ಬೆಂಗಳೂರು,ಮಾ.6- ರೌಡಿಸಂ ಹಾಗೂ ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಜೊತೆಗೆ ಪ್ರಮುಖವಾಗಿ ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ಸಿಂಗ್ ಹೇಳಿದರು.ಮೈಸೂರು ರಸ್ತೆಯ ಸಿಎಆರ್ ಕೇಂದ್ರ ಸ್ಥಾನ ಕವಾಯತು ಮೈದಾನದಲ್ಲಿಂದು ಹಮಿಕೊಂಡಿದ್ದ ಮಾಸಿಕ ಕವಾಯತಿನಲ್ಲಿ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಂಚಾರ ವಿಭಾಗ, ಸೈಬರ್ಕ್ರೈಂ, ವಾಹನ ಚಾಲನೆ, ಕಮಾಂಡಿಂಗ್ ಹೀಗೆ ಎಲ್ಲಾ ವಿಭಾಗಗಳಲ್ಲೂ ಮಹಿಳಾ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಹಿಳಾ ಮೀಸಲಾತಿಯನ್ನು ಶೇ.33 ರಷ್ಟು ಏರಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸರ್ಕಾರದ ಜೊತೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಇತ್ತೀಚೆಗೆ ಸೈಬರ್ಕ್ರೈಂಗಳು ಹೆಚ್ಚಾಗುತ್ತಿವೆ. ತಾಂತ್ರಿಕ ವಿಧಾನದಲ್ಲಿ ನಾವು ಸೈಬರ್ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುತ್ತಿದ್ದೇವೆ, ಮಹಿಳಾ ಸಿಬ್ಬಂದಿ ಸೈಬರ್ಕ್ರೈಂನಲ್ಲಿ ತರಬೇತಿ ಪಡೆದು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ರಾಣಿ ಚೆನ್ನಮ ಪಡೆ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರು.
ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಉತ್ತಮವಾಗಿ ಪ್ರದರ್ಶನ ನೀಡುವ ಮೂಲಕ ನಾವು ಯಾವುದಕ್ಕೂ ಕಮಿಯಿಲ್ಲ ಎಂಬುವುದನ್ನು ಸಾಬೀತು ಮಾಡಿದ್ದಾರೆಂದು ಮಹಿಳಾ ಸಿಬ್ಬಂದಿಯನ್ನು ಅಭಿನಂದಿಸಿದರು.ಮಹಿಳಾ ಸಿಬ್ಬಂದಿಗೆ ಸರ್ಕಾರದ ವತಿಯಿಂದ ಸಿಗುವಂತಹ ಸೌಲಭ್ಯ ಗಳನ್ನು ನಾವು ಪ್ರಮಾಣಿಕವಾಗಿ ಒದಗಿಸಿಕೊಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
