Monday, April 20, 2026
Homeರಾಷ್ಟ್ರೀಯಭಾರತಕ್ಕೆ ಅಗತ್ಯವಿರುವ ತೈಲ ಪೂರೈಸುವುದಾಗಿ ರಷ್ಯಾ ಭರವಸೆ

ಭಾರತಕ್ಕೆ ಅಗತ್ಯವಿರುವ ತೈಲ ಪೂರೈಸುವುದಾಗಿ ರಷ್ಯಾ ಭರವಸೆ

Putin says Russia ready to supply 'uninterrupted' fuel to India

ನವದೆಹಲಿ,ಮಾ.5- ಕಳೆದ ಆರು ದಿನಗಳಿಂದ ಅಮೇರಿಕಾ- ಇಸ್ರೇಲ್‌ ರಾಷ್ಟ್ರಗಳು ಇರಾನ್‌ ಮೇಲೆ ನಡೆಸುತ್ತಿರುವ ನಿರಂತರ ದಾಳಿಯಿಂದ ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಉದ್ವಿಗ್ನತೆ ಯಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಲ್ಲಿ ಭಾರತಕ್ಕೆ ಅಗತ್ಯವಿರುವ ಇಂಧನವನ್ನು ಪೂರೈಸಲು ಸಿದ್ಧವಿರುವುದಾಗಿ ರಷ್ಯಾ ಘೋಷಿಸಿದೆ.

ಹೊರ್ಮುಜ್‌ ಜಲಸಂಧಿಯ ಮೂಲಕ ನಡೆಯುವ ವ್ಯಾಪಾರಕ್ಕೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆ ಮಹತ್ವ ಪಡೆದುಕೊಂಡಿದೆ.ಮೂಲಗಳ ಪ್ರಕಾರ, ಭಾರತವು ಪ್ರಸ್ತುತ 50 ದಿನಗಳವರೆಗೆ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಪೆಟ್ರೋಲಿಯಂ
ಉತ್ಪನ್ನಗಳ ಒಟ್ಟು ದಾಸ್ತಾನನ್ನು ಹೊಂದಿದೆ. ಇದರಲ್ಲಿ 25 ದಿನಗಳ ಕಚ್ಚಾ ತೈಲ ಮತ್ತು 25 ದಿನಗಳ ಪೆಟ್ರೋಲಿಯಂ ಉತ್ಪನ್ನಗಳು ಸೇರಿವೆ. ಇದಲ್ಲದೆ, ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಅಧಿಕಾರಿಗಳು ಕಚ್ಚಾ ತೈಲ, ಎಲ್‌ ಪಿಜಿ ಮತ್ತು ಎಜಿ ಆಮದು ಮಾಡಿಕೊಳ್ಳಲು ಪರ್ಯಾಯ ದೇಶಗಳನ್ನು ಅನ್ವೇಷಿಸುತ್ತಿದ್ದಾರೆ.

ಕೊಲ್ಲಿಯಲ್ಲಿ ಬೆಳೆಯುತ್ತಿರುವ ಬಿಕ್ಕಟ್ಟು ಜಾಗತಿಕ ತೈಲ ಪೂರೈಕೆಯನ್ನು ಅಡ್ಡಿಪಡಿಸಿದರೆ ಭಾರತಕ್ಕೆ ಇಂಧನ ಪೂರೈಕೆಯಲ್ಲಿ ಸಹಾಯ ಮಾಡಲು ರಷ್ಯಾ ಸಿದ್ಧವಾಗಿದೆ ಎಂದು ಸೂಚಿಸಿದೆ. ಯಾವುದೇ ಬಿಕ್ಕಟ್ಟಿನಲ್ಲಿ ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ಸಿದ್ಧವಾಗಿದೆ ಎಂದು ರಷ್ಯಾ ಭಾರತಕ್ಕೆ ಭರವಸೆ ನೀಡಿದೆ.

ಭಾರತವು ತನಗೆ ಅಗತ್ಯ ಇರುವ ಕಚ್ಚಾ ತೈಲದ ಸುಮಾರು 88 ಪ್ರತಿಶತದಷ್ಟು ಪೆಟ್ರೋಲ್‌ ಮತ್ತು ಡೀಸೆಲ್‌ ನಂತಹ ಇಂಧನಗಳಿಗೆ ಕಚ್ಚಾ ವಸ್ತುವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಶೇ.50ಕ್ಕಿಂತ ಹೆಚ್ಚು ಮಧ್ಯಪ್ರಾಚ್ಯ ದೇಶಗಳಿಂದಲೇ ಭಾರತಕ್ಕೆ ಆಮದಾಗುತ್ತದೆ. ಇದು ಕಿರಿದಾದ ಹಾರ್ಮುಜ್‌ ಜಲಸಂಧಿಯ ಮೂಲಕವೇ ಭಾರತಕ್ಕೆ ಬರುತ್ತದೆ. ಆದರೆ ಇರಾನ್‌ ಮೇಲೆ ಇಸ್ರೇಲ್‌-ಅಮೆರಿಕ ಯುದ್ಧದ ಬಿಕ್ಕಟ್ಟಿನಿಂದಾಗಿ ಇರಾನ್‌ ಹಾರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡಿದೆ.

