Thursday, April 30, 2026
Homeರಾಜ್ಯಇರಾನ್ ಯುದ್ಧದ ಎಫೆಕ್ಟ್ : ಗ್ಯಾಸ್ ಸಿಲಿಂಡರ್‌ ಅಭಾವದಿಂದ ಹೋಟೆಲ್‌ ಉದ್ಯಮ ಕಂಗಾಲು

ಇರಾನ್ ಯುದ್ಧದ ಎಫೆಕ್ಟ್ : ಗ್ಯಾಸ್ ಸಿಲಿಂಡರ್‌ ಅಭಾವದಿಂದ ಹೋಟೆಲ್‌ ಉದ್ಯಮ ಕಂಗಾಲು

Effect of Iran War: Hotel industry in trouble due to gas cylinder shortage

ಬೆಂಗಳೂರು,ಮಾ.10- ಮಧ್ಯಪ್ರಾಚ್ಯ ದೇಶ ಗಳಲ್ಲಿ ಮುಂದುವರಿದಿರುವ ಯುದ್ಧದ ಪರಿಣಾಮ ಇದೀಗ ಭಾರತದಲ್ಲಿಯೂ ಎಫೆಕ್ಟ್‌ ಕಾಣಿಸಿಕೊಳ್ಳಲು ಆರಂಭವಾಗಿದೆ. ಆ ಯುದ್ಧದ ಎಫೆಕ್ಟ್‌ನಿಂದ ನಗರದಲ್ಲೂ ಗ್ಯಾಸ್‌‍ ಕೊರತೆ ಉದ್ಭವಿಸಿರುವುದರಿಂದ ಇಲ್ಲಿನ ಹೋಟೆಲ್‌ಗಳು ಬಂದ್‌ ಆಗುವ ಸಾಧ್ಯತೆಗಳಿವೆ.

ಯುದ್ಧದ ಹಿನ್ನೆಲೆ ಇಂಧನ ಹಾಗೂ ಅನಿಲದ ಆಮದು-ರಫ್ತು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಇದರ ಪರಿಣಾಮವಾಗಿ ವಾಣಿಜ್ಯ ಗ್ಯಾಸ್‌‍ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ. ಕಳೆದ ಎರಡು-ಮೂರು ದಿನಗಳಿಂದ ಹೋಟೆಲ್‌ಗಳಿಗೆ ಸರಿ ಯಾದ ಪ್ರಮಾಣದಲ್ಲಿ ವಾಣಿಜ್ಯ ಗ್ಯಾಸ್‌‍ ಪೂರೈಕೆ ಆಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಹೋಟೆಲ್‌ ಉದ್ಯಮ ಸಂಪೂರ್ಣವಾಗಿ ಗ್ಯಾಸ್‌‍ ಮೇಲೆ ಅವಲಂಬಿತವಾಗಿರುವುದರಿಂದ ಟೀ, ಕಾಫಿ ಸೇರಿದಂತೆ ಆಹಾರ ತಯಾರಿಕೆಗೆ ಅಗತ್ಯವಾದ ಗ್ಯಾಸ್‌‍ ಕೊರತೆ ತೀವ್ರ ಸಮಸ್ಯೆಯಾಗುತ್ತಿದೆ. ಈಗಾಗಲೇ ಹಲವು ಹೋಟೆಲ್‌ಗಳಲ್ಲಿ ಇರುವ ಗ್ಯಾಸ್‌‍ ಸ್ಟಾಕ್‌ ಸಂಪೂರ್ಣವಾಗಿ ಖಾಲಿಯಾಗುವ ಹಂತಕ್ಕೆ ಬಂದಿದೆ. ಇಂದು ಕೂಡ ಗ್ಯಾಸ್‌‍ ಪೂರೈಕೆ ಆಗದಿದ್ದರೆ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಹೋಟೆಲ್‌ ಮಾಲೀಕರು ಎಚ್ಚರಿಕೆ ನೀಡಿದ್ದಾರೆ.

