ಬೆಂಗಳೂರು,ಮಾ.6- ಮಹಿಳಾ ಸಬಲೀಕರಣದ ಸದುದ್ದೇಶದಿಂದ ಜಾರಿಗೆ ತರಲಾಗಿರುವ ಶಕ್ತಿ ಯೋಜನೆಯಡಿ ಇದುವರೆಗೆ 684 ಕೋಟಿ ಟ್ರಿಪ್‌ಗಳಲ್ಲಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕಾಗಿ 5,300 ಕೋಟಿ ರೂ. ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ವಿಧಾನಸಭೆಯಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡಿಸಿದ ಅವರು, ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ 2021 ರ ಜ.1 ರಿಂದ 2023ರ ಫೆ.28ರವರೆಗಿನ ವೇತನ ಬಾಕಿಯನ್ನು ಪಾವತಿಸಲು 2025ರ ಏ.1 ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಿಸಲು ನಿಶ್ಚಯಿಸಿದ್ದು, ವೇತನ ಬಾಕಿ ಪಾವತಿಗೆ 1271 ಕೋಟಿ ರೂ. ಒದಗಿಸುವುದಾಗಿ ಹೇಳಿದರು.
4 ಸಾವಿರ ಎಲೆಕ್ಟ್ರಿಕ್ ಬಸ್ಸು :
2026-27ನೇ ಸಾಲಿನಲ್ಲಿ 1,000 ಡೀಸೆಲ್ ಬಸ್ಸುಗಳನ್ನು ಸಾರಿಗೆ ನಿಗಮಗಳಿಗೆ ಒದಗಿಸಲಾಗುವುದು. ವಿಶ್ವಬ್ಯಾಂಕ್ ನೆರವಿನೊಂದಿಗೆ 2000 ಕೋಟಿ ರೂ.ಗಳ ಮೊತ್ತದ ಕರ್ನಾಟಕ ಎಲೆಕ್ಟ್ರಿಕ್ ಬಸ್ ಪ್ರೋಗ್ರಾಂ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಬಿಎಂಟಿಸಿಯ 32 ಹಾಗೂ ಇತರ ರಸ್ತೆ ಸಾರಿಗೆ ನಿಗಮಗಳ 62 ಎಲೆಕ್ಟ್ರಿಕ್ ಬಸ್ ಡಿಪೋಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ 4 ಸಾವಿರ ವಿದ್ಯುತ್ ಚಾಲಿತ ಬಸ್ಸುಗಳನ್ನು ಒದಗಿಸಲಾಗುವುದು ಎಂದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಅಪಘಾತ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಐಐಟಿ ಮದ್ರಾಸ್ ಮತ್ತು ಎನ್‌ಐಸಿ ಅವರ ಸಹಯೋಗದೊಂದಿಗೆ ಡ್ಯಾಶ್‌ಬೋರ್ಡ್ ಒಳಗೊಂಡ ಆಧುನಿಕ ತಂತ್ರಾಂಶವನ್ನು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
10 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ಹೊಂದಿರುವ 25 ಪ್ರಾದೇಶಿಕ ಸಾರಿಗೆ ಕಚೇರಿಗಳ, ಡ್ರೈವಿಂಗ್ ಟ್ರ್ಯಾಕ್‌ಗಳು ಮತ್ತು ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಷನ್ ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೋಲಾರ್ ಅಳವಡಿಸಲು ಯೋಜನೆ ಜಾರಿಗೊಳಿಸಲಾಗುವುದು. ತುಮಕೂರಿನಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಸೀಜಿಂಗ್ ಯಾರ್ಡ್ ಅನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.ರಾಮದುರ್ಗ, ಹೊನ್ನಾಳಿ ಮತ್ತು ಗದಗದಲ್ಲಿ ನೂತನ ಬಸ್ಸು ನಿಲ್ದಾಣ ಹಾಗೂ ತರೀಕೆರೆ ಬಸ್ ಡಿಪೋವನ್ನು ನಿರ್ಮಿಸುವುದಾಗಿ ಪ್ರಕಟಿಸಿದರು.
