ನವದೆಹಲಿ, ಮಾ.10- ತವರು ನೆಲದಲ್ಲಿ ಟಿ-20 ವಿಶ್ವಕಪ್ ಮುಕುಟ ಗೆದ್ದು ಸಂಭ್ರಮಿಸಿದ ವಿಶ್ವದ ಮೊದಲ ತಂಡವೆನಿಸಿಕೊಂಡ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ 131 ಕೋಟಿ ರೂ.ಗಳ ಭರ್ಜರಿ ಬಹುಮಾನ ಘೋಷಿಸಿದೆ.
2024ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಅಮೆರಿಕಾದ ಜಂಟಿ ಆತಿಥ್ಯದಲ್ಲಿ ಜರುಗಿದ್ದ ಟಿ-20 ವಿಶ್ವಕಪ್ ವಿಜೇತ ತಂಡಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)125 ಕೋಟಿ ರೂ. ಬಹುಮಾನ ನೀಡಿತ್ತು.
ಸೂರ್ಯಕುಮಾರ್ ಯಾದವ್ ಸಾರಥ್ಯದಲ್ಲಿ ತವರು ನೆಲದಲ್ಲಿ ಟ್ರೋಫಿಯನ್ನು ಉಳಿಸಿಕೊಂಡ ಆಟಗಾರರಿಗೆ ವಿಶ್ವದ ಕ್ರಿಕೆಟ್ ಮಂಡಳಿಯ ದೊಡ್ಡಣ್ಣ ಎಷ್ಟು ಬಹುಮಾನ ಘೋಷಿಸಬಹುದು ಎಂಬ ಕುತೂಹಲ ಎಲ್ಲರಲ್ಲೂ ಕೆರಳಿತ್ತು.
ಅಹಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಮಾ.8ರಂದು ನಡೆದ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವು ಕಿವೀಸ್ ವಿರುದ್ಧ 96 ರನ್ ಗಳ ಭರ್ಜರಿ ಗೆಲುವು ಸಾಧಿಸಿತ್ತು. ಪಂದ್ಯದಲ್ಲಿ ಟೀಮ್ ಇಂಡಿಯಾದ ಟಾಪ್ 3 ಆಟಗಾರರಾದ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಅವರು ಆಕರ್ಷಕ ಅರ್ಧಶತಕ ಸಿಡಿಸಿರುವುದು ದಾಖಲೆಯಾಗಿದೆ.
ಕಳೆದ ವರ್ಷ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್ ಮುಕುಟ ಗೆದ್ದ ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಭಾರತ ತಂಡಕ್ಕೆ ಬಿಸಿಸಿಐ 51 ಕೋಟಿ ಬಹುಮಾನ ಘೋಷಿಸಿತ್ತು.
ಐಸಿಸಿ ಟ್ರೋಫಿಗೆ ಭಾರತವೇ ಸರದಾರ:
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟ್ರೋಫಿಗಳಿಗೆ ಭಾರತ ತಂಡವೇ ಅಧಿಪತಿಯಾಗಿದ್ದು, ಟಿ-20 ವಿಶ್ವಕಪ್ ಟೂರ್ನಿ ಅಲ್ಲದೆ, ಮಹಿಳಾ ಏಕದಿನ ವಿಶ್ವಕಪ್, ಅಂಡರ್-19 ಪುರುಷರ ಹಾಗೂ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲೂ ಚಾಂಪಿಯನ್‌ಪಟ್ ಅಲಂಕರಿಸಿದೆ.