ಗ್ಯಾಸ್‌‍ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಹೋಟೆಲ್‌ ಉದ್ಯಮದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದ್ದು, ಪರಿಸ್ಥಿತಿ ಮುಂದುವರೆದರೆ ಸಾರ್ವಜನಿಕರಿಗೂ ಟೀ-ಕಾಫಿ ಸೇರಿದಂತೆ ಊಟ-ತಿಂಡಿ ಸೇವೆಗಳಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ಹೋಟೇಲ್‌ ಮಾಲೀಕರ ಸಂಘದ ಗೌರವ ಅಧ್ಯಕ್ಷ ಪಿ.ಸಿ.ರಾವ್‌ ಎಚ್ಚರಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಪಂಚತಾರಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಸೇರಿದಂತೆ 7 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಬಹುತೇಕ ಹೋಟೆಲ್‌ಗಳು ಗ್ಯಾಸ್‌‍ ಮೇಲೆಯೇ ಅವಲಂಬಿತವಾಗಿ ಅಡುಗೆ ಪದಾರ್ಥಗಳನ್ನು ತಯಾರಿಸುತ್ತವೆ. ಐಟಿ ಬಿಟಿ ಉದ್ಯಮಿಗಳು, ಖಾಸಗಿ ವಲಯದ ನೌಕರರು, ಲಕ್ಷಾಂತರ ಕಾರ್ಮಿಕರು ಹೋಟೆಲ್‌ ತಿಂಡಿ-ಊಟಗಳ ಮೇಲೆಯೇ ಅವಲಂಬಿತರಾಗಿದ್ದಾರೆ.

ಹೋಟೆಲ್‌ಗಳು ಬಂದ್‌ ಆದರೆ ಈ ಎಲ್ಲರ ಕೆಲಸಕ್ಕೆ ಹೊಡೆತ ಬೀಳುತ್ತದೆ. ಈಗಾಗಲೇ ಗ್ಯಾಸ್‌‍ ಸಿಲಿಂಡರ್‌ ಸಂಕಷ್ಟದ ಬಿಸಿ ತಟ್ಟತೊಡಗಿದೆ. ರಾಜ್ಯದ ವಿವಿಧೆಡೆ ನಗರ, ಪಟ್ಟಣ ಪ್ರದೇಶಗಳ ಹೋಟೆಲ್‌ ಮತ್ತಿತರ ಕಡೆ ಸಿಲಿಂಡರ್‌ ಇಲ್ಲದೆ ತಿಂಡಿ ಪದಾಥರ್ಗಳನ್ನು ತಯಾರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.ಗ್ಯಾಸ್‌‍ ಬಂದ್‌ ಆದರೆ ಹೋಟೆಲ್‌ಗಳಷ್ಟೇ ಅಲ್ಲ, ಮದುವೆ ಸೇರಿದಂತೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಗೊಂದಲಕ್ಕೆ ಸಿಲುಕಿರುವ ಹೋಟೆಲ್‌ ಉದ್ಯಮ
ಬೆಂಗಳೂರು, ಮಾ.10- ವಾಣಿಜ್ಯ ಸಿಲಿಂಡರ್‌ಗಳನ್ನು ಪೂರೈಸುವ ತೈಲ ಕಂಪನಿಗಳು ಯಾವುದೇ ವ್ಯತ್ಯಯ ಇಲ್ಲ ಎಂದು ಹೇಳುತ್ತಿವೆ. ಇತ್ತ ಹೋಟೆಲ್‌ ಮಾಲೀಕರು ಸಿಲಿಂಡರ್‌ಗಳು ಸಿಗುತ್ತಿಲ್ಲ ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.