ಹೊರ್ಮುಜ್‌ ಜಲಸಂಧಿಯ ಮೇಲಿನ ಅವಲಂಬನೆ
ಭಾರತದ ಒಟ್ಟು ಕಚ್ಚಾತೈಲ ಮತ್ತು ಎಲ್‌ಪಿಜಿ ಆಮದಿನ ಅರ್ಧದಷ್ಟು ಭಾಗವು ಹೊರ್ಮುಜ್‌ ಜಲಸಂಧಿಯ ಮೂಲಕವೇ ಸಾಗುತ್ತದೆ. ಆದರೆ ಇತ್ತೀಚಿನ ಮಿಲಿಟರಿ ದಾಳಿಗಳು ಮತ್ತು ವಿಮಾ ಸೌಲಭ್ಯಗಳ ಹಿಂತೆಗೆತದಿಂದಾಗಿ ಈ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಪರ್ಯಾಯ ಮಾರ್ಗಗಳ ಮೂಲಕ ತೈಲ ಆಮದು ಮಾಡಿಕೊಳ್ಳಲು ಯೋಜಿಸುತ್ತಿದೆ.

ಈ ಹಿಂದೆ ಅಮೆರಿಕದೊಂದಿಗಿನ ಒಪ್ಪಂದದಂತೆ ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಲು ಭಾರತ ನಿರ್ಧರಿಸಿತ್ತು. ಆದರೆ ಈಗಿನ ಭೌಗೋಳಿಕ ರಾಜಕೀಯ ಬದಲಾವಣೆಗಳಿಂದಾಗಿ ಭಾರತವು ಮತ್ತೆ ರಷ್ಯಾದತ್ತ ಮುಖ ಮಾಡುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 80 ದಾಟಿದ್ದು, ಇದು ಭಾರತದ ಆಮದು ವೆಚ್ಚ ಮತ್ತು ಹಣದುಬ್ಬರದ ಮೇಲೆ ಪರಿಣಾಮ ಬೀರಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ನಿಂತ ಹಡಗುಗಳು :
ಈ ಹಡಗುಗಳು ಮುಖ್ಯವಾಗಿ ಪರ್ಷಿಯನ್‌ ಗಲ್‌್ಫ ಮತ್ತು ಗಲ್‌್ಫ ಆಫ್‌ ಓಮನ್‌ ಪ್ರದೇಶಗಳಲ್ಲಿ ನಿಂತಿವೆ. ಕೆಲವು ಹಡಗುಗಳು ಸರಕುಗಳನ್ನು ಲೋಡ್‌ ಮಾಡಲು ಕಾಯುತ್ತಿದ್ದರೆ, ಇನ್ನೂ ಕೆಲವು ಈಗಾಗಲೇ ಸಂಪೂರ್ಣವಾಗಿ ಸರಕುಗಳನ್ನು ತುಂಬಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಹಡಗುಗಳು ಮುಂದೆ ಸಾಗುವುದಕ್ಕೂ, ಹಿಂದಿರುಗುವುದಕ್ಕೂ ಸಂಕಷ್ಟ ಎದುರಿಸುತ್ತಿವೆ.
ಭಾರತದ ಸುಮಾರು 37 ಧ್ವಜ ಹಡಗುಗಳು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಹಡಗುಗಳು ಲೋಡ್‌ ಮಾಡಲು ಕಾಯುತ್ತಿದ್ದರೆ, ಇನ್ನೂ ಕೆಲವು ಲೋಡ್‌ ಸ್ಥಿತಿಯಲ್ಲಿವೆ. ಈ ಹಡಗುಗಳು ಹಾರ್ಮುಜ್‌ ಜಲಸಂಧಿಯ ಎರಡೂ ಬದಿಗಳಲ್ಲಿವೆ. ಅವುಗಳಲ್ಲಿ ಭಾರತೀಯ ನಾವಿಕರು ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಭಾರತೀಯ ಜೀವ, ಆಸ್ತಿ ಹಾಗೂ ದೇಶದ ಪೂರೈಕೆ ಸರಪಳಿಯನ್ನು ರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಹಾರ್ಮುಜ್‌ ಜಲಸಂಧಿ
ಹಾರ್ಮುಜ್‌ ಜಲಸಂಧಿ ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖ ಮಾರ್ಗವಾಗಿದೆ. ಜಗತ್ತಿನ ದೊಡ್ಡ ಪ್ರಮಾಣದ ಕಚ್ಚಾ ತೈಲ ಸಾಗಣೆ ಈ ಕಿರಿದಾದ ಜಲಮಾರ್ಗದ ಮೂಲಕವೇ ಸಾಗುತ್ತದೆ. ಭಾರತಕ್ಕೂ ಈ ಮಾರ್ಗ ಬಹಳ ಮುಖ್ಯವಾಗಿದೆ. ವರದಿಗಳ ಪ್ರಕಾರ, ಭಾರತದ ಒಟ್ಟು ಕಚ್ಚಾ ತೈಲ ಆಮದುಗಳಲ್ಲಿ ಸುಮಾರು 46 ಶೇಕಡಾ ಭಾಗ ಹಾರ್ಮುಜ್‌ ಜಲಸಂಧಿಯ ಮೂಲಕ ಸಾಗುವ ಹಡಗುಗಳ ಮೇಲೆ ಅವಲಂಬಿತವಾಗಿದೆ.

RELATED ARTICLES

Latest News