ಬೆಂಗಳೂರು: ಮಹಿಳೆಯರು ವಯಸ್ಸಾದ ಕಾಲದಲ್ಲೂ ಆರೋಗ್ಯವಾಗಿರಲು ನಿದ್ರೆ, ವ್ಯಾಯಾಮ, ಪೌಷ್ಟಿಕಾಂಶ ಆಹಾರ ಮತ್ತು ವಿಶ್ರಾಂತಿ ಎಂಬ ನಾಲ್ಕು ಪ್ರಮುಖ ಅಂಶಗಳ ನಿರಂತರವಾಗಿ ಪಾಲಿಸಬೇಕು ಎಂದು ಎರ್ಗೋನಾಮಿಕ್ಸ್ ತಜ್ಞೆ ಭಾರತಿ ಜಾಜೂ ಕಿವಿಮಾತು ಹೇಳಿದರು.
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ “ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆ” ನಿಮ್ಹಾನ್ಸ್‌ನಲ್ಲಿ ಆಯೋಜಿಸಿದ್ದ “ಮೂರನೇ ವಿಮೆನ್ ವೆಲ್‌ನೆಸ್ ಸಮ್ಮಿಟ್‌ನಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯು ತನ್ನ ಕುಟುಂಬ ನಿರ್ವಹಣೆಯ ಒತ್ತಡದಲ್ಲಿ ತನ್ನ ಆರೋಗ್ಯವನ್ನೇ ಸಂಪೂರ್ಣ ಕಡೆಗಣಿಸಿರುತ್ತಾರೆ. ಇದರಿಂ ವಯಸ್ಸಾದಂತೆ ಸ್ಥೂಲಕಾಯ, ಮಧುಮೇಹ ಸೇರಿದಂತೆ ಹಲವು ಕಾಯಿಲೆ ತಂದುಕೊಳ್ಳುತ್ತಾರೆ. ಮಹಿಳೆ ತನ್ನ ಕುಟುಂಬದವರ ಆರೋಗ್ಯ ಜೊತೆಗೆ, ತನ್ನ ಆರೋಗ್ಯಕ್ಕೂ ಮೊದಲ ಆಧ್ಯತೆ ನೀಡಬೇಕು. ನಿದ್ರೆ, ದೈಹಿಕ ಚಲನೆ, ಪೌಷ್ಟಿಕಾಂಶ ಮತ್ತು ವಿಶ್ರಾಂತಿ ಎಂಬ ನಾಲ್ಕು ಪ್ರಮುಖ ಅಂಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ಎಷ್ಟೇ ಕೆಲಸದ ಒತ್ತಡವಿದ್ದರೂ ಈ ನಾಲ್ಕು ಅಂಶಗಳನ್ನು ಪ್ರತಿನಿತ್ಯವೂ ಪಾಲಿಸಬೇಕು, ಈ ನಿರಂತರ ಪಾಲಿಕೆಯಿಂದ ತನ್ನ ಆರೋಗ್ಯ ಯಾವ ವಯಸ್ಸಿನಲ್ಲೂ ಉತ್ತಮವಾಗಿರಲು ಸಾಧ್ಯ ಎಂದು ಹೇಳಿದರು. ಇನ್ನು, ಕೆಲಸಕ್ಕೆ ತೆರಳುವ ಮಹಿಳೆಯರು ಸಹ ಆರೋಗ್ಯದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಕೆಲಸದ ಸಮಯದಲ್ಲಿ ತಾವು ಕುಳಿತುಕೊಳ್ಳುವ ಭಂಗಿಯಿಂದಲೂ ಸಾಕಷ್ಟು ಮಹಿಳೆಯರು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಉದ್ಯೋಗಸ್ಥ ಮಹಿಳೆಯರು ಸಹ ತಮ್ಮ ಕೆಲಸದ ಸಮಯದಲ್ಲಿ ಕುಳಿತುಕೊಳ್ಳುವ ಭಂಗಿ,ಊಟದ ನಂತರದ ವಾಕಿಂಗ್, ಕೆಲಸದ ಬಳಿಕ ವ್ಯಾಯಾಮ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಹೀಗೆ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಈ ವಿಶ್ವ ಮಹಿಳಾ ದಿನಾಚರಣೆಯಿಂದಲೇ ತಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸುವ ಜಪತ ಮಾಡಿ, ನಮ್ಮ ಆರೋಗ್ಯ ಸುಧಾರಿಸಿದಾಗ ಮಾತ್ರವೇ ನಮ್ಮ ಇಡೀ ಕುಟುಂಬ ನೆಮ್ಮದಿಯಿಂದ ಇರಲು ಸಾಧ್ಯ ಎಂದರು. ಈ ಸಮ್ಮಿಟ್‌ನಲ್ಲಿ ಮಹಿಳೆಯರಿಗೆ ದೈಹಿಕ ಆರೋಗ್ಯ ತಪಾಸಣಾ ಬೂತ್ ಏರ್ಪಡಿಸಲಾಗಿತ್ತು. ಶೇ.70ರಷ್ಟು ಮಹಿಳೆಯರು ಈ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು. ದೈಹಿಕ ಭಂಗಿ, ಸಮತೋಲನ, ಪೆಲ್ವಿಕ್ ಸ್ಟ್ರೆಂಥ್, ಫ್ಲೆಕ್ಸಿಬಿಲಿಟಿ ಮತ್ತು ಮೂಳೆ ಆರೋಗ್ಯದಂತಹ ಅಂಶಗಳನ್ನು ಮೌಲ್ಯಮಾಪನ ಮಾಡಲಾಯಿತು.
ಭಾಗವಹಿಸಿದ ಪ್ರತಿಯೊಬ್ಬರಿಗೂ ಅವರ ವೈಯಕ್ತಿಕ ಸ್ಕೋರ್‌ಗಳ ಆಧಾರದಲ್ಲಿ ಅರ್ಹ ಫಿಸಿಯೋಥೆರಪಿಸ್ಟ್‌ಗಳಿಂದ ವೈಯಕ್ತಿಕ ವೈದ್ಯಕೀಯ ಶಿಫಾರಸುಗಳನ್ನು ಪಡೆದರು. ಜೊತೆಗೆ, ಮಹಿಳೆಯರ ಆರೋಗ್ಯದ ಕುರಿತು ಇಡೀ ದಿನ ಕಾರ್ಯಾಗಾರ ಆಯೋಜಿಸಲಾಗಿತ್ತು.
ಸಮ್ಮಿಟ್‌ನಲ್ಲಿ ಹ್ಯಾಪಿಯೆಸ್ಟ್ ಹೆಲ್ತ್‌ನ ಮುಖ್ಯ ಆದಾಯ ಅಧಿಕಾರಿ ಟೀನಾ ಮಿತ್ರಾ, ವೆಲ್‌ನೆಸ್ ಪ್ರಾಕ್ಟೀಸಸ್‌ನ ಚೀಫ್ ಸಕ್ಸಸ್ ಮ್ಯಾನೇಜರ್ ಡಾ. ಶರೋನ್ ರಾಜ್‌ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
