ಬೆಂಗಳೂರು,ಮಾ.4- ಕಳೆದ ಹಲವಾರು ದಿನಗಳಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕರ್ನಾಟಕದ ಚಿಲ್ಲರೆ ಮದ್ಯ ಮಾರಾಟಗಾರರ ಸಂಘವು ನಾಳೆ ಪ್ರತಿಭಟನೆ ನಡೆಸಲು ಮುಂದಾಗಿದೆ.
ಹೀಗಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಾರ್ ಅಂಗಡಿಗಳು ತೆರೆಯುವುದು ಅನುಮಾನವಾಗಿದೆ. ಬೆಳಗ್ಗೆ 11 ಗಂಟೆಯಿಂದ ನಗರದ ಫ್ರೀಡಂಪಾರ್ಕ್‌ನಲ್ಲಿ ಸಂಘದ ಪದಾಧಿಕಾರಿಗಳು ಸರ್ಕಾರದ ಗಮನಸೆಳೆಯಲು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು , ರಾಜ್ಯದ ಎಲ್ಲಾ ಜಿಲ್ಲಾ ತಾಲ್ಲೂಕು, ಹೋಬಳಿ ಮಟ್ಟದಿಂದಲೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ಮದ್ಯದ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸುವ ಕುರಿತು ಸಂಘವು ಸ್ಪಷ್ಟನೆ ನೀಡಿಲ್ಲ. ಆದರೆ ಬಾರ್ ಸೇರಿದಂತೆ ಎಲ್ಲಾ ಮದ್ಯ ಮಾರಾಟ ಕೇಂದ್ರಗಳನ್ನು ಮುಚ್ಚಿಯೇ ಪ್ರತಿಭಟನೆ ನಡೆಸಿ ಸರ್ಕಾರದ ಗಮನಸೆಳೆಯುವುದು ಅವರ ಉದ್ದೇಶವಾಗಿದೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಆಯವ್ಯಯ ಮಂಡಿಸಲಿದ್ದು, ಸಂಘದ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕೆಂಬುದು ಕರ್ನಾಟಕದ ಚಿಲ್ಲರೆ ಮದ್ಯ ಮಾರಾಟಗಾರ ಸಂಘದ ಒತ್ತಾಯವಾಗಿದೆ.
ಸರ್ಕಾರ ಮತ್ತು ಅಬಕಾರಿ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಂಘದ ಪದಾಧಿಕಾರಿಗಳು, ಇಲಾಖೆಯು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ 579 ಮದ್ಯ ಮಾರಾಟ ಸನ್ನದುಗಳನ್ನು (ಲೈಸೆನ್‌್ಸಗಳನ್ನು) ಹರಾಜು ಮಾಡಲು ಶಿಫಾರಸು ಮಾಡಿದೆ. ಇವುಗಳಲ್ಲಿ ಚಿಲ್ಲರೆ ಮದ್ಯದಂಗಡಿಗಳು (ಸಿಎಲ್-2), ಬಾರ್ ಮತ್ತು ರೆಸ್ಟೋರೆಂಟ್‌ಗಳು (ಸಿಎಲ್-9, ಸಿಎಲ್-11) ಸೇರಿವೆ. ಈ ಸನ್ನದುಗಳು ದೀರ್ಘಕಾಲದಿಂದ ನವೀಕರಣವಾಗದೆ ಅಥವಾ ಅಂಗಡಿಗಳು ತೆರೆಯದೇ ಇದ್ದರೂ, ಅವುಗಳನ್ನು ಹೊಸದಾಗಿ ಹರಾಜು ಹಾಕಿ ಹಣ ಸಂಗ್ರಹಿಸುವ ಯೋಜನೆ ಇದೆ ಎಂದು ಆರೋಪಿಸಿದ್ದಾರೆ.
ಮದ್ಯ ಮಾರಾಟಗಾರರ ಪ್ರಕಾರ, ಈ 579 ಸನ್ನದುಗಳು ಈಗಾಗಲೇ ಇರುವ ಮಾಲೀಕರಿಗೆ ಸೇರಿವೆ. ಅವುಗಳನ್ನು ಹರಾಜು ಮಾಡುವುದರಿಂದ ಹಳೆಯ ಮಾಲೀಕರಿಗೆ ದೊಡ್ಡ ನಷ್ಟವಾಗುತ್ತದೆ. ಇದಲ್ಲದೆ, ಇಲಾಖೆಯು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪಗಳು ಹಿಂದಿನಿಂದಲೂ ಇವೆ. ಹಲವು ಬಾರಿ ಸಂಘಟನೆಯು ಭ್ರಷ್ಟಾಚಾರ, ಲಂಚ, ಪೊಲೀಸ್ ಹಸ್ತಕ್ಷೇಪ ಮತ್ತು ಹೆಚ್ಚಿನ ಶುಲ್ಕದ ವಿರುದ್ಧ ಪ್ರತಿಭಟನೆ ನಡೆಸಿದೆ.
ಫೆಡರೇಷನ್ ಆಫ್ ವೈನ್ ಮಚೆರ್‌ಂಟ್ ಅಸೋಸಿಯೇಷನ್‌ನ ನಾಯಕರು ಈ ಹಿಂದೆಯೂ ಹಲವು ಬಾರಿ ಪ್ರತಿಭಟನೆ, ಬಂದ್ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದರು. ಕಳೆದ ವರ್ಷಗಳಲ್ಲಿ ಭ್ರಷ್ಟಾಚಾರದ ಆರೋಪಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಅಂಗಡಿಗಳನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಈಗ ಈ ಹರಾಜು ಯೋಜನೆಯಿಂದಾಗಿ ಮತ್ತೊಮೆ ಹೋರಾಟಕ್ಕೆ ಇಳಿದಿದ್ದಾರೆ.
ಅಬಕಾರಿ ಇಲಾಖೆಯ ಪ್ರಕಾರ, ಈ ಹರಾಜು ಸರ್ಕಾರದ ಆದಾಯ ಹೆಚ್ಚಿಸಲು ಮತ್ತು ಬಳಕೆಯಾಗದ ಸನ್ನದುಗಳನ್ನು ಪಾರದರ್ಶಕವಾಗಿ ಮರುನಿಯೋಜಿಸಲು ಮಾಡಲಾಗುತ್ತಿದೆ. ಇದರಿಂದ ಸುಮಾರು 1,000 ರಿಂದ 1,500 ಕೋಟಿ ರೂಪಾಯಿ ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಮಾರಾಟಗಾರರು ಇದನ್ನು ತಮ ವ್ಯಾಪಾರಕ್ಕೆ ಧಕ್ಕೆ ಎಂದು ಪರಿಗಣಿಸಿದ್ದಾರೆ.
ನಾಳೆಯ ಪ್ರತಿಭಟನೆಯಿಂದ ರಾಜ್ಯದಾದ್ಯಂತ ಮದ್ಯದಂಗಡಿಗಳ ಮೇಲೆ ಪರಿಣಾಮ ಬೀಳಬಹುದು. ಒಂದು ವೇಳೆ ಹೋರಾಟ ತೀವ್ರಗೊಂಡರೆ ಅಂಗಡಿಗಳ ಮುಷ್ಕರ ಅಥವಾ ಇತರ ಕ್ರಮಗಳು ಬರಬಹುದು. ಸರ್ಕಾರ ಈ ಬೇಡಿಕೆಗಳಿಗೆ ತ್ವರಿತ ಪ್ರತಿಕ್ರಿಯೆ ನೀಡಬೇಕು ಎಂಬ ಒತ್ತಡ ಹೆಚ್ಚಾಗಿದೆ.
