ್ಲಿನ ಹಳೆಯ ಮೀಸಲಾತಿಯಲ್ಲೇ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿದರೂ ಕೂಡ ಅಲ್ಲಿಯೂ ಒಳ ಮೀಸಲಾತಿ ಜಾರಿಯಾಗಲೇಬೇಕೆಂದು ಪಟ್ಟು ಹಿಡಿದಿದೆ.

ಎಡಗೈ ಸಮುದಾಯದ ಪ್ರಭಾವಿ ಸಚಿವರಾಗಿರುವ ಕೆ.ಎಚ್‌.ಮುನಿಯಪ್ಪ ಅವರು ತಮದೇ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ಯಾಯವನ್ನು ಸರಿಪಡಿಸದೇ ಇದ್ದರೇ ತಾವು ಶಾಸಕ ಸ್ಥಾನ ಹಾಗೂ ಸಚಿವ ಸ್ಥಾನ ಎರಡಕ್ಕೂ ರಾಜಿನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದು ಕಾಂಗ್ರೆಸ್‌‍ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.

ಕಾಂಗ್ರೆಸ್‌‍ ಸರ್ಕಾರದಲ್ಲಿ ಬಲಗೈ ಸಮುದಾಯದ ಮೂವರು ಎಡಗೈ ಸಮುದಾಯದ ಇಬ್ಬರು ಸಚಿವರಿದ್ದಾರೆ. ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬಲಗೈ ಸಮುದಾಯವೇ ಪ್ರಬಲವಾಗಿರುತ್ತದೆ ಎಂಬ ಮಾತಿದೆ. ಬಿಜೆಪಿಯಲ್ಲಿ ಎಡಗೈ ಸಮುದಾಯದ ನಾಯಕರು ಪ್ರಬಲವಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌‍ ಪಕ್ಷಕ್ಕೆ ಬಲಗೈ ಸಮುದಾಯವೇ ಪ್ರಮುಖ ವೋಟ್‌ಬ್ಯಾಂಕ್‌ ಎಂದು ಬಿಂಬಿಸಲಾಗಿದೆ.

ಪ್ರಭಾವಿ ನಾಯಕರು ಕಾಂಗ್ರೆಸ್‌‍ನಲ್ಲಿರುವುದರಿಂದಾಗಿ ಒಳ ಮೀಸಲಾತಿಯ ಗೊಂದಲದ ಬಗ್ಗೆ ಧರ್ಮ ಸಂಕಟಕ್ಕೆ ಸಿಲುಕಿದಂತಾಗಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಮುನಿಯಪ್ಪ ಅವರ ಹೇಳಿಕೆ ಮತ್ತು ಸರ್ಕಾರದ ನಿಲುವುಗಳ ಬಗ್ಗೆ ಸಚಿವ ಮಹದೇವಪ್ಪ ಮತ್ತು ಪರಮೇಶ್ವರ ಅವರು ಮಲ್ಲಿಕಾರ್ಜು ಖರ್ಗೆ ಅವರಿಗೆ ವಿವರಣೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News