ಬೆಂಗಳೂರು, ಮಾ.10- ನಾಳೆಯಿಂದ ಸರ್ಕಾರಿ ವೈದ್ಯರು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಓಪಿಡಿ ಸೇವೆಗಳು ಬಂದ್ ಆಗುವ ಸಾಧ್ಯತೆ ಇರುವುದರಿಂದ ಸಾಮಾನ್ಯ ರೋಗಗಳಿಗೆ ಗುರಿಯಾಗುವ ರೋಗಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.
ಹಲ್ಲು ನೋವು, ಜ್ವರ, ಸ್ಕಿನ್ ಅಲರ್ಜಿ ಸೇರಿದಂತೆ ಸಾಮಾನ್ಯ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಚಿಕಿತ್ಸೆ ಸಿಗದೆ ಪರದಾಡಬೇಕಾಗುತ್ತದೆ.ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಸರ್ಕಾರಿ ಆಸ್ಪತ್ರೆಗಳ ಓಪಿಡಿ ಸೇವೆಗಳು ಸ್ಥಗಿತಗೊಳ್ಳುವ ಆತಂಕ ವ್ಯಕ್ತವಾಗಿದೆ.ರಾಜ್ಯಾದ್ಯಂತ, ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಲಿದೆ.
ವೈದ್ಯರು 15 ಪ್ರಮುಖ ಬೇಡಿಕೆಗಳು ಮುಂದಿಟ್ಟು ಹೋರಾಟಕ್ಕೆ ಮುಂದಾಗಿದ್ದಾರೆ.ಹಲವು ವರ್ಷಗಳಿಂದ ಬಾಕಿ ಉಳಿದಿರುವ ವೃಂದ ಹಾಗೂ ನೇಮಕಾತಿ ಸಮಸ್ಯೆಗಳನ್ನು ಪರಿಹರಿಸುವಂತೆ ಅವರು ಒತ್ತಾಯಿಸಿದ್ದಾರೆ. ಜೊತೆಗೆ13 ವರ್ಷಗಳಿಂದ ಪರಿಷ್ಕರಣೆ ಆಗದ ವೈದ್ಯರ ಜೇಷ್ಠತಾ ಪಟ್ಟಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ, ವೈದ್ಯಕೀಯ ಸಿಬ್ಬಂದಿ ಕೊರತೆ ಸೇರಿದಂತೆ ಇನ್ನಿತರ 15 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಒತ್ತಾಯಿಸಿದ್ದಾರೆ.
ಈ ಸಮಸ್ಯೆಗಳ ಪರಿಹಾರಕ್ಕಾಗಿ ಆರೋಗ್ಯ ಇಲಾಖೆ ಇದುವರೆಗೆ ಒಟ್ಟು 7 ಸಭೆಗಳನ್ನು ನಡೆಸಿದೆ. ಆದರೆ ಯಾವುದೇ ಸ್ಪಷ್ಟ ಲಿಖಿತ ಭರವಸೆ ದೊರೆಯದ ಹಿನ್ನೆಲೆಯಲ್ಲಿ ವೈದ್ಯರು ಮುಷ್ಕರಕ್ಕೆ ಇಳಿಯಲು ತೀರ್ಮಾನಿಸಿದ್ದಾರೆ.
ಹಂತ ಹಂತವಾಗಿ ಮುಷ್ಕರ; ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ರವೀಂದ್ರನಾಥ್ ಮೇಟಿ ನೇತೃತ್ವದಲ್ಲಿ ವೈದ್ಯರು ಇಂದು ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತಾನಾಡಿ ಸರ್ಕಾರಕ್ಕೆ ಹಲವು ಬಾರಿ ಮನವಿ ಕೊಟ್ಟಿದಿವಿ.ಅದರೆ ಎನ್ನು ಪ್ರಯೋಜನ ಅಗಿಲ್ಲ.ಹೀಗಾಗಿ ಅನಿರ್ವಾರ್ಯವಾಗಿ ಪ್ರತಿಭಟನೆ ಹಾದಿ ಹಿಡಿಯಬೇಕಿದೆ ಎಂದಿದ್ದಾರೆ.
ಮುಷ್ಕರದ ವೇಳಾಪಟ್ಟಿ ಹೀಗಿದೆ: ನಾಳೆ ವೈದ್ಯರು ಹಾಗೂ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಓಪಿಡಿ ಸೇವೆ ಸ್ಥಗಿತ ಮಾಡಲಿದ್ದಾರೆ.ಮಾರ್ಚ್ 16 ರಿಂದ ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಲು ತೀರ್ಮಾನಿಸಿದ್ದಾರೆ.
ಬಡ ರೋಗಿಗಳಿಗೆ ಆತಂಕ; ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿತವಾಗಿರುವ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ವೈದ್ಯರ ಮುಷ್ಕರ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಆರೋಗ್ಯ ಸೇವೆಗಳು ಅಸ್ತವ್ಯಸ್ತವಾಗುವ ಭೀತಿ ವ್ಯಕ್ತವಾಗಿದ್ದು, ಸರ್ಕಾರ ಮತ್ತು ವೈದ್ಯರ ನಡುವೆ ಶೀಘ್ರ ಪರಿಹಾರ ಕಂಡುಬರಬೇಕೆಂಬ ಒತ್ತಾಯ ಕೇಳಿಬರುತ್ತಿದೆ.ರಾಜ್ಯದಲ್ಲಿ ದೊಡ್ಡ ಮಟ್ಟದ ಮುಷ್ಕರಕ್ಕೆ ಸರ್ಕಾರಿ ವೈದ್ಯರು ಸಜ್ಜಾಗಿದ್ದು, ಇದರ ನೇರ ಪರಿಣಾಮ ಬಡ ರೋಗಿಗಳ ಮೇಲೆಯೇ ಬೀಳುವ ಸಾಧ್ಯತೆ ಇದೆ.