ಮೂಲಗಳ ಪ್ರಕಾರ, ಹೊಟೇಲ್‌, ರೆಸ್ಟೋರೆಂಟ್‌ಗಳಿಗೆ ನೀಡಲಾಗುವ ವಾಣಿಜ್ಯ ಸಿಲಿಂಡರ್‌ಗಳನ್ನು ಮಿತವಾಗಿ ನೀಡಲು ಇಂಧನ ಸಚಿವಾಲಯ ಸೂಚನೆ ನೀಡಿದ್ದು, ಇದರಿಂದಾಗಿ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ತೈಲ ಕಂಪನಿಗಳಿಗೂ ಬಾಕಿ ಹಣ ಬರಬೇಕಿರುವ ಕಾರಣ ಈ ಅಭಾವದ ಪರಿಸ್ಥಿತಿಯ ಲಾಭ ಪಡೆದು ಗೊಂದಲ ಸೃಷ್ಟಿಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಬಾಕಿ ಹಣ ಪಾವತಿಸಿದರೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿಯೂ ಕೂಡ ತಿಳಿಸಲಾಗುತ್ತಿದ್ದು, ಬ್ಲಾಕ್‌ ಮಾರ್ಕೆಟ್‌ನಲ್ಲಿ ದುಬಾರಿ ಬೆಲೆಗೆ ಸಿಲಿಂಡರ್‌ಗಳ ಮಾರಾಟ ನಡೆಯುತ್ತಿದೆ ಎಂದು ದೂರಲಾಗಿದೆ.

ಇತ್ತ ಬೆಂಗಳೂರಿನ ಹೊಟೇಲ್‌ ಮಾಲೀಕರ ಸಂಘದ ಪಿ.ಸಿ.ರಾವ್‌ ಅವರು ಕೇಂದ್ರ ಸರ್ಕಾರ ನಮ ಬಳಿ 70 ದಿನಗಳಿಗಾಗುವಷ್ಟು ಸ್ಟಾಕ್‌ ಇದೆ ಎಂದು ಹೇಳುತ್ತಿದೆ. ಅದು ನಿಜವಾಗಿದ್ದರೆ ನಮಗೆ ಕೊಡಲು ವಿಳಂಬವೇಕೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸಿ ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಹಲವಾರು ಹೋಟೆಲ್‌ಗಳು ಶೇ.80ರಷ್ಟು ಎಲ್‌ಪಿಜಿಯನ್ನೇ ಅವಲಂಬಿಸಿದ್ದು, ಇದು ದೊರೆಯದಿದ್ದರೆ ಬಂದ್‌ ಮಾಡುವುದೇ ಲೇಸು ಎಂದು ಹೇಳಿದ್ದಾರೆ.

ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆತಿಥ್ಯ ವಲಯಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದರ ನಡುವೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಕೂಡಲೇ ಸಮಸ್ಯೆ ಬಗೆಹರಿಸುವತ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕೆಲವರು ಗೊಂದಲ ಸೃಷ್ಟಿಸಲು ಇಂತಹ ಕೃತ್ಯ ನಡೆಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಇನ್ನು ಬೆಂಗಳೂರಿನ ಕೆಲ ಭಾಗಗಳಲ್ಲಿ ಈಗ ವಾಣಿಜ್ಯ ಸಿಲಿಂಡರ್‌ಗಳ ಅಭಾವ ಕಾಣಿಸಿಕೊಂಡಿದ್ದರೆ ಮಿನಿ ಮುಂಬೈ ಹುಬ್ಬಳ್ಳಿಗೂ ಬಿಸಿ ತಟ್ಟಿದೆ.

ಹಲವಾರು ಸಣ್ಣ ಹಾಗೂ ದೊಡ್ಡ ಹೋಟೆಲ್‌ಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ ಸಿಗದಿದ್ದ ಕಾರಣ ಇಂದು ಸಂಜೆಯಿಂದಲೇ ಬಂದ್‌ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.ಕೆಲವೆಡೆ ವಿದ್ಯುತ್‌ ಸ್ಟವ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ, ತಿನಿಸುಗಳ ದರದಲ್ಲಿ ಕ್ರಮೇಣ ಹೆಚ್ಚಳ ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಾಣಿಜ್ಯ ಸಿಲಿಂಡರ್‌ಗಳ ಅಭಾವ ಸೃಷ್ಟಿಯಾಗುತ್ತಿದೆ.ಐದು ದಿನಗಳ ಹಿಂದೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 65ರೂ. ಹೆಚ್ಚಳ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಈ ಅಭಾವ ಸೃಷ್ಟಿಯಾಗಿರುವುದು ಆತಿಥ್ಯ ವಲಯದಲ್ಲಿ ಆತಂಕ ಸೃಷ್ಟಿಸಿದೆ.

RELATED ARTICLES

Latest News